More

    ಸೋಂಕಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ, ಐದು ರುದ್ರಭೂಮಿಗಳಿಂದ ವಿರೋಧ

    ಮಂಗಳೂರು/ಬಂಟ್ವಾಳ: ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಂಟ್ವಾಳ ಮೂಲದ 78 ವರ್ಷದ ಕರೊನಾ ಸೋಂಕಿತ ವೃದ್ಧೆಯ ಶವ ಸಂಸ್ಕಾರಕ್ಕೆ ನಗರ ಆಸುಪಾಸಿನ ಐದು ಹಿಂದು ರುದ್ರಭೂಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಗುರುವಾರ ತಡರಾತ್ರಿವರೆಗೂ ಅಸಹಾಯಕವಾಗಿದ್ದ ಜಿಲ್ಲಾಡಳಿತ ಕೊನೆಗೆ ಬಿ.ಸಿ.ರೋಡ್‌ನ ಕೈಕುಂಜೆ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುವಲ್ಲಿ ಯಶಸ್ವಿಯಾಯಿತು.

    ಅಂತಿಮ ಸಂಸ್ಕಾರಕ್ಕೆ ಪಚ್ಚನಾಡಿ ರುದ್ರಭೂಮಿಯಲ್ಲಿ ಸಿದ್ಧತೆ ನಡೆಸಲಾಗಿತ್ತು. ಈ ಮಾಹಿತಿ ತಿಳಿದ ಸ್ಥಳೀಯರು ಸ್ಥಳದಲ್ಲಿ ಸೇರಿ ಪ್ರತಿಭಟನೆ ಮುಂದಾದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ, ಶವ ಸಂಸ್ಕಾರ ಕುರಿತು ನನಗೆ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ. ರುದ್ರಭೂಮಿ ಅಕ್ಕಪಕ್ಕ ಮನೆಗಳು ಇರುವುದರಿಂದ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರಿಗೆ ಧೈರ್ಯ ತುಂಬಿ ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು.

    ಪಚ್ಚನಾಡಿಯಿಂದ ಕೆಲವೇ ಕಿ.ಮೀ. ದೂರದ ಮೂಡುಶೆಡ್ಡೆ ರುದ್ರಭೂಮಿಯಲ್ಲಿ ಸಂಸ್ಕಾರ ನಡೆಸಲಾಗುತ್ತದೆ ಎಂಬ ಮಾಹಿತಿಯಂತೆ ಅಲ್ಲೂ ಜನ ಸೇರಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ, ಕ್ಷೇತ್ರದ ಹೊರಗಿನ ಮಹಿಳೆ ಶವವನ್ನು ಮೂಡುಶೆಡ್ಡೆಯಲ್ಲಿ ಸಂಸ್ಕಾರ ನಡೆಸಲು ಬಿಡುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
    ಬಳಿಕ ನಗರದ ನಂದಿಗುಡ್ಡೆ ಅಥವಾ ಬೋಳೂರು ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಜಿಲ್ಲಾಡಳಿತ ನಿರ್ಧರಿಸಿತಾದರೂ, ಸ್ಥಳೀಯರ ವಿರೋಧ ವ್ಯಕ್ತವಾಯಿತು. ಪಾಲಿಕೆ ವ್ಯಾಪ್ತಿಯ ಕುಲಶೇಖರ ಪದವು ರುದ್ರಭೂಮಿಯಲ್ಲೂ ಸಾರ್ವಜನಿಕರು ಸೇರಿದ್ದು, ಶಾಸಕ ವೇದವ್ಯಾಸ ಕಾಮತ್ ಅವರನ್ನು ಸಮಾಧಾನ ಮಾಡಿಸಿ, ಕಳುಹಿಸಿದರು.

    ಮೃತ ಮಹಿಳೆ ಊರಾದ ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ನಿರ್ಧರಿಸಿದರೂ, ಅಲ್ಲೂ ವಿರೋಧ ವ್ಯಕ್ತವಾಯಿತು. ಕೊನೆಗೆ ಬಿ.ಮೂಡ ಗ್ರಾಮದ ಕೈಕುಂಜೆಯಲ್ಲಿ ಶವಸಂಸ್ಕಾರ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿತು. ಅಲ್ಲೂ ಸ್ಥಳೀಯರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಜನರನ್ನು ಚದುರಿಸಲಾಯಿತು. ಶವಸಂಸ್ಕಾರ ಮುಕ್ತಾಯವಾಗುವಾಗ ಮುಂಜಾನೆ 3 ಗಂಟೆಯಾಗಿತ್ತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಸೆಲ್ವಮಣಿ, ತಹಸೀಲ್ದಾರ್ ರಶ್ಮಿ ಎಸ್. ಆರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಮಹಿಳೆಯ ಶವ ದಹನದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ವತಿಯಿಂದ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಶುಕ್ರವಾರ ಕೈಕುಂಜೆ ಹಿಂದು ರುದ್ರಭೂಮಿ ಪರಿಸರದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

    ಇಬ್ಬರು ಶಾಸಕರ ನಡೆಗೆ ವ್ಯಾಪಕ ಆಕ್ಷೇಪ: ಶವ ಸಂಸ್ಕಾರ ವಿಚಾರದಲ್ಲಿ ಇಬ್ಬರು ಶಾಸಕರ ವರ್ತನೆ ಆಕ್ಷೇಪಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ನಡೆದ ಹೈಡ್ರಾಮಕ್ಕೆ ಶಾಸಕರೇ ನೇರ ಹೊಣೆ ಎನ್ನುವ ಮಾತುಗಳು ಕೇಳಿ ಬಂದಿದೆ. ಸ್ವತಃ ವೈದ್ಯರಾಗಿರುವ ಡಾ. ಭರತ್ ಶೆಟ್ಟಿ ಅವರಿಗೆ ಕರೊನಾ ಸೋಂಕಿತ ವ್ಯಕ್ತಿಯ ಶವ ಸಂಸ್ಕಾರದಿಂದ ಯಾವುದೇ ಅಪಾಯವಿಲ್ಲ ಎಂದು ಗೊತ್ತಿದ್ದರೂ, ಜನರಿಗೆ ಮನವರಿಕೆ ಮಾಡುವ ಬದಲು ಅವರ ಪರವಾಗಿ ನಿಂತು, ‘ಜಿಲ್ಲಾಡಳಿತಕ್ಕೆ ನನ್ನ ಗಮಕ್ಕೆ ತಂದಿಲ್ಲ’ ಎಂದು ಹೇಳಿರುವುದು ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಶವ ಸಂಸ್ಕಾರ ವಿಚಾರದಲ್ಲೂ ‘ತಮ್ಮ ಕ್ಷೇತ್ರದ ಹೊರಗಿನವರು’ ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

    ಮೊದಲ ಪ್ರಕರಣದಲ್ಲೂ ವಿರೋಧ: ಭಾನುವಾರ ಕರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ 50 ವರ್ಷ ಪ್ರಾಯದ ಮಹಿಳೆ ಪ್ರಕರಣದಲ್ಲೂ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಮಂಗಳೂರಿನ ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಸ್ಥಳೀಯರಿಂದ ವಿರೋಧ ವ್ಯಕ್ತವಾದಾಗ ಶಾಸಕ ವೇದವ್ಯಾಸ ಕಾಮತ್ ಮನವೊಲಿಸಿದ್ದರು. ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು.

    ನನ್ನ ಜಮೀನಿನಲ್ಲಿ ಶವಸಂಸ್ಕಾರ ನಡೆಸಿ- ರಾಜೇಶ್ ನಾಕ್
    ಮಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರಕ್ಕೆ ಮಂಗಳೂರಿನಲ್ಲಿ ಶಾಸಕರ ಸಹಿತ ಜನರಿಂದ ಭಾರಿ ವಿರೋಧ ವ್ಯಕ್ತವಾದಾಗ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅಧಿಕಾರಿಗಳನ್ನು ಸಂಪರ್ಕಿಸಿ ತನ್ನ ಜಮೀನಿನಲ್ಲಿ (ಒಡ್ಡೂರು ಫಾರ್ಮ್) ಶವದಹನ ಮಾಡುವಂತೆ ತಿಳಿಸಿರುವ ಮಾನವೀಯ ನಡೆ ಜನಮೆಚ್ಚುಗೆಗೆ ಪಾತ್ರವಾಗಿದೆ.

    ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ರಾತ್ರಿ 11 ಗಂಟೆಗೆ ಜಿಲ್ಲಾಡಳಿತ ರಾಜೇಶ್ ನಾಕ್‌ರನ್ನು ಸಂಪರ್ಕಿಸಿತ್ತು. ಶಾಸಕರು ಬೇರೆ ಸ್ಥಳ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಆಶ್ಚರ್ಯ ಕಾದಿತ್ತು. ಶಾಸಕರು ತನ್ನ ಜಾಗದಲ್ಲೇ ಶವಸಂಸ್ಕಾರ ನಡೆಸುವಂತೆ ತಿಳಿಸಿದ್ದರು. ಶಾಸಕರ ನಿಲುವು ತಿಳಿದ ಬಳಿಕ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವು ನಾಯಕರಿಗೂ ತೀವ್ರ ಮುಜುಗರವಾಗಿತ್ತು ಎನ್ನಲಾಗಿದೆ. ಶಾಸಕರ ಮಾತಿನಿಂದ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಮೂಡಿತ್ತು. ಅಂತಿಮವಾಗಿ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಶವಸಂಸ್ಕಾರ ನೆರವೇರಿಸಲಾಗಿತ್ತು. ಶುಕ್ರವಾರ ರುದ್ರಭೂಮಿಗೆ ಭೇಟಿ ನೀಡಿದ ಶಾಸಕ ನಾಕ್ ಅಲ್ಲಿನ ಪರಿಸ್ಥಿತಿಯನ್ನೂ ಪರಿಶೀಲನೆ ನಡೆಸಿದರು.

    ಶಾಸಕರಿಂದ ಪ್ರೇರಣೆ: ಕರೊನಾದಿಂದ ಜನ ಭೀತಿಗೆ ಒಳಗಾಗಿದ್ದಾರೆ. ಹಾಗಾಗಿ ಶವಸಂಸ್ಕಾರ ಬಹಳ ಸೂಕ್ಷ್ಮ ವಿಚಾರವಾಗುತ್ತಿದೆ. ನಾನು ಸ್ವಂತ ಜಾಗದಲ್ಲಿ ಅವಕಾಶ ನೀಡುತ್ತೇನೆ ಎಂದು ಹೇಳಿದ ಬಳಿಕ ಕೆಲವರಿಗೆ ಮನವರಿಕೆಯಾಗಿದೆ. ಕೆಲವರು ದೂರವಾಣಿ ಕರೆ ಮಾಡಿ ಇನ್ನು ಮುಂದೆ ಕರೊನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಅಗತ್ಯವಿದ್ದರೆ ಜಾಗ ನೀಡಲು ಸಿದ್ಧರಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ ಎಂದು ರಾಜೇಶ್ ನಾಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮೃತ ಮಹಿಳೆ ನನ್ನ ಕ್ಷೇತ್ರದವರಾಗಿದ್ದು, ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಆದರೆ ನನ್ನ ಜಾಗ ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಗೊಂದಲ ಆಗುವುದು ಬೇಡ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‌ಕುಮಾರ್ ಕಟೀಲ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ಪತ್ನಿ ಹಾಗೂ ಮಕ್ಕಳ ಒಪ್ಪಿಗೆ ಪಡೆದು ಮುಂದುವರಿಯಿರಿ ಎಂದು ಸೂಚಿಸಿದರು. ಪತ್ನಿ ನನ್ನ ನಿರ್ಧಾರವನ್ನು ಬೆಂಬಲಿಸಿದಳು. ಬಳಿಕ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಶವ ಸಂಸ್ಕಾರ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದರು.
    – ರಾಜೇಶ್ ನಾಕ್, ಬಂಟ್ವಾಳ ಶಾಸಕ

    ದಹಿಸುವುದರಿಂದ ವೈರಾಣು ಹರಡುವುದಿಲ್ಲ- ಸಿಂಧೂ ಬಿ. ರೂಪೇಶ್ ಸ್ಪಷ್ಟನೆ
    ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಹೂಳುವುದು ಅಥವಾ ಬೆಂಕಿಯಲ್ಲಿ ದಹಿಸುವುದು ಈ ಎರಡೂ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಬಹುದು. ದೇಹವನ್ನು ಸುಡುವುದು ಅಥವಾ ಬೂದಿಯನ್ನು ಸಂಗ್ರಹಿಸಿ ಧಾರ್ಮಿಕ ಆಚರಣೆ ನಡೆಸುವುದರಿಂದ ಸೋಂಕು ಹರಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
    ಕರೊನಾ ಸೋಂಕಿನಿಂದ ಮೃತರಾದವರ ಶವಸಂಸ್ಕಾರ ಮಾಡುವುದರಿಂದ ಸೋಂಕು ಹರಡುತ್ತದೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಇದರಿಂದ ಭಯಗೊಂಡು ಜಿಲ್ಲೆಯ ಕೆಲವು ರುದ್ರಭೂಮಿಗಳಲ್ಲಿ ಶವ ಸಂಸ್ಕಾರಕ್ಕೆ ಸಾರ್ವಜನಿಕರು ಅಡ್ಡಿಪಡಿಸುತ್ತಿದ್ದಾರೆ. ಭಯಪಡಬೇಕಾದ ಅವಶ್ಯಕತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಂತಿಮ ಸಂಸ್ಕಾರ ವಿಚಾರದಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೃತದೇಹದಿಂದ ಕರೊನಾ ಹರಡಿರುವ ಪ್ರಕರಣ ವರದಿಯಾಗದಿದ್ದರೂ ಕೆಲವೊಂದು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

    ಪ್ರಮುಖ ಸೂಚನೆ: ಮೃತ ವ್ಯಕ್ತಿಯನ್ನು ಕುಟುಂಬ ಸದಸ್ಯರಿಗೆ ಮುಟ್ಟಲು ಅವಕಾಶವಿಲ್ಲ. ದೇಹ ವೀಕ್ಷಿಸುವಾಗ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಶುಚಿತ್ವ, ಮಾಸ್ಕ್ ಧಾರಣೆ ಕಡ್ಡಾಯ. ಧಾರ್ಮಿಕ ಗ್ರಂಥಗಳ ಪಠಣ, ಪವಿತ್ರ ನೀರು ಸಿಂಪಡಿಸುವುದು ಮೊದಲಾದ ಪ್ರಕ್ರಿಯೆಗಳನ್ನು ದೇಹ ಮುಟ್ಟದೆ ಮಾಡಬಹುದು. ಸೋಂಕಿತ ವ್ಯಕ್ತಿ ಮೃತರಾಗುವ ಮೊದಲು ಅವರ ಸಂಪರ್ಕಕ್ಕೆ ಬಂದಿದ್ದ, ಬಂಧುಗಳಿಗೂ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಅಂತ್ಯ ಸಂಸ್ಕಾರದ ವೇಳೆ, ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಂತೆ ಸೂಚಿಸಲಾಗುತ್ತದೆ. ಜತೆಗೆ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಚಿತಾಗಾರ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯನಿರ್ವಹಿಸುವವರಿಗೆ ಕರೊನಾದಿಂದ ಮೃತಪಟ್ಟವರ ದೇಹದಿಂದ ಯಾವುದೇ ವಿಶೇಷ ಅಪಾಯಗಳಿಲ್ಲ. ಆದರೂ ಅವರು ಕೈಗವಸು, ಕಾಲುಚೀಲ, ಪಿಪಿಇ ಧರಿಸಬೇಕು. ಜತೆಗೆ ಸಾಮಾನ್ಯ ಮುನ್ನೆಚ್ಚರಿಕಾ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಅಂತ್ಯಸಂಸ್ಕಾರದ ವಿಚಾರದಲ್ಲಿ ಜನಜಾಗೃತಿ- ಸಚಿವ ಕೋಟ ಮಾಹಿತಿ
    ಮಂಗಳೂರು: ಸೋಂಕಿತ ವೃದ್ಧೆಯ ಅಂತಿಮ ಸಂಸ್ಕಾರ ವಿಚಾರದಲ್ಲಿ ರುದ್ರಭೂಮಿಗಳ ವ್ಯಾಪ್ತಿಯ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಜನರಲ್ಲಿ ಸರಿಯಾದ ಮಾಹಿತಿ ಕೊರತೆಯಿಂದಾಗಿ ಈ ರೀತಿಯ ಘಟನೆಗಳು ಸಂಭವಿಸಿದ್ದು, ಕರೊನಾ ಸೋಂಕಿತರ ಅಂತಿಮ ಸಂಸ್ಕಾರದ ವಿಚಾರದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಒಂದೆಡೆ ಭಯ ಹಾಗೂ ಇನ್ನೊಂದೆಡೆ ಮಾಹಿತಿ ಕೊರತೆಯಿಂದ ಜನರು ರಾತೋರಾತ್ರಿ ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲ ಸಾವು ಸಂಭವಿಸಿದಾಗಲೂ ಜನರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಮುಂದಕ್ಕೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ವಿಜಯವಾಣಿಗೆ ವಿವರಿಸಿದ್ದಾರೆ.

    ಈಗಾಗಲೇ ಎರಡು ಸಾವು ಸಂಭವಿಸಿರುವುದು ಜಿಲ್ಲೆಯ ಮಟ್ಟಿಗೆ ದೊಡ್ಡ ಆಘಾತ. ಇನ್ನಷ್ಟು ಸಾವು ಸಂಭವಿಸಬಾರದು ಎನ್ನುವ ದೃಷ್ಟಿಯಿಂದ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಜನರು ಎಚ್ಚರ ವಹಿಸಬೇಕಾದ ಅವಶ್ಯಕತೆಯಿದೆ ಎಂದಿದ್ದಾರೆ.

    ಪ್ರತ್ಯೇಕ ಸ್ಥಳ ಅಗತ್ಯವಿಲ್ಲ: ಶವ ಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳದ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಂತಿಮ ಸಂಸ್ಕಾರದಲ್ಲಿ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಸೂಚನೆ ನೀಡಿದೆ. ಕರೊನಾ ಸಾವು ಸಂಭವಿಸಿರುವ ರಾಜ್ಯದ ಇತರ ಜಿಲ್ಲೆಗಳಲ್ಲೂ ಸಾರ್ವಜನಿಕ ರುದ್ರಭೂಮಿಗಳಲ್ಲೇ ಶವ ಸಂಸ್ಕಾರ ನಡೆಸಲಾಗಿದೆ. ಎಲ್ಲೂ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ ಎಂದು ಸಚಿವರುತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts