More

    ಸಮಾಧಾನ ಪಡಿಸಲು ಹೋಗಿದ್ದೆ, ಶಾಸಕ ಭರತ್ ಶೆಟ್ಟಿ ಹೇಳಿಕೆ

    ಕರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವಸಂಸ್ಕಾರದ ಬಗ್ಗೆ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನೆಯಾಗಿತ್ತು. ಪಚ್ಚನಾಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸಮಾಧಾನ ಪಡಿಸಲು ಹೋಗಿದ್ದೆ, ಶವಸಂಸ್ಕಾರ ನಿಲ್ಲಿಸಲು ಅಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.

    ಜಿಲ್ಲಾಡಳಿತ ಮೊದಲೇ ಮೃತದೇಹವನ್ನು ಕೊಂಡೊಯ್ದಿತ್ತು, ಪಚ್ಚನಾಡಿ ಸ್ಮಶಾನದಲ್ಲಿ ಇಡಲಾಗಿತ್ತು ಎಂಬ ಮಾಹಿತಿ ಸತ್ಯಕ್ಕೆ ದೂರವಾದುದು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ವಿರೋಧ ವ್ಯಕ್ತವಾದಾಗ ಅವರಿಗೆ ಮಾಹಿತಿ ನೀಡಲು ಯತ್ನಿಸಿದ್ದೇನೆ. ಪರಿಸ್ಥಿತಿ ಕೈ ಮೀರಿದರೆ ಸಮಸ್ಯೆ ಎಂದು ಸ್ಥಳ ಬದಲಾಯಿಸಲಾಯಿತು, ನಾನು ವಿರೋಧ ವ್ಯಕ್ತಪಡಿಸಿಲ್ಲ. ವೈದ್ಯನಾಗಿ ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಆದರೆ ಗ್ರಾಮೀಣ ಭಾಗದ ಜನತೆಗೆ ಅಂತ್ಯಸಂಸ್ಕಾರದಿಂದ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬ ಮಾಹಿತಿಯನ್ನು ಮನದಟ್ಟು ಮಾಡಬೇಕಿದೆ. ಈ ರೀತಿ ಆಗದಂತೆ ಜಿಲ್ಲಾಡಳಿತ ಸಮರ್ಪಕ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಕರೊನಾ ಸೋಂಕಿತರ ಇಡೀ ಕುಟುಂಬವೇ ದೂರವಿದ್ದು ಅಂತ್ಯಸಂಸ್ಕಾರಕ್ಕೆ ಬರಲಾಗದೆ ಸಂಕಟ ಪಡುತ್ತಿರುವಾಗ ಭಾವನಾತ್ಮಕ ಅಲೋಚಿಸುವುದರ ಜತೆಗೆ ಮಾನವೀಯತೆಯಿಂದ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಸಂಕಷ್ಟ ಸ್ಥಿತಿಯಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

    ಕರೊನಾ ಬಗ್ಗೆ ಇರುವ ತಪ್ಪು ತಿಳಿವಳಿಕೆಯಿಂದ ಶವಸಂಸ್ಕಾರ ವಿರೋಧಿಸುವ ಘಟನೆ ನಡೆದಿದೆ. ಪ್ರತಿಯೊಬ್ಬರೂ ವಾಸ್ತವ ಅರಿತು ಮಾನವೀಯತೆ ಮೆರೆಯಬೇಕು. ಶವ ದಹನದ ಮೂಲಕ ವೈರಸ್ ಪರಿಸರದಲ್ಲಿ ಹರಡುತ್ತದೆ ಎಂಬ ಮಾನಸಿಕತೆಯಿಂದ ಹೊರಬರಬೇಕು. ತಪ್ಪು ಮಾಹಿತಿ ಬಂದಾಗ ಜನತೆ ವಿಚಲಿತರಾಗದೆ ಸಂಯಮ ಕಾಪಾಡಿಕೊಳ್ಳಬೇಕು. ಕರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಸ್ಮಶಾನ ಇರುವ ಪರಿಸರದಲ್ಲಿ ಜಿಲ್ಲಾಡಳಿತ ಸ್ಯಾನಿಟೈಸರ್ ಸಿಂಪಡಿಸಿ ಮುಂಜಾಗ್ರತೆ ವಹಿಸುತ್ತದೆ. ಜಿಲ್ಲೆಯ ಶಾಸಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಜಿಲ್ಲೆ ಕರೊನಾ ಮುಕ್ತವಾಗಬೇಕೆಂದು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಜನತೆ ದಯವಿಟ್ಟು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು.
    ವೇದವ್ಯಾಸ ಕಾಮತ್, ಮಂಗಳೂರು ದಕ್ಷಿಣ ಶಾಸಕ

    ರಾಜಕೀಯ ಅಪ್ರಬುದ್ಧತೆಗೆ ಸಾಕ್ಷಿ
    ಕರೊನಾ ಸೋಂಕಿನಿಂದ ಮೃತ ವೃದ್ಧೆಯ ಶವವನ್ನು ಪಚ್ಚನಾಡಿಯಲ್ಲಿ ಸಂಸ್ಕಾರಕ್ಕೆ ಅಡ್ಡಿ ಮಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ ನಡೆ ಖಂಡನೀಯ. ಇದು ಅವರ ರಾಜಕೀಯ ಅಪ್ರಬುದ್ಧತೆ. ಶಾಸಕರು ಖುದ್ದು ಸ್ಥಳದಲ್ಲಿದ್ದಾಗ ವಿರೋಧ ವ್ಯಕ್ತಪಡಿಸಿದ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟು ಅವರೇ ಮುಂದೆ ನಿಂತು ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕಿತ್ತು. ಅದು ಬಿಟ್ಟು ಮೃತ ಶರೀರದ ಜತೆ ಅತ್ಯಂತ ಕಠೋರವಾಗಿ ವರ್ತಿಸಿರುವುದಲ್ಲದೆ, ಅದನ್ನು ಅಲೆದಾಡಿಸಿರುವುದು ಖೇದಕರ. ಈ ಸಂದರ್ಭ ಬಂಟ್ವಾಳ ಶಾಸಕರ ನಡೆಯನ್ನು ಅಭಿನಂದಿಸುತ್ತೇನೆ.
    – ಯು.ಟಿ.ಖಾದರ್, ಮಂಗಳೂರು ಶಾಸಕ

    ಮೃತದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಬೇಕಾಗಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿಲ್ಲ ಆದರೂ ಉದ್ದೇಶ ಪೂರ್ವಕವಾಗಿ ಶಾಸಕರೇ ಮುಂದೆ ನಿಂತು ಅದನ್ನು ತಡೆದಿದ್ದಾರೆ. ಇದು ಬಹಳ ಬೇಸರದ ವಿಚಾರ. ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿವರೆಗೆ ಜಿಲ್ಲಾಡಳಿತವನ್ನು ತಡೆದ ಶಾಸಕರ ವಿರುದ್ಧ ಕೂಡಲೇ ಸರ್ಕಾರ ಕೇಸು ದಾಖಲಿಸಿ ಬಂಧಿಸಬೇಕು.
    – ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts