More

    ಬಂಕಾಪುರಕ್ಕೆ ಬೇಕು ಸರ್ಕಾರಿ ಪಪೂ ಕಾಲೇಜ್

    ಗೌಡಪ್ಪ ಬನ್ನೆ ಶಿಗ್ಗಾಂವಿ

    ಶಿಗ್ಗಾಂವಿ ತಾಲೂಕಿನಲ್ಲಿಯೇ ಅತಿ ದೊಡ್ಡ ಪಟ್ಟಣವಾದ ಬಂಕಾಪುರ ಐತಿಹಾಸಿಕ ಹಿನ್ನೆಲೆ ಹೊಂದಿದ ಶೈಕ್ಷಣಿಕ ವಿದ್ಯಾಕೇಂದ್ರವಾಗಿದೆ. ಆದರೆ, ಇಂಥ ದೊಡ್ಡ ಪಟ್ಟಣಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಇಲ್ಲದಿರುವುದು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೀವ್ರ ಹಿನ್ನಡೆಯಾಗಿದೆ. ಇದೀಗ ಕ್ಷೇತ್ರದ ಶಾಸಕರೇ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ಬರುವ ಶೈಕ್ಷಣಿಕ ವರ್ಷದಲ್ಲಾದರೂ ಕಾಲೇಜ್ ಆರಂಭಗೊಳ್ಳಲಿ ಎನ್ನುವುದು ಶಿಕ್ಷಣ ಪ್ರೇಮಿಗಳ ಆಶಯವಾಗಿದೆ.

    ಬಂಕಾಪುರ ಪಟ್ಟಣ ಸುಮಾರು 35ರಿಂದ 40 ಸಾವಿರದಷ್ಟು ಜನಸಂಖ್ಯೆ ಹೊಂದಿದೆ. ಅಲ್ಲದೆ, ಇದು ಹೋಬಳಿ ಕೇಂದ್ರವಾಗಿದ್ದು, ಸುಮಾರು 34 ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಪಟ್ಟಣದಲ್ಲಿ ಐದು ಖಾಸಗಿ, ಒಂದು ಸರ್ಕಾರಿ ಪ್ರೌಢಶಾಲೆ ಇದೆ. ಮೂರು ಪರೀಕ್ಷಾ ಕೇಂದ್ರಗಳಿಂದ ವರ್ಷಕ್ಕೆ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ, ಪಟ್ಟಣದಲ್ಲಿರುವ ಏಕೈಕ ಖಾಸಗಿ ಕಾಲೇಜ್​ನಲ್ಲಿ ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ದೊರೆಯುತ್ತದೆ. ಆದ್ದರಿಂದ ಬಂಕಾಪುರದಲ್ಲಿ ಸರ್ಕಾರಿ ಪಿಯು ಕಾಲೇಜ್ ಇಲ್ಲದಿರುವುದು ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೆ, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಂಕಾಪುರ ಕೇಂದ್ರ ಸ್ಥಾನವಾಗಿದ್ದು, ಪ್ರೌಢ ಮತ್ತು ಪಿಯು ಶಿಕ್ಷಣಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿ ಸರ್ಕಾರಿ ಪಿಯು ಕಾಲೇಜ್ ಇಲ್ಲದೆ ಅನಿವಾರ್ಯವಾಗಿ ವಿದ್ಯಾರ್ಥಿಗಳು ಶಿಗ್ಗಾಂವಿ ಮತ್ತು ಹಾವೇರಿಗೆ ಹೋಗುವಂತಾಗಿದೆ.

    2017ರಲ್ಲಿ ಬಂಕಾಪುರಕ್ಕೆ ಪಿಯು ಕಾಲೇಜ್ ಮಂಜೂರಾತಿಗೆ ಅಂದಿನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದ ಸ್ಥಳೀಯ ಶಾಸಕ ಬಸವರಾಜ ಬೊಮ್ಮಯಿಯವರೇ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಸ್ಥಳೀಯರ ಬಹುದಿನಗಳ ಬೇಡಿಕೆ ಈಗಲಾದರೂ ಇಡೇರುವುದೇ ಎಂಬ ಆಶಾ ಭಾವನೆ ಶಿಕ್ಷಣ ಪ್ರೇಮಿಗಳದ್ದು.

    ಶಿಗ್ಗಾಂವಿ ತಾಲೂಕಿನಲ್ಲಿ ಬಂಕಾಪುರ ಸೇರಿ ಮೂರು ಉನ್ನತೀಕರಿಸಿದ ಶಾಲೆಗಳಲ್ಲಿ ಪಿಯು ಕಾಲೇಜ್ ಮಂಜೂರಾತಿಯ ಪ್ರಸ್ತಾವನೆ ಸರ್ಕಾರದ ಆದೇಶ ಪ್ರತಿಯಲ್ಲಿದೆ. ಆದರೆ, ನಮ್ಮ ಇಲಾಖೆಗೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಮುಂಬರುವ ಶೈಕ್ಷಣಿಕ ವರ್ಷದಿಂದ ಪಿಯು ಕಾಲೇಜ್ ಆರಂಭಿಸುವ ಸಾಧ್ಯತೆ ಇದೆ.

    | ಎಚ್.ಎಚ್. ಉಮೇಶಪ್ಪ, ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts