More

    ವಾಟೇಖಾನ್ ಎಸ್ಟೇಟ್ ಮುಟ್ಟುಗೋಲು

    ಚಿಕ್ಕಮಗಳೂರು: ತಾಲೂಕಿನ ಮುಳ್ಳಯ್ಯನಗಿರಿ ಶ್ರೇಣಿ ರಸ್ತೆಯಲ್ಲಿರುವ ವಾಟೇಖಾನ್ ಎಸ್ಟೇಟ್ ಮಾಲೀಕರು 22 ಕೋಟಿ ರೂ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 208 ಎಕರೆ ಕಾಫಿ ತೋಟವನ್ನು ಪೊಲೀಸ್ ಭದ್ರತೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದರು.

    ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ತೆರಳಿದ ಯುಬಿಐ (ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ಅಧಿಕಾರಿ ಮತ್ತು ಸಿಬ್ಬಂದಿ ತೋಟದ ಆವರಣದಲ್ಲಿದ್ದ ಮಾಲೀಕರ ನಿವಾಸ, ಕಾರ್ವಿುಕರ ಸಾಲು ಮನೆಗಳು, ಯಂತ್ರೋಪಕರಣ, 208 ಎಕರೆಯಲ್ಲಿದ್ದ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು. ಮನೆ ಕೊಠಡಿಗಳಿಗೆ ಬೀಗಮುದ್ರೆ ಹಾಕಿ. ಬಾಗಿಲು ಗೋಡೆ, ಮನೆಗಳ ಮುಂದೆ ನೋಟಿಸ್ ಲಗತ್ತಿಸಿದರು.

    ಅಧಿಕಾರಿಗಳು ಜಪ್ತಿಗಾಗಿ ತೋಟಕ್ಕೆ ಆಗಮಿಸಿದ ವಿಷಯವನ್ನು ಅರಿತ ಕಾರ್ವಿುಕರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ತೋಟ ವಶಕ್ಕೆ ಪಡೆದರೆ ನಮ್ಮ ಕುಟುಂಬಗಳು ಬೀದಿಪಾಲಾಗುತ್ತವೆ ಎಂದು ಅಂಗಾಲಾಚಿದರು. ಹತ್ತಾರು ವರ್ಷಗಳಿಂದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು ಬಹಳಷ್ಟು ಮಂದಿಗೆ ಲಕ್ಷಾಂತರ ರೂ. ಹಣ ಪಾವತಿಯಾಗಬೇಕಿದೆ ಎಂದು ಅಳಲು ತೋಡಿಕೊಂಡರು.

    35ಕ್ಕೂ ಹೆಚ್ಚು ಕಾರ್ವಿುಕರಿದ್ದ ತೋಟದಲ್ಲಿ ಅಧಿಕಾರಿಗಳು ಜಪ್ತಿಗೆ ಬಂದ ಸಂದರ್ಭ ಮಾಲೀಕರು ಇರಲಿಲ್ಲ. ಜಪ್ತಿ ವಿಷಯ ತಿಳಿದು ಬುಧವಾರವೇ ಬೇರೆ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ.

    ಕಾಫಿ ತೋಟ ಜಪ್ತಿ ಕುರಿತು ಮಾಲೀಕರ ಗಮನಕ್ಕೆ ಬಂದಾಗಲೇ ಕಾರ್ವಿುಕರಿಗೆ ವಿಷಯ ತಿಳಿಸಬೇಕಿತ್ತು. ನಮಗೆ ಆದೇಶ ಬಂದಿರುವ ಪ್ರಕಾರ ಕಾರ್ವಿುಕರು ಖಾಲಿ ಮಾಡಬೇಕಾಗುತ್ತದೆ. ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗುರುವಾರ ನಾವು ತೋಟ ಜಪ್ತಿ ಮಾಡಲು ಬಂದಾಗ 208 ಎಕರೆ ಪ್ರದೇಶದಲ್ಲಿ ಯಾವ ವಸ್ತುಗಳಿವೆಯೋ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಬಾಕಿ ಕೂಲಿ ಹಣ ಪಡೆಯಲು ನಗರದಲ್ಲಿರುವ ಮಾಲೀಕರ ನಿವಾಸದ ಬಳಿ ಬಂದಿದ್ದೆವು. ಆಗ ಬ್ಯಾಂಕ್ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಭಾನುವಾರದವರೆಗೆ ತೋಟದಲ್ಲಿರುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಾರ್ವಿುಕರು ತಿಳಿಸಿದರು.

    ಕಾಫಿ ತೋಟ ಮಾಲೀಕರಿಗೆ 2005ರಿಂದಲೇ ಸಾಲ ನೀಡಲಾಗಿದೆ. ಸರಿಯಾದ ಸಮಯಕ್ಕೆ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ಹಲವು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಲಿಲ್ಲ. ನ್ಯಾಯಾಲಯದ ಆದೇಶದಂತೆ ಕಾಫಿ ತೋಟವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ಮುರಳಿ ತಿಳಿಸಿದರು.

    ಸಾಲ ಮರು ಪಾವತಿಸುವಂತೆ ಮಾಹಿತಿ ಜತೆಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಖುದ್ದಾಗಿ ಭೇಟಿ ನೀಡಿ ಗಮನಕ್ಕೆ ತಂದಿದ್ದೇವೆ. ಜಿಲ್ಲಾ ಸಿಜೆಎಂ ನ್ಯಾಯಾಲಯದ ಆದೇಶ ಪಡೆದು ಕಾನೂನು ಪ್ರಕಾರ ವಾಟೇಖಾನ್ ಎಸ್ಟೇಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಯುಬಿಐ ಪ್ಯಾನಲ್ ಅಡ್ವೋಕೇಟ್ ಪೃಥ್ವಿ ಮಾಹಿತಿ ನೀಡಿದರು. ಬ್ಯಾಂಕ್ ವಲಯ ಕಚೇರಿ ಉಪ ಮಹಾಪ್ರಬಂಧಕ ರಮಣ ರಾವ್, ಸಹಾಯಕ ವ್ಯವಸ್ಥಾಪಕ ಅಜಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts