More

    ದೇಶಪ್ರೇಮ ಪ್ರದರ್ಶನಕ್ಕೆ ಧ್ವಜಾರೋಹಣ: ಎಡಿಸಿ ವಿಜಯಾ ಈ. ರವಿಕುಮಾರ್ ಮಾಹಿತಿ


    ಬೆಂಗಳೂರು ಗ್ರಾಮಾಂತರ: ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಪ್ರಯುಕ್ತ ಕಾಲ್ನಡಿಗೆ ಜಾಥಾ ಹಾಗೂ ಬೆಟ್ಟಕ್ಕೆ ಚಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಈ ಮೂಲಕ ಸಾರ್ವಜನಿಕರಲ್ಲಿ ದೇಶಪ್ರೇಮ, ಧ್ವಜಾರೋಹಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಹೇಳಿದರು.

    ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಪ್ರಯುಕ್ತ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮಾಕಳಿದುರ್ಗಾ ಬೆಟ್ಟದ ಟ್ರಕ್ಕಿಂಗ್ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.


    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 13 ರಿಂದ 15 ರವರೆಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಹರ್‌ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಖಾದಿಯಿಂದ ನೇಯಲ್ಪಟ್ಟ ರಾಷ್ಟ್ರಧ್ವಜ ಅಥವಾ ಬಟ್ಟೆ ರಾಷ್ಟ್ರಧ್ವಜವನ್ನು ದೇಶಾಭಿಮಾನದಿಂದ ಖರೀದಿಸಿ ಹಾರಿಸಬೇಕು ಎಂದು ಹೇಳಿದರು.

    ತಿರಂಗಾ ಅಭಿಯಾನದ ಕುರಿತು ಅರಿವು ಮೂಡಿಸುವ ಸಲುವಾಗಿ 13 ರಂದು ಬೆಳಗ್ಗೆ 7.30 ಕ್ಕೆ ದೇವನಹಳ್ಳಿಯ ಪ್ರಮುಖ ರಸ್ತೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಜಾಥಾ ನಡೆಸಲಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಬೇಕು ಎಂದು ಮನವಿ ಮಾಡಿದರು.

    ರಾಷ್ಟ್ರಧ್ವಜ ಹಿಡಿದು ಸಾಗುವ ರ‌್ಯಾಲಿಯಲ್ಲಿ ಐದು ಸಾವಿರ ಧ್ವಜ ಪ್ರದರ್ಶನ ನಡೆಯಲಿದೆ. ದೇವನಹಳ್ಳಿಯ ಅಂಬೇಡ್ಕರ್ ಭವನದಿಂದ ರ‌್ಯಾಲಿ ಆರಂಭವಾಗಿ ವಿಜಯಪುರ ರಸ್ತೆಯ ಮೂಲಕ ದೇವನಹಳ್ಳಿಯ ಕ್ರೀಡಾಂಗಣ ತಲುಪಲಿದೆ ಎಂದರು.

    ದೇಶಾಭಿಮಾನದ ಸಂಕೇತ: ದೇಶದ ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ ಮಾಡುವುದು ದೇಶಾಭಿಮಾನದ ಸಂಕೇತ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಯುವಜನ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಹೇಳಿದರು.

    ಸರ್ಕಾರಿ ಕಚೇರಿ, ಮನೆ, ಮಳಿಗೆಳ ಮೇಲೆ ಪ್ರತಿದಿನ ತ್ರಿವರ್ಣ ಧ್ವಜ ಹಾರಿಸಬೇಕು. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಬೇಕು. ಜಿಲ್ಲೆಯ ಎಲ್ಲ ಇಲಾಖೆ, ನಗರ, ಸ್ಥಳೀಯ ಸಂಸ್ಥೆಗಳು, ಅಧೀನ ಕಚೇರಿ ಹಾಗೂ ಸಿಬ್ಬಂದಿ ಮನೆಗಳ ಮೇಲೆ, ಪೊಲೀಸ್ ಠಾಣೆ, ಶಾಲೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ ಎಂದರು.


    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಗೀತಾ, ಪ್ರಾಂಶುಪಾಲ ಶ್ರೀನಿವಾಸ್, ನೆಹರು ಯುವ ಕೇಂದ್ರದ ಸುಂದ್ರಮ್ಮ, ಗಾಂಧಿ ಭವನದ ಸರ್ವೋದಯ ಮಂಡಳಿ ಅಧ್ಯಕ್ಷ ಪ್ರಶಾಂತ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts