More

    ಬೆಂಗಳೂರು- ಕಾರವಾರ ರಾತ್ರಿ ರೈಲು ರದ್ದು

    ಮಂಗಳೂರು: ಯಶವಂತಪುರದಿಂದ ವಾಸ್ಕೋ(ಗೋವಾ)ಗೆ ಹೊಸ ರೈಲು ಆರಂಭಿಸಲು ಒಪ್ಪಿಗೆ ನೀಡಿರುವ ಕೇಂದ್ರ ರೈಲ್ವೆ ಸಚಿವಾಲಯವು ಬೆಂಗಳೂರು- ಕಾರವಾರ ನಡುವೆ ಸಂಚರಿಸುತ್ತಿದ್ದ ಹಳೇ ರಾತ್ರಿ ರೈಲನ್ನು (ನಂ.16513/14 ಮತ್ತು 16523/24) ರದ್ದುಪಡಿಸಿ ಶುಕ್ರವಾರ ಆದೇಶ ಹೊರಡಿಸಿದೆ.
    ಯಶವಂತಪುರ- ವಾಸ್ಕೋ ಹೊಸ ರೈಲಿಗೆ ಶನಿವಾರ ಬೆಳಗ್ಗೆ 9 ಗಂಟೆಗೆ ಯಶವಂತಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್ ಸಿ. ಅಂಗಡಿ ಹಸಿರು ನಿಶಾನೆ ತೋರಲಿದ್ದಾರೆ.

    ಸಮಯ ಉಳಿತಾಯ: ಹಳೇ ರೈಲು ಬೆಂಗಳೂರು- ಕಾರವಾರ ನಡುವಿನ ಪ್ರಯಾಣದ ಅವಧಿ 17 ಗಂಟೆ ಇದ್ದು, ಹೊಸ ರೈಲು ಈ ಅಂತರವನ್ನು 14.25 ಗಂಟೆಯಲ್ಲಿ ತಲುಪಬಹುದು ಎನ್ನುವುದು ಇಲಾಖೆ ಅಧಿಕಾರಿ ವರ್ಗದ ನಿರೀಕ್ಷೆ.
    ಹೊಸ ರೈಲು ಯಶವಂತಪುರದಿಂದ ಸಾಯಂಕಾಲ 6.45ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ, 10.30ಕ್ಕೆ ವಾಸ್ಕೋ ತಲುಪಲಿದೆ. ಅಲ್ಲಿ ನಿರ್ವಹಣೆ ಬಳಿಕ ಅದೇ ರೈಲು ಸಾಯಂಕಾಲ 3.20ಕ್ಕೆ ಹೊರಟು 6 ಗಂಟೆಗೆ ಕಾರವಾರ, ಮರುದಿನ ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಲ್ಲಿ ಕಾಣಿಯೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆ ಇರಲಿಲ್ಲ, ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನದಿಂದ ಈ ಎರಡೂ ನಿಲ್ದಾಣಗಳಲ್ಲಿ ಈಗ ನಿಲುಗಡೆ ಒದಗಿಸಲಾಗಿದೆ.
    ಈ ಹಿಂದೆ ನಿರ್ಧಾರವಾದಂತೆ ಹೊಸ ರೈಲು ಮಂಗಳೂರು ಜಂಕ್ಷನ್(ಕಂಕನಾಡಿ) ಮತ್ತು ಸೆಂಟ್ರಲ್ ನಿಲ್ದಾಣ ಪ್ರವೇಶಿಸದೆ ನೇರವಾಗಿ ಪಡೀಲ್ ಮೂಲಕ ಸಾಗಲಿದೆ.

    ಎಲ್ಲೆಲ್ಲಿ ನಿಲುಗಡೆ?: ರೈಲು ಸಂಖ್ಯೆ 16595/16596 ಸಾಯಂಕಾಲ 6.45ಕ್ಕೆ ಯಶವಂತಪುರದಿಂದ ಹೊರಟು 9.55 ಹಾಸನ, ರಾತ್ರಿ 10.55 ಸಕಲೇಶಪುರ, 2.05 ಸುಬ್ರಹ್ಮಣ್ಯ ರೋಡ್, 2.27 ಕಾಣಿಯೂರು, 2.45 ಕಬಕಪುತ್ತೂರು, 3.05 ಬಂಟ್ವಾಳ, 3.57 ಸುರತ್ಕಲ್, 4.12 ಮೂಲ್ಕಿ, 4.30 ಉಡುಪಿ, 4.42 ಬಾರಕೂರು, 4.54 ಕುಂದಾಪುರ, 5.18 ಬೈಂದೂರು, 5.42 ಭಟ್ಕಳ, 5.56 ಮುರುಡೇಶ್ವರ, ಬೆಳಗ್ಗೆ 6.16 ಹೊನ್ನಾವರ, 6.32 ಕುಮಟಾ, 6.50 ಗೋಕರ್ಣ ರೋಡ್, 7.02 ಅಂಕೋಲ, 8.25 ಕಾರವಾರ, 9.35 ಮಡಗಾಂವ್, 9.57 ಮಜೋರ್ದ, 10.30 ವಾಸ್ಕೋ. ಇದೇ ರೀತಿ ರೈಲು ಸಂಖ್ಯೆ 06551/06552 ಅಪರಾಹ್ನ 3.20ಕ್ಕೆ ವಾಸ್ಕೋದಿಂದ ಹೊರಡುವ ರೈಲು ಸಂಜೆ 6 ಗಂಟೆಗೆ ಕಾರವಾರ, ರಾತ್ರಿ 8.05ಕ್ಕೆ ಬೈಂದೂರು, 8.30ಕ್ಕೆ ಕುಂದಾಪುರ, 8.46ಕ್ಕೆ ಬಾರಕೂರು, 9.02 ಉಡುಪಿ, 9.42 ಮೂಲ್ಕಿ, 10 ಸುರತ್ಕಲ್, 11.15 ಬಂಟ್ವಾಳ, 11.33 ಕಬಕಪುತ್ತೂರು, 11.51 ಕಾಣಿಯೂರು, 12.35 ಸುಬ್ರಹ್ಮಣ್ಯ ರೋಡ್, 3.25 ಸಕಲೇಶಪುರ, 4.40 ಹಾಸನ, ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪುತ್ತದೆ.

    ಹಳೇ ರೈಲು ಕಣ್ಣೂರಿಗೆ ಸೀಮಿತ:
    ಹಳೇ ರೈಲು ಬೆಂಗಳೂರು- ಕಣ್ಣೂರು- ಬೆಂಗಳೂರು ಎಕ್ಸ್‌ಪ್ರೆಸ್ (ನಂ.16511/12 ಮತ್ತು 16517/18) ಎಂದಿನಂತೆ ಮಂಗಳೂರು ಸೆಂಟ್ರಲ್ ಮೂಲಕ ಪ್ರಯಾಣಿಸಲಿದೆ. ಯಶವಂತಪುರದಿಂದ ಬರುವ ರೈಲು ಮಂಗಳೂರು ಸೆಂಟ್ರಲ್‌ಗೆ ಬಂದು ಅಲ್ಲಿಂದ ಕಣ್ಣೂರಿನಿಂದ ಕೆಲವು ಪ್ರಯಾಣಿಕರ ಬೋಗಿಗಳು ಕಣ್ಣೂರಿಗೆ ಮತ್ತು ಮತ್ತೆ ಕೆಲವು ಬೋಗಿಗಳು ಕಾರವಾರಕ್ಕೆ ಸಂಚರಿಸುತ್ತಿದ್ದವು. ಭವಿಷ್ಯದಲ್ಲಿ ಈ ರೈಲಿನ ಕಾರವಾರ ಭಾಗದ ಪ್ರಯಾಣ ರದ್ದುಗೊಳ್ಳಲಿದೆ.
    ಕಣ್ಣೂರಿಗೆ ತೆರಳುವ ಬೆಂಗಳೂರು ರಾತ್ರಿ ರೈಲು 18 ಬೋಗಿಗಳೊಂದಿಗೆ ಎಂದಿನಂತೆ (ವಾರದಲ್ಲಿ ನಾಲ್ಕು ದಿನ ಕುಣಿಗಲ್ ಮತ್ತು ಮೂರು ದಿನ ಮೈಸೂರು ಮಾರ್ಗ) ಸಂಚರಿಸಲಿದೆ.
    ಬದಲಾವಣೆ ಶನಿವಾರದಿಂದಲೇ ಅನುಷ್ಠಾನಗೊಳ್ಳುತ್ತಿದ್ದು, ಹಳೇ ರೈಲಿನಲ್ಲಿ ಕಾರವಾರ ಕಡೆಯ ಪ್ರಯಾಣಕ್ಕೆ ಕಾದಿರಿಸಿದ ಟಿಕೆಟ್ ಹೊಸ ರೈಲಿಗೆ ವರ್ಗಾವಣೆಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿ ವರ್ಗ ತಿಳಿಸಿದೆ.

    ಮಂಗಳೂರಿನವರಿಗೆ ನಷ್ಟ: ಕಾರವಾರಕ್ಕೆ ಇದುವರೆಗೆ ಹೋಗುವುದು ಅನುಕೂಲವಿತ್ತು. ಆದರೆ ಆ ರೈಲನ್ನು ರದ್ದುಗೊಳಿಸಿರುವುದರಿಂದ ಮಂಗಳೂರಿನ ಪ್ರಯಾಣಿಕರಿಗೆ ನಷ್ಟವಾಗಿದೆ. ಇನ್ನು ನಗರದಿಂದ ಕಾರವಾರ ಅಥವಾ ವಾಸ್ಕೋಗೆ ಹೋಗಬೇಕಿದ್ದರೆ ಸುರತ್ಕಲ್ ನಿಲ್ದಾಣಕ್ಕೆ ತೆರಳಬೇಕು. ಹೀಗಾಗಿ ಇಲಾಖೆಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
    ‘ಇದ್ದ ರೈಲು ಸೇವೆ ರದ್ದು ತೀರ್ಮಾನವನ್ನು ನಾವು ವಿರೋಧಿಸುತ್ತೇವೆ. ಹಳೇ ರೈಲು ಮೈಸೂರು ಮತ್ತು ಕಾರವಾರ ನಡುವಿನ ಪ್ರಯಾಣಕ್ಕೆ ಕೂಡ ತುಂಬಾ ಅನುಕೂಲವಿತ್ತು. ಮಂಗಳೂರು ನಗರದಿಂದ ಕಾರವಾರಕ್ಕೆ ಇದ್ದ ಒಂದು ಉತ್ತಮ ರೈಲು ಸಂಪರ್ಕ ಕೂಡ ಕಡಿದುಕೊಂಡಂತಾಗಿದೆ’ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ಸಲಹೆಗಾರ ಅನಿಲ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
    ಹಳೇ ರೈಲು ಸೇವೆ ರದ್ದುಪಡಿಸುವ ಮೂಲಕ ಕಾರವಾರ ಮತ್ತು ಮೈಸೂರು ರೈಲು ಸಂಪರ್ಕ ಕಡಿತಗೊಂಡಿದೆ. ಈ ರೈಲು ಮರು ಆರಂಭಿಸಬೇಕು ಎಂದು ಮೈಸೂರು ಗ್ರಾಹಕ ಪರಿಷತ್‌ನ ಯೋಗೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ.

    ಕಾರವಾರ ತನಕ ಮಾತ್ರ ಬುಕಿಂಗ್?: ಯಶವಂತಪುರ – ವಾಸ್ಕೋ ಹೊಸ ರೈಲು ಯಶವಂತಪುರ -ಕಾರವಾರ ನಡುವೆ ಮಾತ್ರ ಎಕ್ಸ್‌ಪ್ರೆಸ್ (ಯಶವಂತಪುರ-ಕಾರವಾರ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್) ಆಗಿ ಸಂಚರಿಸಲಿದೆ. ಕಾರವಾರ – ವಾಸ್ಕೋ ನಡುವೆ ಸಾಮಾನ್ಯ ರೈಲು (ಕಾರವಾರ-ವಾಸ್ಕೋ-ಕಾರವಾರ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್) ಆಗಿ ಸಂಚರಿಸುತ್ತದೆ. ಇದನ್ನು ಅನ್‌ರಿಸರ್ವ್‌ಡ್ ಎಂದು ನಮೂದಿಸಲಾಗಿದೆ. ಯಶವಂತಪುರದಿಂದ ವಾಸ್ಕೋಗೆ ತೆರಳುವ ಪ್ರಯಾಣಿಕನ ಬುಕ್ಕಿಂಗ್ ವ್ಯವಸ್ಥೆ ಕಾರವಾರ ತಲುಪುವಾಗ ಮುಗಿಯಲಿದೆ ಎಂದು ಆದೇಶದಲ್ಲಿರುವುದು ಟಿಕೆಟ್ ಬುಕಿಂಗ್ ಬಗ್ಗೆ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.

    ಇನ್ನೊಂದು ರೈಲು ರದ್ದು: ಬೆಂಗಳೂರು ನಗರದಿಂದ ಮಂಗಳೂರು ಸೆಂಟ್ರಲ್ ಮೂಲಕ ಕಾರವಾರ ತನಕದ ಹಳೇ ರೈಲು ರದ್ದುಗೊಳ್ಳುವ ಜತೆಯಲ್ಲಿ ಪೆರ್ನೆಂ- ಕಾರವಾರ (ನಂ.70103/70104) ಡೆಮು ಮಡಗಾಂವ್- ಕಾರವಾರ ನಡುವಿನ ಪ್ರಯಾಣ ಕೂಡ ರದ್ದುಪಡಿಸಲಾಗಿದೆ. ಒಂದು ಹೊಸ ರೈಲಿನ ಜತೆಯಲ್ಲಿ ಎರಡು ಮಾರ್ಗಗಳ ರೈಲು ಪ್ರಯಾಣ ರದ್ದುಗೊಳಿಸಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts