More

    ಬಂಡೀಪುರದಲ್ಲಿ ಮಗುಚಿ ಬಿದ್ದ ಲಾರಿ

    ಗುಂಡ್ಲುಪೇಟೆ: ಬಂಡೀಪುರಕ್ಕೆ ಹೋಗುವ ರಸ್ತೆಯಲ್ಲಿ ಲಾರಿಯೊಂದು ಮಗುಚಿ ಬಿದ್ದಿದ್ದು, 24 ಗಂಟೆಯಾದರೂ ತೆರವುಗೊಳಿಸದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ.

    ಗುರುವಾರ ಸಂಜೆ 5 ಗಂಟೆಯಲ್ಲಿ ಬಂಡೀಪುರ ಮಾರ್ಗವಾಗಿ ತಮಿಳುನಾಡಿದತ್ತ ಹೋಗುತ್ತಿದ್ದ 12 ಚಕ್ರಗಳ ಸರಕು ಸಾಗಣೆ ಲಾರಿ ಬೈಪಾಸ್ ರಸ್ತೆಯ ಏರು ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಲಾರಿ ಮಗುಚಿ ಸಂಚಾರಕ್ಕೆ ಅಡಚಣೆಯಾಗಿರುವ ಬಗ್ಗೆ ತಿಳಿದರೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬಂಡೀಪುರ ಉಪಠಾಣೆಯ ಪೊಲೀಸ್ ಸಿಬ್ಬಂದಿ ಬೈಪಾಸ್ ರಸ್ತೆಯ ಪ್ರವೇಶದಲ್ಲಿ ಬ್ಯಾರಿಕೇಡ್ ಅಳವಡಿಸಿಲ್ಲ.ಇದರಿಂದ ಈ ರಸ್ತೆಯಲ್ಲಿ ವಾಹನಗಳು ಕಿಲೋ ಮೀಟರ್ ಉದ್ದಕ್ಕೂ ನಿಂತಿದ್ದು, ಟ್ರಾಫಿಕ್ ಜಾಂ ಉಂಟಾಗಿದೆ. ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ಹಿಂದಕ್ಕೆ ತೆಗೆಯಲು ಸಾಧ್ಯವಾಗದೆ ಚಾಲಕರು ಪರದಾಡುತ್ತಿದ್ದಾರೆ. ವನ್ಯಪ್ರಾಣಿಗಳ ಭೀತಿಯ ನಡುವೆ ಇಡೀ ರಾತ್ರಿ ತಮ್ಮ ವಾಹನಗಳಲ್ಲಿಯೇ ಕಳೆಯುವಂತಾಗಿದೆ.

    ಇದೇ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಶುಕ್ರವಾರ ತಾಲೂಕಿಗೆ ಆಗಮಿಸಿದ್ದ ಕೃಷಿ ಸಚಿವ ಶಿವಾನಂದ ಎಸ್.ಪಾಟೀಲ್ ಸರಾಯ್ ರೆಸಾರ್ಟ್‌ಗೆ ತೆರಳಲು ಇದೇ ಮಾರ್ಗವಾಗಿ ಹೋಗಬೇಕಾಗಿದ್ದರೂ ಪೊಲೀಸರು ಬದಲಿ ರಸ್ತೆಯಲ್ಲಿ ಕರೆದೊಯ್ದರು. ಶುಕ್ರವಾರ ಸಂಜೆಯಾದರೂ ಲಾರಿಯನ್ನು ತೆರವುಗೊಳಿಸದ ಪರಿಣಾಮ ಈ ಮಾರ್ಗದಲ್ಲಿ ಸಾಗುತ್ತಿದ್ದ ಎಲ್ಲ ವಾಹನಗಳು ಏಕಮುಖ ರಸ್ತೆಯಲ್ಲಿ ಹೋಗಬೇಕಾಯಿತು.

    ರಸ್ತೆಯ ನಡುವೆ ಮಗುಚಿಬಿದ್ದ ಲಾರಿಯ ಟ್ಯಾಂಕಿನಿಂದ ಹೊರ ಚೆಲ್ಲಿದ ಡೀಸೆಲ್ ಅರಣ್ಯದತ್ತ ಹರಿದು ಹೋಗಿದೆ. ಆಕಸ್ಮಿಕ ಬೆಂಕಿ ಬಿದ್ದರೆ ಇಡೀ ಕಾಡೇ ಹೊತ್ತಿಕೊಳ್ಳುವ ಅಪಾಯವಿದ್ದರೂ ಅರಣ್ಯ ಇಲಾಖೆ ಹಾಗೂ ಪೊಲೀಸರು ಲಾರಿಯನ್ನು ತೆರವುಗೊಳಿಸಲು ಮುಂದಾಗಿಲ್ಲ. ಏಕಮುಖ ರಸ್ತೆಯಲ್ಲಿ ಭಾರಿ ವಾಹನಗಳನ್ನು ಚಲಾಯಿಸುವುದು ದೊಡ್ಡ ಸವಾಲಾಗಿದೆ.
    ಮಂಜು, ತರಕಾರಿ ವಾಹನದ ಚಾಲಕ.

    ಸಂಜೆಯೇ ವಿಷಯ ತಿಳಿದು ಬಂದಿದ್ದು, ಪೊಲೀಸರ ಗಮನಕ್ಕೆ ತರಲಾಗಿದೆ. ಅವರು ಸಚಿವರ ಉಸ್ತುವಾರಿಗೆ ನಿಯೋಜನೆಯಾಗಿದ್ದರಿಂದ ತೆರವು ಕಾರ್ಯಾಚರಣೆ ವಿಳಂಬವಾಗಿದೆ.
    ಮಂಜುನಾಥ್, ಗೋಪಾಲಸ್ವಾಮಿ ಬೆಟ್ಟ ವಲಯದ ಆರ್.ಎಫ್.ಒ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts