More

    ಗಣೇಶೋತ್ಸವದಲ್ಲಿ ಡಿಜೆ ನಿಷೇಧ : ಸಿಪಿಐ ಆನಂದ ವಾಘ್ಮೋಡೆ ಸೂಚನೆ

    ಮುದ್ದೇಬಿಹಾಳ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಈ ಬಾರಿ ಕೋವಿಡ್ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು ಕಡ್ಡಾಯವಾಗಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವಂತೆ ಸಿಪಿಐ ಆನಂದ ವಾಘ್ಮೋಡೆ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿ, ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಗಣಪತಿಗಳನ್ನು ಕೂಡಿಸಲಾಗುತ್ತದೆ. ಆದರೆ ಅನುಮತಿ ಪಡೆದುಕೊಳ್ಳುವುದಿಲ್ಲ. ಹೀಗೆ ಮಾಡದೇ ಅನುಮತಿ ಪಡೆದುಕೊಂಡು ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡಿದರು.
    ಪಿಎಸ್‌ಐ ರೇಣುಕಾ ಜಕನೂರ ಮಾತನಾಡಿ, ರಾತ್ರಿ 10 ಗಂಟೆ ಬಳಿಕ ಯಾರೂ ಧ್ವನಿವರ್ಧಕ ಬಳಸುವಂತಿಲ್ಲ. ಗಣೇಶೋತ್ಸವ ಮೆರವಣಿಗೆ, ಟೆಂಟ್‌ಗಳಲ್ಲಿ ಡಿಜೆ ಹಚ್ಚುವಂತಿಲ್ಲ. ಒಂದು ವೇಳೆ ಹಚ್ಚಿದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

    ಗಣ್ಯರಾದ ಅಬ್ದುಲಗೂರ ಮಕಾನದಾರ ಮಾತನಾಡಿ, ಗಣೇಶೋತ್ಸವ ಆಚರಣೆಗೆ ಮುಸ್ಲಿಂ ಬಾಂಧವರು ಸಹಕಾರ ಮಾಡುತ್ತೇವೆ. ರಸ್ತೆಯ ಮಧ್ಯದಲ್ಲಿ ಟೆಂಟ್ ಹಾಕಿದರೂ ಅಲ್ಪಸ್ವಲ್ಪ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

    ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಗಣಪತಿ ಹಬ್ಬ ಆಚರಣೆ ವೇಳೆ ಇಸ್ಪಿಟ್, ಕುಡಿತದಂತಹ ದುಶ್ಚಟಗಳನ್ನು ಮಾಡದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ಮಾಡಿದರು.

    ಪ್ರಮುಖರಾದ ಪ್ರಭು ಕಡಿ, ರಾಜಶೇಖರ ಹೊಳಿ, ಮಹಾಂತೇಶ ಬೂದಿಹಾಳಮಠ, ಪುನೀತ ಹಿಪ್ಪರಗಿ, ಶಾಹೀಲ್ ನಾಗಠಾಣ ಮೊದಲಾದವರು ಮಾತನಾಡಿದರು.

    ಕೆಲವು ಸಮಿತಿಯ ಸದಸ್ಯರು ಗಜಾನನ ಉತ್ಸವ ಸಂದರ್ಭದಲ್ಲಿ ಮದ್ಯಮಾರಾಟ ತಡೆಗಟ್ಟುವುದು, ಡಿಜೆಗೆ ಅನುಮತಿ ನೀಡುವುದು, ಮೆರವಣಿಗೆ ಮಾರ್ಗ, ಪಿಓಪಿ ಗಣೇಶ ಮೂರ್ತಿ ಮಾರಾಟ ಕುರಿತಂತೆ ಚರ್ಚಿಸಿದರು.

    ಪುರಸಭೆ ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಎಎಸ್‌ಐ ಕೆ.ಎಸ್.ಅಸ್ಕಿ, ಶ್ರೀಕಾಂತ ಬಿರಾದಾರ, ಅಗ್ನಿಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ರಾಜೇಂದ್ರ ಪೊದ್ದಾರ, ವಿವಿಧ ಗಜಾನನ ಮಂಡಳಿಗಳ ಪದಾಧಿಕಾರಿಗಳಿದ್ದರು.

    ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಆವರಣದಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಯವರಿಂದ ನಗರದ ಮಂಡಳಿಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಆಯಾ ಗ್ರಾ.ಪಂ. ನಿಂದ ಅನುಮತಿ ಪತ್ರ ತರಬೇಕು.
    ರೇಣುಕಾ ಜಕನೂರ, ಪಿಎಸ್‌ಐ
    ಗಣೇಶೋತ್ಸವ ಹೆಸರಿನಲ್ಲಿ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ಕೊಡುವಂತೆ ಪೀಡಿಸುವುದು ಸರಿಯಾದ ಕ್ರಮವಲ್ಲ. ವಾಹನ ನಿಲ್ಲಿಸಿ ಹಣ ಕೇಳಿದ್ದು ಕಂಡು ಬಂದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅಹಿತಕರ ಘಟನೆಗಳಿಗೆ ಆಸ್ಪದ ಸಿಗದಂತೆ ಗಣೇಶೋತ್ಸವ ಆಚರಿಸಿ.
    ಆನಂದ ವಾಘ್ಮೋಡೆ, ಸಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts