More

    ಪೊಲೀಸ್ ಸರ್ಪಗಾವಲಿನಲ್ಲಿ ಮತಪೆಟ್ಟಿಗೆ

    ಮುಂಡರಗಿ: ತಾಲೂಕಿನ 18 ಗಾಪಂಗಳ 253 ಸ್ಥಾನಗಳಿಗೆ ಭಾನುವಾರ ಮತದಾನ ನಡೆದಿದ್ದು, 121 ಮತಪೆಟ್ಟಿಗೆಗಳು ಪಟ್ಟಣದ ಜೆ.ಎ. ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಭದ್ರವಾಗಿವೆ.

    ತಾಲೂಕಿನಲ್ಲಿ ಶೇ. 84.93ರಷ್ಟು ಮತದಾನವಾಗಿದೆ. 702 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಶಿಂಗಟಾಲೂರ ಗ್ರಾ.ಪಂ. ವ್ಯಾಪ್ತಿಯ ಶೀರನಹಳ್ಳಿ ಗ್ರಾಮದ ಮತಕೇಂದ್ರ ಸಂಖ್ಯೆ 75ರಲ್ಲಿ ಶೇ. 95.64ರಷ್ಟು ಮತದಾನವಾಗಿದ್ದು ತಾಲೂಕಿನಲ್ಲಿಯೇ ಅತಿ ಹೆಚ್ಚು ಮತದಾನವಾದ ಕೇಂದ್ರವಾಗಿದೆ. ಡೋಣಿ ಗ್ರಾ.ಪಂ. ವ್ಯಾಪ್ತಿಯ ಡೋಣಿ ಗ್ರಾಮದ ಮತಕೇಂದ್ರ ಸಂಖ್ಯೆ 9ರಲ್ಲಿ ಶೇ. 62.41ರಷ್ಟು ಮತದಾನವಾಗಿದ್ದು ಅತ್ಯಂತ ಕಡಿಮೆ ಮತದಾನವಾದ ಕೇಂದ್ರವಾಗಿದೆ. ಅಭ್ಯರ್ಥಿಗಳ ಭವಿಷ್ಯ ಡಿ. 30ರಂದು ಬಹಿರಂಗವಾಗಲಿದೆ. ಮುಂಡರಗಿ ಜೆ.ಎ. ಕಾಲೇಜ್​ನ ಡಿ-ಮಸ್ಟರಿಂಗ್, ಸ್ಟ್ರಾಂಗ್ ರೂಮ್ೆ ಭಾನುವಾರ ರಾತ್ರಿ ಜಿಲ್ಲಾಧಿಕಾರಿ ಸುಂದರೇಶಬಾಬು, ಎಸ್ಪಿ ಯತೀಶ್ ಎನ್., ಜಿ.ಪಂ. ಮುಖ್ಯಕಾರ್ಯನಿರ್ವಣಾಧಿಕಾರಿ ಆನಂದ ಕೆ. ಭೇಟಿ ನೀಡಿ ಪರಿಶೀಲಿಸಿದರು.

    ಮುಂಡರಗಿ ಜೆ.ಎ. ಕಾಲೇಜ್​ನಲ್ಲಿರುವ ಮತಪೆಟ್ಟಿಗೆಗಳು ಇರುವ ಭದ್ರತಾ ಕೊಠಡಿಗೆ ಕಾವಲು ತಂಡ ನೇಮಿಸಲಾಗಿದೆ. ಸ್ಟ್ರಾಂಗ್​ರೂಮ್ೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    | ಆಶಪ್ಪ ಪೂಜಾರಿ ಮುಂಡರಗಿ ತಹಸೀಲ್ದಾರ್

    ಕಡಿಮೆ ಅಭ್ಯರ್ಥಿಗಳ ಗ್ರಾಪಂಗೆ ಆದ್ಯತೆ: ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಪಂಗಳಿಗೆ ಭಾನುವಾರ ಮತದಾನವಾಗಿದ್ದು, ಮತ ಎಣಿಕೆ ಕಾರ್ಯ ಪುರಸಭೆಯ ಕಲಾ ಮಹಾವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಡಿ. 30ರಂದು ನಡೆಯಲಿದೆ. ತಾಲೂಕಾಡಳಿತ ಮತ ಎಣಿಕೆ ಕೇಂದ್ರದಲ್ಲಿ ಕೈಗೊಂಡ ಸಿದ್ಧತೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಡಿವೈಎಸ್ಪಿ ಎಸ್.ಕೆ. ಪ್ರಹ್ಲಾದ ಸೋಮವಾರ ಪರಿಶೀಲಿಸಿ, ಪಿಎಎಸ್​ಐ ಶಿವಯೋಗಿ ಲೋಹಾರಗೆ ಸಲಹೆ-ಸೂಚನೆ ನೀಡಿದರು.

    ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಮಾತನಾಡಿ, ಡಿ. 30 ರಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕಾಗಿ ತಹಸೀಲ್ದಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗಳಿಗೆ ಹಾಗು ಸಹಾಯಕ ಸಿಬ್ಬಂದಿಗೆ 2 ಸುತ್ತಿನ ತರಬೇತಿ ನಡೆಸಲಾಗಿದೆ. 13 ಗ್ರಾಪಂಗಳ 167 ಸ್ಥಾನಗಳಿಗೆ 512 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತ ಎಣಿಕೆ ಕಾರ್ಯಕ್ಕಾಗಿ 7 ಕೊಠಡಿಗಳಲ್ಲಿ 25 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮೇಜಿಗೆ ಒಬ್ಬ ಮೇಲ್ವಿಚಾರಕ, ಇಬ್ಬರು ಸಿಬ್ಬಂದಿ ಸೇರಿ 75ಕ್ಕೂ ಹೆಚ್ಚು ಜನರನ್ನು ನೇಮಿಸಲಾಗಿದೆ. ಎಣಿಕೆ ಸಂದರ್ಭದಲ್ಲಿ ಆಯಾ ಭಾಗದ ಏಜೆಂಟರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮೊದಲು ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿರುವ ಗ್ರಾಪಂ ಎಣಿಕೆ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.

    ವಿಜಯೋತ್ಸವ, ಮೆರವಣಿಗೆ ನಿಷೇಧ: ಡಿವೈಎಸ್ಪಿ ಎಸ್.ಕೆ. ಪ್ರಹ್ಲಾದ ಮಾತನಾಡಿ, ಮತ ಎಣಿಕೆ ಕೇಂದ್ರದ ಸುತ್ತಲೂ 100 ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಬಂಧಪಟ್ಟವರ ಹೊರತುಪಡಿಸಿ ಯಾರೂ ಒಳ ಪ್ರವೇಶಿಸದಂತೆ ಬಂದೋಬಸ್ತ್ ಮಾಡಲಾಗು ವುದು. ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ, ಡಿಆರ್, ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಿಬ್ಬಂದಿ ಮತ್ತು ಏಜೆಂಟರಿಗೆ ಗುರುತಿನ ಪತ್ರ ನೀಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಂದು ಬಾಲ್​ಪೆನ್ ಹೊರತುಪಡಿಸಿ ಮೊಬೈಲ್​ಫೋನ್, ಲೈಟರ್ ಮತ್ತಿತರ ವಸ್ತುಗಳಿಗೆ ಅವಕಾಶವಿಲ್ಲ. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಫಲಿತಾಂಶ ನಂತರ ವಿಜಯೋತ್ಸವ, ಮೆರವಣಿಗೆ ಸಂಪೂರ್ಣ ನಿಷೇಧಿಸಲಾಗಿದೆ ಎಂದರು. ಪಿಎಸ್​ಐ ಶಿವಯೋಗಿ ಲೋಹಾರ ಇತರರಿದ್ದರು.

    ಮತ ಎಣಿಕೆ ಕೇಂದ್ರಗಳ ವಿವರ: ಗದಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯವು ಡಿ. 30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆ ನಡೆಯುವ ಕೇಂದ್ರಗಳ ವಿವರ ಇಂತಿದೆ. ಗದಗನ ಶ್ರೀ ಗುರುಬಸವ ಆಂಗ್ಲ ಮಾಧ್ಯಮ ಶಾಲೆ, ಲಕ್ಷೆ್ಮೕಶ್ವರದ ಪುರಸಭೆ ಕಲಾ ಮಹಾವಿದ್ಯಾಲಯ, ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜ್, ರೋಣದ ಡಿ. ಪೌಲ್ ಅಕಾಡೆಮಿ ಶಾಲೆ, ಗಜೇಂದ್ರಗಡದ ಶ್ರೀ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ, ನರಗುಂದದ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ಮತ ಎಣಿಕೆ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts