More

    ಬೀರಮಲೆಯಿಂದ ಬಾಲವನಕ್ಕೆ ರೋಪ್‌ವೇ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್‌ವೇ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸಂಜೀವ ಮಠಂದೂರು ಮುತುವರ್ಜಿಯಲ್ಲಿ 20 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    ಕಾರಂತರ ಬಾಲವನವನ್ನು ಹೆರಿಟೇಜ್ ವಿಲೇಜ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೂ ಉಸ್ತುವಾರಿ ಸಚಿವರು ಆಸಕ್ತಿ ತೋರಿದ್ದು, ಇದಕ್ಕೆ ಶಾಸಕರು ಕೈಜೋಡಿಸಿದ್ದಾರೆ. ಇದಕ್ಕಾಗಿ ಎರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಲಾ 10 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ.

    ಉದ್ದೇಶಿತ ಯೋಜನೆಯಂತೆ ಪಕ್ಕದ ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್‌ವೇ ನಿರ್ಮಿಸುವುದು ಕೂಡ ಸೇರಿದೆ. ಇದಲ್ಲದೆ ಬಾಲವನದ ಜಮೀನಿಗೆ ಹೆಚ್ಚುವರಿಯಾಗಿ 2 ಎಕರೆ ಸರ್ಕಾರಿ ಜಮೀನನ್ನು ಸೇರ್ಪಡೆಗೊಳಿಸಿ ಸಮಗ್ರ ಕಾರಂತರ ಬದುಕು ಮತ್ತು ಸಾಹಿತ್ಯ, ಸಾಧನೆ, ಹೋರಾಟಗಳನ್ನು ಚಿತ್ರಿಸುವ ಉದ್ದೇಶ ಹೊಂದಲಾಗಿದೆ. ತ್ರಿಡಿ ಥಿಯೇಟರ್ ನಿರ್ಮಾಣ, ಕಾರಂತರ ನಾಟ್ಯಶಾಲೆ, ಮುದ್ರಣಾಲಯ, ವಾಚನಾಲಯಗಳ ಅಭಿವೃದ್ಧಿ ಮತ್ತು ಇಡೀ ಪರಿಸರವನ್ನು ಮಾದರಿ ನೆಲೆಯಾಗಿ ರೂಪುಗೊಳಿಸುವ ಯೋಜನೆ ರೂಪಿಸಲಾಗಿದೆ.

    ಗ್ರಂಥಾಲಯ ಕಾಮಗಾರಿ ತಿಂಗಳೊಳಗೆ ಪೂರ್ಣ: ರಾಜ್ಯಮಟ್ಟದಲ್ಲಿ ರಚಿಸಲಾದ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಪುತ್ತೂರು ಎಸಿ ನೇತೃತ್ವದ ಬಾಲವನ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಅಭಿವೃದ್ಧಿಗೆ ಯೋಜನೆ ರೂಪಿಸಿತು. ಆ ಅನುದಾನ ಬಳಕೆ ಆಗಬೇಕಿದೆ. ಜತೆಗೆ ಗ್ರಂಥಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

    5.90 ಎಕರೆ ವಿಸ್ತೀರ್ಣದಲ್ಲಿ ಬಾಲವನ: ನಾಲ್ಕೂವರೆ ದಶಕಗಳ ಕಾಲ ಕಾರಂತರು ನೆಲೆಸಿರುವ ಬಾಲವನ ಪರಿಸರ ಸಾಹಿತ್ಯ, ಸಾಂಸ್ಕೃತಿಕ ಸಮೃದ್ಧ ತಾಣವಾಗಿದ್ದು, 5.90 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ಕಾರಂತರ ಮನೆ, ಮುದ್ರಣಾಲಯ, ನಾಟ್ಯಾಲಯ, ರಂಗಮಂದಿರ, ವಾಚನಾಲಯಗಳಿದ್ದು, ಕಾರಂತರಿಗೆ ದೊರೆತ ಜ್ಞಾನಪೀಠ ಪ್ರಶಸ್ತಿಯೂ ಇದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಜುಪಟುಗಳನ್ನು ರೂಪಿಸಿದ ಈಜುಕೊಳವೂ ಬಾಲವನ ದಲ್ಲಿದೆ.

    ಶಿವರಾಮ ಕಾರಂತರ ಬಾಲವನವನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರಂತರು ವಾಸಿಸುತ್ತಿದ್ದ ಮನೆ, ವಾಚನಾಲಯವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ, ಮಕ್ಕಳ ಚಟುವಟಿಕೆಗೆ ಪೂರಕವಾಗಿ ಮಕ್ಕಳ ರೈಲು ಸೇರಿದಂತೆ ಹತ್ತಾರು ಯೋಜನೆಗಳ ಅನುಷ್ಠಾನಕ್ಕೆ ಮುಂದಡಿ ಇಡಲಾಗಿದೆ.
    -ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts