More

    ಬಜಗೋಳಿಯಲ್ಲಿ ತೀರ್ಥಂಕರ ವನ

    ಯಶೋಧರ ವಿ.ಬಂಗೇರ, ಮೂಡುಬಿದಿರೆ

    ಪ್ರಾಚೀನ ಗ್ರಂಥಗಳು, ಪಾರಂಪರಿಕ ತಾಣಗಳ ಉಳಿವಿಗಾಗಿ ಶ್ರಮಿಸುತ್ತಿರುವ ಮೂಡುಬಿದಿರೆ ಜೈನಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಬಜಗೋಳಿ ಧರ್ಮಶಾಲೆ ಜಾಗದಲ್ಲಿ ತೀರ್ಥಂಕರ ವನ ಹಾಗೂ ನವಗ್ರಹ ವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಜ್ಞರ ತಂಡ ಸಾಥ್ ನೀಡಿದೆ.

    ಕೆರ್ವಾಶೆಯಿಂದ ಉತ್ತರಕ್ಕೆ ನಾಲ್ಕು ಕಿ.ಮೀ ದೂರದಲ್ಲಿ ಕಾರ್ಕಳ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಿಂದ ಒಳಗೆ 300 ಮೀಟರ್ ದೂರದಲ್ಲಿರುವ ಧರ್ಮಶಾಲೆಯ ಪರಿಸರದಲ್ಲಿ ತೀರ್ಥಂಕರ ವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರಾಚೀನ ತೀರ್ಥಕ್ಷೇತ್ರವಾದ ಧರ್ಮಶಾಲೆಯ ಪೂಪಾಡಿಕಲ್ಲು ಪರಿಸರದ ಎರಡು ಎಕರೆ ಜಾಗದಲ್ಲಿ ಜೈನ ಧ್ಯಾನಕೇಂದ್ರ, ಯೋಗ ಕೇಂದ್ರ ಸ್ಥಾಪನೆ, ಅದರೊಂದಿಗೆ ಜೈನ ಧರ್ಮ ಹಾಗೂ ಜೈನ ಆಹಾರ ಪದ್ಧತಿ ಕುರಿತ ಸಾರ್ವಜನಿಕರಿಗೆ ಮಾಹಿತಿ, ಪ್ರಾತ್ಯಕ್ಷಿಕೆ ನೀಡುವ ಯೋಜನೆ ಇದೆ.

    ವಿಶಿಷ್ಟ ವಿನ್ಯಾಸ: ಧ್ಯಾನಕೇಂದ್ರದ ಆವರಣದೊಳಗಿನ 10 ಸೆಂಟ್ಸ್ ಜಾಗದಲ್ಲಿ 24 ಮಂದಿ ತೀರ್ಥಂಕರರು ತಪಗೈದ ತಪೋವನ ಹಾಗೂ ತೀರ್ಥಂಕರ ವನ ನಿರ್ಮಾಣಗೊಳ್ಳಲಿದೆ. ಇಲ್ಲಿ ಪ್ರಥಮ ಸ್ತಂಭ, ದ್ವಿತೀಯ ಸ್ತಂಭ, ತೃತೀಯ ಸ್ತಂಭ, ಚತುರ್ಥ ಸ್ತಂಭಗಳು ಒಳಗೊಂಡಂತೆ ರಚನೆಯಿರಲಿದೆ. ಪ್ರಥಮ ಸ್ತಂಭ ಹಾಗೂ ಚತುರ್ಥ ಸ್ತಂಭದ ನಡುವೆ ಪ್ರವೇಶದ್ವಾರವಿದ್ದು, ಪ್ರತಿ ಸ್ತಂಭಗಳ ಮಧ್ಯೆ, 9 ಅಥವಾ 18 ಅಡಿಗಳ ಅಂತರದಲ್ಲಿ ತಲಾ 6 ಗಿಡಗಳನ್ನು ನೆಡಲಾಗುತ್ತದೆ. ಈ ವನದಲ್ಲಿ 24 ತೀರ್ಥಂಕರರ ಚರಣ ಸ್ಥಾಪನೆಯಾಗಲಿದೆ. ತೀರ್ಥಂಕರ ವನದೊಂದಿಗೆ ಔಷಧ ಸಸ್ಯಗಳ ಮಹತ್ವ ಸಾರುವ ನವಗ್ರಹ ವನವಾಗಿಯೂ ರೂಪುಗೊಳ್ಳಲಿದೆ.

    ಆಳ್ವಾಸ್ ತಜ್ಞರು ಸಾಥ್
    ಸಂಸ್ಕೃತಿ, ಕಲೆ, ಸಾಮಾಜಿಕ ಚಟುವಟಿಕೆಗಳಲ್ಲಿ ಜೈನಮಠಕ್ಕೆ ಈಗಾಗಲೇ ಸಾಥ್ ನೀಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಜ್ಞರ ತಂಡ ಈ ವನ ನಿರ್ಮಾಣದಲ್ಲೂ ಸಾಥ್ ನೀಡಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನೇತೃತ್ವದಲ್ಲಿ ಆಳ್ವಾಸ್ ಆಯುರ್ವೇದ ಹಾಗೂ ಸಸ್ಯಶಾಸ್ತ್ರ ವಿಭಾಗದ ತಜ್ಞರು ತೀರ್ಥಂಕರ ವನ ಹಾಗೂ ನವಗ್ರಹ ವನ ನಿರ್ಮಾಣದ ಯೋಜನೆಗೆ ಕೈಜೋಡಿಸಿದ್ದಾರೆ.

    ಪ್ರಕೃತಿ ಆರಾಧನೆ ಪರಂಪರೆಗೆ ಮನ್ನಣೆ ನೀಡಿ ಜೈನಧರ್ಮದ ಮಹತ್ವ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ ತೀರ್ಥಂಕರ ವನವನ್ನು ಬಜಗೋಳಿ ಧರ್ಮಶಾಲೆಯಲ್ಲಿ ಸ್ಥಾಪಿಸುತ್ತಿದ್ದೇವೆ. ನಮ್ಮ ಚಿಂತನೆಗೆ ವಿವೇಕ್ ಆಳ್ವ ಮುಂದಾಳತ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ತಜ್ಞರು ಸಾಥ್ ನೀಡಿದ್ದು, ಮಾದರಿ ವನವಾಗಿ ತೀರ್ಥಂಕರವನ ನಿರ್ಮಾಣವಾಗುವ ಭರವಸೆ ಇದೆ.
    ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಮಠ, ಮೂಡುಬಿದಿರೆ

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥೆ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಆಶಯದಂತೆ ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಸಂಸ್ಕೃತಿಗೆ ಪ್ರಾಮುಖ್ಯತೆ ನೀಡುತ್ತಿದೆ. ಭಟ್ಟಾರಕ ಸ್ವಾಮೀಜಿ ಆಸಕ್ತಿ, ಮಾರ್ಗದರ್ಶನದಿಂದ ತೀರ್ಥಂಕರವನ ನಿರ್ಮಾಣದ ಜತೆ ಕೈಜೋಡಿಸಲು ಮುಂದಾಗಿದ್ದೇವೆ. ಹಿಂದೆ ಅಲಂಗಾರಿನಲ್ಲಿ ಜೈನಮಠ ಜಾಗದಲ್ಲಿ 800 ಫಲಕೊಡುವ ಗಿಡಗಳನ್ನು ನೆಟ್ಟಿದ್ದು, ಅಂತರ್ಜಲ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಇಂಗುಗುಂಡಿ ನಿರ್ಮಾಣ ಮಾಡಿದ್ದಾರೆ.
    ವಿವೇಕ್ ಆಳ್ವ, ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts