More

    ಬಯೋ ಡೀಸೆಲ್ ಮೇಲೆ ಆರು ಜನ ಪಿಎಚ್‌ಡಿ ಅಧ್ಯಯನ

    ಅಶೋಕ ಶೆಟ್ಟರ,
    ಬಾಗಲಕೋಟೆ: ರಾಜ್ಯಕ್ಕೆ ಮಾದರಿ ಆಗಿರುವ ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಬಯೋ ಡೀಸೆಲ್ ಮೇಲೆ ಈಗಾಗಲೇ ಇಬ್ಬರು ಪಿಎಚ್‌ಡಿ ಪದವಿ ಪಡೆದಿದ್ದು, ಇನ್ನೂ ನಾಲ್ವರು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.

    ಇಂಜಿನಿಯರಿಂಗ್ ಕಾಲೇಜಿನ ಡಾ.ಕೃಷ್ಣಮೂರ್ತಿ ಭಟ್ ಈಗಾಗಲೇ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರ ಜತೆಗೆ ರಾಜೇಶ್ ಗುರಾಣಿ ಅವರ ಪಿಎಚ್‌ಡಿ ಮುಕ್ತಾಯದ ಹಂತದಲ್ಲಿದ್ದಾರೆ. ಇವರಲ್ಲಿ ಇದೀಗ ಇನ್ನೂ ನಾಲ್ವರು ಪಿಎಚ್‌ಡಿ ಅಧ್ಯಯನ ಆರಂಭಿಸಿದ್ದಾರೆ.

    ಕರಿದ ಎಣ್ಣೆಯಿಂದ ಡೀಸೆಲ್
    ಕಳೆದ ಎಂಟು ವರ್ಷಗಳ ಹಿಂದೆ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಬಯೊ ಡೀಸೆಲ್ ಘಟಕ ಅಳವಡಿಸಿದ್ದು, ಆರಂಭದಲ್ಲಿ ಹೊಂಗೆ ಬೀಜ ಹಾಗೂ ಬೇವಿನ ಬೀಜದಿಂದ ಬಯೊ ಡೀಸೆಲ್ ಉತ್ಪಾದನೆ ಮಾಡುತ್ತಿದ್ದರು. ಈಗ ಕರಿದ ಅಡುಗೆ ಎಣ್ಣೆಯಿಂದ ಬಯೊ ಡೀಸೆಲ್ ಉತ್ಪಾದನೆ ಆರಂಭಿಸಿದ್ದು, ಡೀಸೆಲ್‌ಗೆ ಉತ್ತಮ ಬೇಡಿಕೆ ಕಂಡು ಬಂದಿದೆ. ಪ್ರತಿ ದಿನ 200 ಲೀಟರ್ ಉತ್ಪಾದನಾ ಸಾಮರ್ಥ್ಯ ಇದ್ದರೂ ಅದಕ್ಕೆ ತಕ್ಕಷ್ಟು ಬಳಕೆ ಮಾಡಲಾಗದ ಅಡುಗೆ ಎಣ್ಣೆ ತ್ಯಾಜ್ಯ ಸಿಗುತ್ತಿಲ್ಲ.
    ಬಾಗಲಕೋಟೆ ನಗರಸಭೆ ಸಹಕಾರದೊಂದಿಗೆ ಅಡುಗೆ ಎಣ್ಣೆ ತ್ಯಾಜ್ಯದಿಂದ ಬಯೊ ಡೀಸೆಲ್ ಉತ್ಪಾದನೆ ಕಾರ್ಯ ರಾಜ್ಯದ ಗಮನವನ್ನು ಸೆಳೆದಿದೆ. ಕಳೆದ ಫೆಬ್ರುವರಿಯಲ್ಲಿ ಈ ವಿಚಾರ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸಭೆಯಲ್ಲಿ ಚರ್ಚೆ ಆಗಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದಲ್ಲಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸುವ ಕುರಿತು ಮೌಖಿಕ ಚರ್ಚೆ ಆಗಿದೆ ಎಂದು ಬಾಗಲಕೋಟೆ ನಗರಸಭೆ ಪರಿಸರ ಅಭಿಯಂತರ ಎಫ್.ವೈ. ಕಳಸರೆಡ್ಡಿ ಮಾಹಿತಿ ನೀಡಿದ್ದಾರೆ.

    ಕರಿದ ಎಣ್ಣೆಯಿಂದ ಬಯೊ ಡೀಸೆಲ್ ಉತ್ಪಾದನೆ ಹೇಗೆ?
    ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದಲ್ಲಿ 50 ಲೀಟರ್ ಬಯೋ ಡೀಸೆಲ್ ಸಾಮರ್ಥ್ಯದ ಘಟಕ ಅಳವಡಿಸಿದ್ದಾರೆ. ಅಡುಗೆ ಎಣ್ಣೆ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದನೆ ಮಾಡಲಾಗುತ್ತಿದೆ. ಮೊದಲು ಕರಿದ ಎಣ್ಣೆಯನ್ನು ಮೊದಲ ಟ್ಯಾಂಕ್‌ಗೆ ಹಾಕಿ 60 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾಯಿಸಲಾಗುತ್ತದೆ. ಬಳಿಕ ಮೆಥೆನಾಲ್ ಹಾಗೂ ಕಾಸ್ಟಿಕ್ ಸೋಡಾ ಮಿಶ್ರಣ ಹಾಕಲಾಗುತ್ತದೆ. ಒಂದೂವರೆ ಗಂಟೆ ಬಳಿಕ ಗ್ಲಿಸರಿನ್ ಮತ್ತು ಡೀಸೆಲ್ನ್ನು ಪ್ರತ್ಯೇಕ ಮಾಡಲಾಗುತ್ತದೆ. ಆ ನಂತರದಲ್ಲಿ ವಾಶಿಂಗ್ ಟ್ಯಾಂಕರ್ ಹಾಕಿ 120 ಡಿಗ್ರಿ ಸೆಲ್ಸಿಯಸ್ ಬಿಸಿ ಮಾಡಲಾಗುತ್ತದೆ. ಬಳಿಕ ಉತ್ಪಾದನೆಯಾಗುವ ಡೀಸೆಲ್‌ನ್ನು ತಣ್ಣಗಾದ ಮೇಲೆ ವಾಹನಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮೇಟಿ ಹೇಳುತ್ತಾರೆ.

    ಉಪ ಉತ್ಪನ್ನಗಳ ತಯಾರಿಕೆ
    ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಅಳವಡಿಸಿರುವ ಘಟಕದಲ್ಲಿ ಬಯೋ ಡೀಸೆಲ್ ಜತೆಗೆ ಉಪ ಉತ್ಪನ್ನಗಳನ್ನು ಸಹ ಉತ್ಪಾದನೆ ಮಾಡಲಾಗುತ್ತಿದೆ. ಕರಿದ ಅಡುಗೆ ಎಣ್ಣೆಯಿಂದ ಗ್ಲಿಸರಿನ್, ಗ್ಲಿಸರಿನ್ ಸೋಪ್, ಫಿನಾಯಿಲ್ ತಯಾರಿಸಲಾಗುತ್ತಿದೆ. ಅಲ್ಲದೆ, ಹೊಂಗೆ ಮತ್ತು ಬೇವಿನ ಬಯೋ ಡೀಸೆಲ್ನಿಂದ ಹಿಂಡಿಯನ್ನು ಸಹ ಉಪ ಉತ್ಪನ್ನವಾಗಿದೆ. ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯ. ಉಪ ಉತ್ಪನ್ನಗಳ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಬಯೋ ಡೀಸೆಲ್‌ನ್ನು ಇನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಇದಲ್ಲದೆ, ಕರಿದ ಎಣ್ಣೆಯಿಂದ ಬಯೋ ಡೀಸೆಲ್‌ನಿಂದ ಉತ್ಪಾದನೆ ಮಾಡುವುದರಿಂದ ಪರಿಸರ ರಕ್ಷಣೆಗೂ ಹೆಚ್ಚಿನ ಅನುಕೂಲವಾಗುತ್ತದೆ. ಮುಖ್ಯವಾಗಿ ಕರಿದ ಎಣ್ಣೆ ಮರು ಬಳಕೆಯಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಯೋ ಡೀಸೆಲ್ ಉತ್ಪಾದನೆಗೆ ಈ ಎಣ್ಣೆ ಬಳಕೆ ಮಾಡುವುದರಿಂದ ಜನರ ಆರೋಗ್ಯ ರಕ್ಷಣೆಗೂ ಕಾರಣವಾಗುತ್ತದೆ ಎನ್ನುವುದು ಡಾ.ಭಾರತಿ ಮೇಟಿ ಅವರ ಅಭಿಪ್ರಾಯ.

    ಸದ್ಯ ಬಾಗಲಕೋಟೆ ನಗರಸಭೆಯವರು ನಗರದಲ್ಲಿ ಹೋಟೆಲ್, ಚಹಾದ ಅಂಗಡಿಗಳಿಂದ ಕರಿದ ಎಣ್ಣೆಯನ್ನು ಲೀಟರ್‌ಗೆ 15 ರೂ. ಗಳಂತೆ ಖರೀದಿ ಮಾಡಿ ಅದನ್ನು ಇಂಜಿನಿಯರಿಂಗ್ ಕಾಲೇಜಿನ ಘಟಕಕ್ಕೆ ಪೂರೈಕೆ ಮಾಡುತ್ತಾರೆ. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಕರಿದ ಎಣ್ಣೆ ಸಂಗ್ರಹ ಕಡಿಮೆ ಆಗಿದೆ. ಪ್ರತಿ ವಾರ 100 ಲೀಟರ್‌ನಷ್ಟು ಎಣ್ಣೆ ಮಾತ್ರ ಸಿಗುತ್ತಿದೆ. ಇದರ ಜೊತೆಗೆ ಇದನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಸಂಗ್ರಹಿಸುವ ಕಾರ್ಯದ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ನಗರಸಭೆ ಪರಿಸರ ಅಭಿಯಂತರ ಎಫ್.ವೈ. ಕಳಸರೆಡ್ಡಿ ಹೇಳುತ್ತಾರೆ.

    65 ರೂ. ಗೆ ಲೀಟರ್
    ಸದ್ಯ ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉತ್ಪಾದನೆ ಮಾಡುವ ಬಯೋ ಡೀಸೆಲ್ನ್ನು ಲೀಟರ್‌ಗೆ 65 ರೂ. ಗಳಂತೆ ಮಾರಾಟ ಮಾಡಲಾಗುತ್ತಿದೆ. ಅನೇಕ ಆಟೋ, ಇತರ ವಾಹನಗಳ ಸವಾರರು ಖರೀದಿ ಮಾಡುತ್ತಿದ್ದಾರೆ. ಬೇಡಿಕೆ ದೊಡ್ಡ ಮಟ್ಟದಲ್ಲಿ ಇದ್ದು, ಅದಕ್ಕೆ ತಕ್ಕಂತೆ ಉತ್ಪಾದನೆ ಇಲ್ಲವಾಗಿದೆ. ಶೇ.20ರಷ್ಟು ಬಯೋ ಡೀಸೆಲ್ ಬಳಕೆ ಮಾಡಲು ಸರ್ಕಾರವೇ ಒಪ್ಪಿಗೆ ನೀಡಿದೆ. ಬಯೋ ಡೀಸೆಲ್ ಬಳಕೆಯಿಂದ ವಾಹನಗಳ ಯಂತ್ರಗಳಿಗೆ ಯಾವುದೇ ತೊಂದರೆ ಇಲ್ಲವಾಗಿದೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಇದೀಗ ಬಾಗಲಕೋಟೆಯಲ್ಲಿ ಖಾಸಗಿಯಾಗಿಯೂ ಇಬ್ಬರು ಈ ಬಯೋ ಡೀಸೆಲ್ ಘಟಕ ಅಳವಡಿಸಿದ್ದಾರೆ.

    ಹೊಂಗೆ, ಬೇವಿನ ಬೀಜದ ಜತೆಗೆ ಕರಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್ ಉತ್ಪಾದನೆ ಮಾಡುತ್ತಿದ್ದೇವೆ. ಒಳ್ಳೆಯ ಬೇಡಿಕೆ ಇದೆ. ಜತೆಗೆ ಸ್ವಯಂ ಉದ್ಯೋಗಕ್ಕೂ ಇದು ದಾರಿ ಮಾಡಿಕೊಡುತ್ತಿದೆ. ಬಯೋ ಡೀಸೆಲ್ ಜತೆಗೆ ಉಪ ಉತ್ಪನ್ನಗಳ ತಯಾರಿಕೆ ಕಡೆಗೂ ಗಮನ ಹರಿಸಿದಲ್ಲಿ ಕಡಿಮೆ ಬೆಲೆಗೆ ಡೀಸೆಲ್ ಮಾರಾಟ ಮಾಡಬಹುದಾಗಿದೆ. ನಮ್ಮ ಕಾಲೇಜಿನಲ್ಲಿ ಕಳೆದ 8 ವರ್ಷಗಳಿಂದ ಬಯೋ ಡೀಸೆಲ್ ಉತ್ಪಾದನೆ ಮಾಡಲಾಗುತ್ತಿದೆ.
    ಡಾ.ಭಾರತಿ ಮೇಟಿ
    ಮುಖ್ಯಸ್ಥರು, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗ, ಬಾಗಲಕೋಟೆ

    ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋ ಡೀಸೆಲ್ ಘಟಕ ಇದೆ. ಬಯೋ ಡೀಸೆಲ್ ಬಳಕೆಯಿಂದ ಪರಿಸರ ಹಾನಿ ತಡೆಯಬಹುದು. ಜತೆಗೆ ಡೀಸೆಲ್ ಬೆಲೆ ಹೆಚ್ಚುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಬಯೋ ಡೀಸೆಲ್ ಬಳಕೆ ಉತ್ತಮ. ವಾಹನಗಳಿಗೆ ಬಳಿಕೆ ಮಾಡುವ ಬಗ್ಗೆ ಅಧ್ಯಯನ ಮಾಡಿದ್ದು, ಉತ್ತಮ ಫಲಿತಾಂಶ ಬಂದಿದೆ. ಸ್ವಯಂ ಉದ್ಯೋಗಕ್ಕೂ ಹೆಚ್ಚಿನ ಅವಕಾಶ ಇದೆ.
    ರಾಜೇಶ ಗುರಾಣಿ, ಬಯೊ ಡೀಸೆಲ್ ಮೇಲೆ ಪಿಎಚ್‌ಡಿ ಮಾಡಿರುವ ವಿದ್ಯಾರ್ಥಿ
    ಬಯೊ ಡೀಸೆಲ್ ಮೇಲೆ ಪಿಎಚ್‌ಡಿ ಮಾಡಿರುವ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts