More

    ರಾಜಕೀಯದಲ್ಲಿ ಧರ್ಮ ಸೇರ್ಪಡೆ

    ಬಾಗಲಕೋಟೆ : ಪ್ರಜಾಪ್ರಭುತ್ವ ಉಳಿಸಿ-ಬೆಳೆಸಿ ಹಾಗೂ ಪರಿಸರ ಸಂರಕ್ಷಣೆಗಾಗಿ ಕಾಗಿನೆಲೆಯಿಂದ ಆರಂಭಿಸಿರುವ ಸಂತ, ಶರಣರ ಸಂದೇಶ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಮಾ.1 ರಂದು ಕೂಡಲಸಂಗಮಕ್ಕೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ಜನತಂತ್ರ ಸಮಾಜ ಸಂಘಟನೆ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ತಿಳಿಸಿದರು.

    ಅಂದು ಬೆಳಗ್ಗೆ 11 ಗಂಟೆಗೆ ಕೂಡಲಸಂಗಮದ ಸಾರಂಗಮಠ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿಗಳಾದ ದೇವನೂರ ಮಹಾದೇವ, ರಂಜಾನ್ ದರ್ಗಾ ಭಾಗವಹಿಸಲಿದ್ದಾರೆ. ಫೆ.24 ರಂದು ಆರಂಭವಾಗಿದ್ದ ಯಾತ್ರೆ ಷರೀಫ್‌ರ ಶಿಶುನಾಳ, ಗದಗ, ಕಪ್ಪತಗುಡ್ಡ, ಧಾರವಾಡ ಸೇರಿ ವಿವಿಧೆಡೆ ಸಂಚರಿಸಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಯಾತ್ರೆ ವೇಳೆ ಸಂವಾದ, ಹಾಡುಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬುದ್ಧ-ಬಸವ-ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಿದೆ. ಸದ್ಯ ಸಂವಿಧಾನ, ನ್ಯಾಯ, ಭ್ರಾತೃತ್ವ ಗಂಡಾಂತರ ಎದುರಿಸುತ್ತಿವೆ. ಮಾನವೀಯ ಮೌಲ್ಯಗಳು ಅಧೋಗತಿಗೆ ಇಳಿದಿವೆ. ಸಂವಿಧಾನ ವಿರೋಧಿ ನಡೆಗಳು ಭಯದ ವಾತಾವರಣ ನಿರ್ಮಿಸುತ್ತಿವೆ. ಶಿಕ್ಷಣ, ಆರೋಗ್ಯ ಖಾಸಗಿಕರಣದಿಂದ ಜನ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಗಂಭೀರ ಚಿಂತನೆ ನಡೆಸುತ್ತಿಲ್ಲ. ಅನವಶ್ಯಕವಾಗಿ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಜನರ ಮಧ್ಯೆ ಕಂದಕ ಸೃಷ್ಟಿಸಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಧರ್ಮ ಬೆರೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೀಗಾಗಿ ಯಾತ್ರೆ ಮೂಲಕ ಶಿಶುನಾಳ ಷರೀಫ್, ಕಬೀರ ದಾಸರ ಸಂದೇಶ ಜಾಗೃತಿಗೊಳಿಸಲಾಗುತ್ತಿದೆ. ಸಂಸ್ಕೃತಿ, ಸಮಾಜ, ಪ್ರಕೃತಿ ಒಂದಾದಾಗ ಮಾತ್ರ ಸಮಾನತೆ, ಪ್ರಜಾಪ್ರಭುತ್ವ ಉಳಿಯುತ್ತದೆ ಎಂದರು.

    ಆಂದೋಲನದ ಮುಖಂಡರಾದ ದೀಪಕ್ ಕಾಮತ್, ನಾಗರಾಜ ಹೊಂಗಲ್, ಎಂ.ಎ. ಅಗಸಿಮುಂದಿನ, ರಾಮಯ್ಯ ಎಚ್. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಾರ್ವಜನಿಕ ಜೀವನದಲ್ಲಿ ಇರಬಾರದು!
    ಜನಾರ್ದನ ರೆಡ್ಡಿ, ಆನಂದ ಸಿಂಗ್‌ನಂಥವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ನಾಲಾಯಕ್. ಆನಂದ ಸಿಂಗ್ ಅವರ ಮೇಲೆ 16 ಪ್ರಕರಣಗಳಿವೆ. ಅವರನ್ನು ಅರಣ್ಯ ಮಂತ್ರಿ ಮಾಡುತ್ತಾರೆ ಎಂದರೆ ಏನರ್ಥ. ಕಟುಕನ ಕೈಯಲ್ಲಿ ಕುರಿ ಕೊಟ್ಟಂತೆ ಆಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದಾರಾಮಯ್ಯ ಇಂತಹವರನ್ನು ಬೆಳೆಸುತ್ತಾರಲ್ಲ ನಾಚಿಕೆಯಾಗಬೇಕು ಎಂದು ಟೀಕಿಸಿದರು.

    ಗೃಹ ಸಚಿವ ಷಾ ವಿರುದ್ಧ ಆಕ್ರೋಶ
    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ವ್ಯಕ್ತಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಹರಣ ಮಾಡುತ್ತಿದ್ದಾರೆ. ಜನರ ನಡುವೆ ಜಗಳ ಹಚ್ಚಿ ಮೋಜು ನೋಡುತ್ತಿದ್ದಾರೆ. ದೆಹಲಿಯಲ್ಲಿ ಹೊಡೆದಾಟ ನಡೆಯುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸಂವಿಧಾನದ ಅಂಗ ಸಂಸ್ಥೆಗಳ ಸ್ವಾತಂತ್ರೃ ಕಿತ್ತುಕೊಳ್ಳುತ್ತಿದ್ದಾರೆ. ನ್ಯಾಯದ ಬಗ್ಗೆ ಧ್ವನಿ ಎತ್ತಿದ ನ್ಯಾಯಾಧೀಶರನ್ನೇ ವರ್ಗಾವಣೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ದಿನಗಳು ಮತ್ತೆ ಮರುಕಳುಹಿಸುತ್ತಿವೆ ಎಂದು ಹಿರೇಮಠ ಹೇಳಿದರು.

    ನಾಲಿಗೆ ಮೇಲೆ ಹಿಡಿತವಿರಲಿ
    ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇಲ್ಲ. ದೇವರು ನಾಲಿಗೆ ಕೊಟ್ಟಿದ್ದಾನೆ ಎಂದ ಮಾತ್ರಕ್ಕೆ ಬೇಕಾದ ಹಾಗೇ ಮಾತನಾಡುವುದು ಸರಿಯಲ್ಲ. ಸ್ವಾತಂತ್ರೃ ಹೋರಾಟಕ್ಕೆ ವೀರ ಸಾರ್ವರಕರ ಕ್ಷಮಾಪಣೆ ಪತ್ರ ಬರೆದುಕೊಟ್ಟು ಹೊರ ಬಂದಿದ್ದಾರೆ. ಇಂತಹ ದರಿದ್ರರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ಶಾಸಕ ಯತ್ನಾಳ, ಸಂಘ ಪರಿವಾರ ವಿರುದ್ಧ ಎಸ್.ಆರ್.ಹಿರೇಮಠ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts