More

    ಕಾಟಾಚಾರದ ಸಭೆಯಾಗದಿರಲಿ…!

    ಅಶೋಕ ಶೆಟ್ಟರ,
    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ನೀರಾವರಿ ಯೋಜನೆಗಳ ಬಗ್ಗೆ ಬಜೆಟ್ ಪೂರ್ವದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿದ್ದಾರೆ.

    ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಶೇ. 90ಕ್ಕಿಂತ ಅಧಿಕ ಭಾಗ ಒಳಪಡುವುದು ಬಾಗಲಕೋಟೆ ಜಿಲ್ಲೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ವಿಷಯವಾಗಿ ಬಾಗಲಕೋಟೆ ಜಿಲ್ಲೆ ಕೇಂದ್ರೀಕೃತವಾಗಿ ಅಧಿಕಾರಿಗಳ ಸಭೆ ನಡೆದಿಲ್ಲ ಎನ್ನುವುದು ಗಮನಾರ್ಹ.

    ಕಾಂಗ್ರೆಸ್ ಸರ್ಕಾರದಲ್ಲಿ ಎಸ್.ಆರ್. ಪಾಟೀಲ ಉಸ್ತುವಾರಿ ಸಚಿವರಾಗಿದ್ದ ವೇಳೆ ಇಂಥದ್ದೊಂದು ಸಭೆ ನಡೆದಿತ್ತು. ಆ ಬಳಿಕ ಸಭೆಗಳು ನಡೆಯಲಿಲ್ಲ. ಯೋಜನೆ ಅನ್ವಯ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಳ್ಳುವ ಬಗ್ಗೆ ಯಾವ ಸಚಿವರೂ ಇಲ್ಲಿ ಸಭೆ ನಡೆಸಲಿಲ್ಲ. ಇದೀಗ ಡಿಸಿಎಂ ಆ ಕೆಲಸಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯೇ ಸರಿ.

    ಆದರೆ, ಇದೀಗ ಸಭೆ ಕೇವಲ ಕಾಟಾಚಾರಕ್ಕೆ ಆಗದೆ ಆಗಿರುವ ಲೋಪದೋಷಗಳ ಬಗ್ಗೆ ವಿಮರ್ಶೆ, ನಡೆದಿರುವ ಹಗರಣಗಳನ್ನು ಬಯಲಿಗೆ ತರುವ ಕೆಲಸ ಆಗಬೇಕಾಗಿದೆ ಎನ್ನುವುದು ಯೋಜನಾ ಬಾಧಿತ ಸಂತ್ರಸ್ತರ ಆಗ್ರಹ.

    ಮುಖ್ಯವಾಗಿ ಯೋಜನೆಯ ಹಂತ-1 ಮತ್ತು 2ಕ್ಕೆ ಮುಳುಗಡೆ ಆಗಿರುವ ಗ್ರಾಮಗಳಿಗೆ ಕಲ್ಪಿಸಿರುವ ಪುನರ್ ವಸತಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಾಜು 180 ಕೋಟಿ ರೂ.ಗಳಿಗೆ ಅಧಿಕ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಅನೇಕ ಕಡೆಗೆ ಕೆಲಸ ಮಾಡದೇ ದುಡ್ಡು ದೋಚಿದ್ದಾರೆ ಎನ್ನುವುದು, ಟೆಂಡರ್ ನಿಯಮ ಉಲ್ಲಂಘನೆ, ಇನ್ನೂ ಕೆಲವು ಕಡೆಗೆ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಆರೋಪಗಳು ಇದ್ದವು. ಈ ಬಗ್ಗೆ ಕೆಲ ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದವು. ಆದರೆ, ಆ ಬಗ್ಗೆ ಅಂದಿನ ಸರ್ಕಾರ ಯಾವುದೇ ಕ್ರಮಕ್ಕೂ ಮುಂದಾಗದೆ ಹಗರಣ ಮುಚ್ಚಿ ಹಾಕಿದೆ ಎನ್ನುವ ಆರೋಪಗಳು ಇವೆ.

    ಇದೀಗ ಡಿಸಿಎಂ ಗೋವಿಂದ ಕಾರಜೋಳ ಅವರೆ ಜಿಲ್ಲಾ ಉಸ್ತುವಾರಿ ಸಚಿವರು, ಆಲಮಟ್ಟಿ ಜಲಾಶಯದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಆಗಿದ್ದು, ಮುಚ್ಚಿ ಹೋಗಿರುವ ಆ ಹಗರಣಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ. ಸರ್ಕಾರದ ತೆರಿಗೆ ದುಡ್ಡು ಎಲ್ಲೆಲ್ಲಿ ಯಾರ್ಯಾರೆಲ್ಲ ಸೇರಿಕೊಂಡು ನುಂಗಿ ಹಾಕಿದ್ದಾರೆ ಎನ್ನುವುದನ್ನು ಬೆಳಕಿಗೆ ತರುವ ಕೆಲಸವನ್ನು ಮಾಡಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಮೂಲಕ ಮುಂದಿನ ದಿನಗಳಲ್ಲಿ ಯೋಜನೆಯಲ್ಲಿ ನಡೆಯುವ ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳು ಭ್ರಷ್ಟಾಚಾರಮುಕ್ತವಾಗಿ ನಡೆಸುವ ಬಗ್ಗೆ ಸಾರ್ವಜನಿಕರಿಗೆ ಒಂದು ಸಂದೇಶ ರವಾನಿಸಬೇಕಿದೆ. ಆ ಕೆಲಸಕ್ಕೆ ಡಿಸಿಎಂ ಗೋವಿಂದ ಕಾರಜೋಳ ಮುಂದಾಗ್ತಾರಾ ಎನ್ನುವುದು ಈಗಿರುವ ಪ್ರಶ್ನೆ.

    ಒತ್ತಾಯಪೂರ್ವಕ ಹಸ್ತಾಂತರ
    ಯುಕೆಪಿ ಯೋಜನೆ ಅನ್ವಯ ಹಂತ 1 ಮತ್ತು 2ರಲ್ಲಿ ಬಾಧಿತ ಸಂತ್ರಸ್ತರಿಗಾಗಿ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಟ್ಟು 136 ಪುನರ್ ವಸತಿ ಕೇಂದ್ರ (ಪುಕೇ) ಗಳನ್ನು ತೆರೆಯಲಾಗಿದೆ. ಅನೇಕ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿಲ್ಲ. ಅಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆ ಇತ್ತು.

    ಆದರೆ, ಸರ್ಕಾರ ಮೊದಲು ಪುಕೇಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಿ ನಂತರ ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಇದಕ್ಕೆ ಸಾಕಷ್ಟು ವಿರೋಧ ಇತ್ತು. ಅಭಿವೃದ್ಧಿ ಪಡಿಸಿ ಬಳಿಕ ಹಸ್ತಾಂತರ ಮಾಡಬೇಕು ಎನ್ನುವ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿಯದೆ ಹಸ್ತಾಂತರ ಮಾಡಿತು. ಬಳಿಕ ಜಿಲ್ಲಾ ಪಂಚಾಯಿತಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿತ್ತು. ಜಿಪಂ ವತಿಯಿಂದ ನಡೆದ ಕಾಮಗಾರಿಗಳಲ್ಲಿ ಹಣ ದುರುಪಯೋಗ ಆಗಿದೆ ಎನ್ನುವ ದೂರುಗಳೂ ಇದ್ದು, ಈ ಬಗ್ಗೆ ತನಿಖೆಯ ಅಗತ್ಯತೆ ಇದೆ.

    ಟೆಂಡರ್ ಪಾರದರ್ಶಕವಾಗಿತ್ತೆ? ನಿಗದಿತ ಕಾಮಗಾರಿಗಳು ಆಗಿವೆಯೆ? ಸರ್ಕಾರದ 180 ಕೋಟಿ ರೂ. ಸದ್ಬಳಕೆ ಆಗಿದೆ ಎನ್ನುವ ಕುರಿತು ಸಮಗ್ರ ತನಿಖೆ ನಡೆಸಬೇಕಿದೆ. ಮುಖ್ಯವಾಗಿ ತನಿಖಾ ವರದಿ ಬಹಿರಂಗಗೊಳಿಸಬೇಕು. ಕಾರಣ ಜಿಲ್ಲೆಯಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ತನಿಖೆಗೆ ಆದೇಶ ನೀಡಿದ್ದರೂ ವರದಿ ಏನಾಯಿತು? ತಪ್ಪಿತಸ್ಥರಿಗೆ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಎನ್ನುವುದು ಇನ್ನೂ ಸಹ ನಿಗೂಢವಾಗಿವೆ.

    ವೈಫಲ್ಯಕ್ಕೆ ಕಾರಣ ಕಂಡುಕೊಳ್ಳಬೇಕಿದೆ
    ಇದೀಗ ಯುಕೆಪಿ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಆದರೆ, ಹಿಂದಿನ ಹಂತಗಳಲ್ಲಿ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ವಿಷಯವಾಗಿ ಅನೇಕ ವೈಫಲ್ಯಗಳು ಆಗಿದ್ದು, ಇನ್ನೂ ಸಹ ಅನೇಕ ಪುನರ್ ವಸತಿ ಕೇಂದ್ರಗಳಿಗೆ ಸಂತ್ರಸ್ತರು ಸ್ಥಳಾಂತರ ಆಗಿಲ್ಲ. ಅಂತ ಕೇಂದ್ರಗಳು ಎಷ್ಟು ಎನ್ನುವುದು ಸ್ಪಷ್ಟವಾಗಿ ಹೇಳುತ್ತಿಲ್ಲ. ಅನೇಕ ಕೇಂದ್ರಗಳಲ್ಲಿ ಸ್ಮಶಾನ ಸೇರಿದಂತೆ ಅನೇಕ ಸೌಲಭ್ಯಗಳೇ ಇಲ್ಲ. ಅಂತ ಕೇಂದ್ರಗಳಿಗೆ ಸಂತ್ರಸ್ತರು ಹೋಗುವುದಾದರೂ ಹೇಗೆೆ?

    ಹೀಗೆ ಅನೇಕ ಸಮಸ್ಯೆಗಳು ಎದುರಾಗಿವೆ. ಇದೀಗ ಅಂತ ಪುನರ್ ವಸತಿ ಕೇಂದ್ರಗಳು ಯಾವುವು? ಸಂತ್ರಸ್ತರು ಸ್ಥಳಾಂತರ ಆಗದಿರಲು ಕಾರಣವೇನು? ಅಧಿಕಾರಿಗಳು ಮಾಡಿರುವ ಯಡವಟ್ಟು ಏನೇನು? ಎನ್ನುವುದನ್ನು ಕಂಡುಕೊಂಡು 3ನೇ ಹಂತದ ಯೋಜನೆಯಲ್ಲಿ ಅಂತ ಲೋಪಗಳು ಆಗದಂತೆ ಎಚ್ಚರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಬೇಕಿದೆ. ಹಿಂದಿನ ಲೋಪಗಳನ್ನು ಸರಿಪಡಿಸಿಕೊಳ್ಳದೆ ಮುಂದಿನ ಹೆಜ್ಜೆ ಇಟ್ಟಲ್ಲಿ ಮತ್ತೆ ಅದೇ ರಾಗ ಅದೇ ಹಾಡು ಎನ್ನುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

    ಇನ್ನು ಕಳೆದ ಏಳು ವರ್ಷಗಳಲ್ಲಿ ಕೆಬಿಜೆಎನ್‌ಎಲ್ ನಿಂದ ಪುನರ್ ವಸತಿ, ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನಕ್ಕೆ ನಿಗದಿ ಪಡಿಸಿದ್ದ ಅನುದಾನ ಎಷ್ಟು? ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನ ಎಷ್ಟು? ಎಷ್ಟು ಬಳಕೆ ಮಾಡಿದ್ದಾರೆ? ಇನ್ನೆಷ್ಟು ಅನುದಾನ ಮರಳಿ ಹೋಗಿದೆ? ಎನ್ನುವ ಯಾವ ಮಾಹಿತಿಯೂ ಈ ಏಳು ವರ್ಷಗಳಲ್ಲಿ ಬಿಚ್ಚಿಟ್ಟಿಲ್ಲ. ಮೊದಲೇ ‘ಆನೆ ಹೊಟ್ಟಿಗೆ ಅರೇಕಾಸಿನ ಮಜ್ಜಿಗೆ’ ತರಹ ಸರ್ಕಾರ ಅನುದಾನ ನೀಡಿದ್ದು, ಅದನ್ನು ಸಹ ಬಳಕೆ ಮಾಡದೆ ಕೆಲ ವರ್ಷ ಹಿಂದಕ್ಕೆ ಹೋಗಿದೆ. ಇದಕ್ಕೆ ಕಾರಣಗಳು ಹಲವು. ಸಮಸ್ಯೆ ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪುನರ್ ವಸತಿ ಆಯುಕ್ತರ ಕಚೇರಿಯ ಹಿಂದಿನ ಅಧಿಕಾರಿ.

    ಡಿಸಿಎಂ ಕಾರಜೋಳ ಅವರು ಯುಕೆಪಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಕರೆದಿರುವುದು ಒಳ್ಳೆಯದು. ಆದರೆ, ಅದಕ್ಕೂ ಮುನ್ನ ಸಂತ್ರಸ್ತರ ಸಭೆ ಹಾಗೂ ಈ ಯೋಜನಾ ಬಾಧಿತ ಪ್ರದೇಶಗಳ ಜನಪ್ರತಿನಿಧಿಗಳ ಸಭೆ ನಡೆಸಬೇಕಿತ್ತು. ಸಂತ್ರಸ್ತರ ಸಮಸ್ಯೆ ಏನಿದೆ ಎಂದು ಆಲಿಸಬೇಕಿತ್ತು. ಸಂತ್ರಸ್ತರನ್ನು ಕತ್ತಲಲ್ಲಿ ಇಟ್ಟು ಬರೀ ಅಧಿಕಾರಿಗಳು ಒಪ್ಪಿಸುವ ಅಂಕಿ-ಅಂಶಗಳನ್ನು ಪಡೆದು ಸಭೆ ಮುಗಿಸಿದರೆ ಅದರಿಂದ ಯಾವುದೆ ಪ್ರಯೋಜನವಾಗದು.
    ಪ್ರಕಾಶ ಅಂತರಗೊಂಡ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಮುಖಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts