More

    ಸಿದ್ಧೇಶ್ವರ ಶ್ರೀಗಳ ಪ್ರವಚನ ಅಮೃತವಾಣಿ

    ಬಾಗಲಕೋಟೆ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಸಿದ್ಧೇಶ್ವರ ಸ್ವಾಮೀಜಿ ಅವರು 21ನೇ ಶತಮಾನದ ಮಹಾನ್ ಸಂತರಾಗಿದ್ದಾರೆ. ಮಾನವ ಧರ್ಮವನ್ನು ಮುಖ್ಯವಾಗಿಸಿಕೊಂಡು ನೀಡುವ ಪ್ರವಚನವು ‘ಅಮೃತವಾಣಿ’ ಇದ್ದಂತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅಭಿಪ್ರಾಯಪಟ್ಟರು.

    ನವನಗರದ ಕಲಾಭವನದ ಬಯಲು ರಂಗಮಂದಿರ ಆವರಣದಲ್ಲಿ ಬಾಗಲಕೋಟೆಯ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಒಂದು ತಿಂಗಳು ಹಮ್ಮಿಕೊಂಡಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕನ್ನಡ ನಾಡು ಅಷ್ಟೇ ಅಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲೂ ಪ್ರವಚನ ನೀಡಿದ್ದಾರೆ. ಈ ಕಾರಣಕ್ಕಾಗಿ ದೇಶ, ಭಾಷೆ, ಗಡಿ, ಸೀಮೆ, ಜಾತಿ, ಧರ್ಮ, ವರ್ಗವಿಲ್ಲದೆ ಎಲ್ಲವನ್ನೂ ಮೀರಿದ ಗಮ್ಯತೆ ಅವರ ಪ್ರವಚನವಿದೆ. ಸತ್ಯ, ನ್ಯಾಯ, ನೀತಿ, ಧರ್ಮದಿಂದ ನಡೆಯಲು ಶ್ರೀಗಳ ಪ್ರವಚನ ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಅರಿಷಡ್ ವರ್ಗಗಳನ್ನು ಗೆದ್ದಂತಹ ಸ್ವಾಮೀಜಿಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಇದ್ದಾರೆ ಎಂದು ಬಣ್ಣಿಸಿದರು.

    ಆಧ್ಯಾತ್ಮಿಕ ಮೇರು ಪರ್ವತವಾಗಿರುವ ಸಿದ್ಧೇಶ್ವರ ಸ್ವಾಮೀಜಿ ಮನುಷ್ಯನಿಗೆ ಒಳಿತಾಗುವ ನಿಟ್ಟಿನಲ್ಲಿ ಸದಾ ಆಲೋಚನೆ ಮಾಡುತ್ತಾರೆ. ಮಾನವ ಧರ್ಮವೇ ಶ್ರೇಷ್ಠವಾದ್ದದು ಎಂದು ಪ್ರತಿಪಾದಿಸುತ್ತಾರೆ. ಬುದ್ಧನ ಪ್ರೀತಿಯನ್ನು, ಬಸವಣ್ಣನ ಸಮಾನತೆ-ದಯೆ, ಮಹಾತ್ಮ ಗಾಂಧೀಜಿಯ ಸತ್ಯ, ಅಹಿಂಸೆಯ ತತ್ವ, ಕಬೀರರ ಭಾವೈಕ್ಯತೆ, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಸಿದ್ಧೇಶ್ವರ ಸ್ವಾಮೀಜಿ ಅವರಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

    ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಆತ್ಮತತ್ವದ ಮರೆವು ಆದಾಗ ಅದನ್ನು ನೆನಪಿಗೆ ತಂದು ಕೊಡುವುದೇ ಅಧ್ಯಾತ್ಮವಾಗಿದೆ. ಸತ್ಯವಾಗಿಯೂ, ನಿತ್ಯ-ನೂತನವಾಗಿರುವುದು ಅಧ್ಯಾತ್ಮ. ಅಧ್ಯಾತ್ಮವನ್ನು ರೂಢಿಸಿ ಕೊಂಡರೆ ಬದುಕಿಗೆ ಪರಿಪೂರ್ಣತೆಯ ಅರ್ಥ ಬರುತ್ತದೆ. ದುಃಖದಿಂದ ವಿಮುಕ್ತಿಗೊಳಿಸುವುದೇ ಅಧ್ಯಾತ್ಮವಾಗಿದೆ. ದುರಾಭಿಮಾನವನ್ನು ಅಂತ್ಯಗೊಳಿಸುವುದು, ಅಹಂಕಾರವನ್ನು ಕಳೆಯುವುದೇ ಅಧ್ಯಾತ್ಮವಾಗಿದೆ ಎಂದರು.

    ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಭಾರತದ ಆತ್ಮ ಅಧ್ಯಾತ್ಮವಾಗಿದೆ. ಜ್ಞಾನದ ಖಣಜ, ಪ್ರವಚನದ ಮೇರುಪರ್ವತ ಸಿದ್ಧೇಶ್ವರ ಸ್ವಾಮೀಜಿ ಅವರಾಗಿದ್ದಾರೆ. ಶ್ರೀಗಳ ಪ್ರವಚನದ ಸಂದೇಶ, ವಿಚಾರ ಮಂಥನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಇಳಕಲ್ಲ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಮನುಷ್ಯನ ಮನುಸ್ಸು ಪವಿತ್ರವಾದ್ದದು, ಭೂಮಿಯಲ್ಲಿ ಬೀಜ ಬಿದ್ದರೆ ಬೆಳೆಯಲು ಕಾಲಾವಕಾಶ ಬೇಕಾಗುತ್ತದೆ. ಆದರೆ, ಮನುಷ್ಯನ ಮನಸ್ಸೆಂಬ ಲವತ್ತಾದ ಭೂಮಿಯಲ್ಲಿ ಬಿತ್ತನೆಯಾದ ಬೀಜವು ಕೂಡಲೇ ಹೆಮ್ಮರವಾಗಿ ಬೆಳೆಯುತ್ತದೆ. ಮನುಷ್ಯನ ಮನಸ್ಸಿಗೆ ನೋವಾಗುವ ಅಪಮಾನದ ಶಬ್ದ ಕಿವಿಗೆ ಬಿದ್ದರೆ ಕ್ರೋಧ, ದ್ವೇಷ, ಮತ್ಸರಗಳ ಮರ ಬೆಳೆಯುತ್ತದೆ. ಅದೇ ಅನುಭಾವದ ನುಡಿ ಮನುಷ್ಯನ ಮನಸ್ಸಿನ ಮೇಲೆ ಬಿದ್ದರೆ ಶಾಂತತೆ, ಸಮಚಿತ್ತತೆ ಬರುತ್ತದೆ. ಆ ಮೂಲಕ ಮನುಷ್ಯನನ್ನು ಸಂತನನ್ನಾಗಿ ಮಾಡುತ್ತದೆ. ಸದ್ಭಾವ, ಸುಜ್ಞಾನ ಒಡಮೂಡುತ್ತದೆ. ಗರ್ಭವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರವಚನ ಆಲಿಸಬೇಕು ಎಂದು ಹೇಳಿದರು.

    ಗುಳೇದಗುಡ್ಡ ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ಧೇಶ್ವರ ಬೃಹ್ಮನಮಠದ ಜಗದ್ಗುರು ಬಸವರಾಜ ಪಟ್ಟಾದಾರ್ಯ ಸ್ವಾಮೀಜಿ, ಕಾಶೀನಾಥ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಶಿರೂರು ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಬಿಲ್‌ಕೆರೂರ ಸಿದ್ದಲಿಂಗೇಶ್ವರ ಸ್ವಾಮೀಜಿ, ಅಮೀನಗಡ ಶಂಕರರಾಜೇಂದ್ರ ಸ್ವಾಮೀಜಿ, ಮುರನಾಳ ಜಗನ್ನಾಥ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇವರು ವೇದಿಕೆಯಲ್ಲಿ ಇದ್ದರು. ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಡಾ.ಬಿ.ಎಚ್.ಕೆರೂಡಿ, ಡಾ.ಎಚ್.ಎ್.ಯೋಗಪ್ಪನವರ, ಡಾ.ಜಿ.ಎನ್.ಕರೂರ, ಮಹೇಶ ಅಥಣಿ, ಮಲ್ಲೇಶಪ್ಪ ಜಿಗಜಿನ್ನಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಹಸ್ರಾರು ಭಕ್ತರು ಭಾಗವಹಿಸಿದ್ದರು.

    ಬಹು ವರ್ಷಗಳ ಬಳಿಕ ಸಿದ್ಧೇಶ್ವರ ಸ್ವಾಮೀಜಿ ಬಾಗಲಕೋಟೆಗೆ ಆಗಮಿಸಿದ್ದಾರೆ. ನಿತ್ಯ ಪ್ರವಚನ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಸೌಭಾಗ್ಯ ಮತ್ತೆ ಮತ್ತೆ ಸಿಗುವುದಿಲ್ಲ. ಪೂರ್ವ ಜನ್ಮದ ಪುಣ್ಯ.
    – ಡಾ.ವೀರಣ್ಣ ಚರಂತಿಮಠ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts