More

    ಬಾಕಿ ಕೊಟ್ಟು ಕಾರ್ಖಾನೆ ಆರಂಭಿಸಲು ಪಟ್ಟು

    ಬಾಗಲಕೋಟೆ: ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡದೇ ಜಿಲ್ಲಾಡಳಿತ ಕೇದಾರನಾಥ್ ಸಕ್ಕರೆ ಕಾರ್ಖಾನೆ ಲೀಜ್ ನೀಡಲಾಗಿದೆ ಎಂದು ಆರೋಪಿಸಿ ರೈತರು ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಸಮೀಪದ ಕೇದಾರನಾಥ ಸಕ್ಕರೆ ಕಾರ್ಖಾನೆ ಎದುರು ಸೋಮವಾರ ಧರಣಿ ಆರಂಭಿಸಿದ್ದಾರೆ.

    ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಕೇದಾರನಾಥ ಸಕ್ಕರೆ ಕಾರ್ಖಾನೆಯೂ ವಿಕ್ರಮಸಿಂಗ್ ಅಪರಾಧಿ ಮಾಲೀಕತ್ವದಲ್ಲಿ ಇತ್ತು. ರೈತರಿಗೆ ವಂಚನೆ, ಮೋಸ ಮಾಡಿ ಓಡಿ ಹೋಗಿದ್ದರು. ಪೊಲೀಸರು ಬಂಧಿಸಿ ಕರೆತಂದರು ಕೂಡಾ ಅನಾರೋಗ್ಯದಿಂದ ಅಪರಾಧಿ ನಿಧನರಾದರು. 10 ವರ್ಷಗಳಿಂದ ಕಾರ್ಖಾನೆ ಬಂದ್ ಆಗಿದೆ. 15 ರಿಂದ 20 ಕೋಟಿ ರೂ. ಕಬ್ಬಿನ ಬಾಕಿ ಬಿಲ್ ನೀಡಿಲ್ಲ. ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರು ಬಾಕಿ ಬಿಲ್ ಪಾವತಿಸಲು ಜಿಲ್ಲಾಡಳಿತ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೇದಾರನಾಥ ಕಾರ್ಖಾನೆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ. ಆದರೇ ಕಾರ್ಖಾನೆ ಲೀಜ್ ನೀಡಲಾಗಿದ್ದು, ಪುನರ್ ಚಾಲನೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಈ ಬಗ್ಗೆ ದಾಖಲಾತಿ ಕೊಡಿ ಎಂದರೇ ಆದೇಶ ಪತ್ರ ನೀಡುತ್ತಿಲ್ಲ. ಕೋರ್ಟ್ ತೀರ್ಪು ಕೂಡಾ ಏನಿದೆ ಎಂದು ಬಹಿರಂಗಗೊಳಿಸುತ್ತಿಲ್ಲ. ಕಾರ್ಖಾನೆಯ ಷೇರುದಾರರ 36 ಕೋಟಿ ರೂ., ಅಂದಾಜು 2 ಸಾವಿರ ರೈತರ 20 ಕೋಟಿ ರೂ. ಬಾಕಿ ಬಿಲ್ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ಹೀಗಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

    ರೈತರ ಮುಖಂಡರಾದ ಈರಪ್ಪ ಹಂಚಿನಾಳ, ಹುಸೇನ್ ನದಾಫ್, ಮುತ್ತು ರೋಣದ, ಹನುಮಂತ ಮುಗಳೊಳ್ಳಿ, ನಿಂಗಪ್ಪ ಅರಕೇರಿ, ಈರಪ್ಪ ಅರಕೇರಿ, ವಿಠ್ಠಲ ಮುಧೋಳ ನೇತೃತ್ವ ವಹಿಸಿದ್ದು, ಸಂಜೆ ವರೆಗೂ ನೂರಾರರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು.

    10 ವರ್ಷಗಳಿಂದ ಬಾಕಿ ಇರುವ ಕಬ್ಬಿನ ಬಿಲ್, ಷೇರದಾರರ ರೇವಣಿ ನೀಡಿ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಕಾರ್ಖಾನೆ ಆವರಣದಲ್ಲಿಯೇ ರೈತರು ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದರು. ಪ್ರತಿಭಟನಾ ಮೆರವಣಿಗೆ ಮೂಲಕ ಬೆಳಗ್ಗೆ ಕಾರ್ಖಾನೆ ಆವರಣಕ್ಕೆ ರೈತರು ಆಗಮಿಸುತ್ತಿದ್ದಂತೆ ಪೊಲೀಸರು ಕಾರ್ಖಾನೆ ಮುಖ್ಯದ್ವಾರದ ಬಳಿ ತಡೆದರು. ಬಾದಾಮಿ ತಹಸೀಲ್ದಾರ ಸುಭಾಸ ಇಂಗಳೆ ಹಾಗೂ ಪೊಲೀಸರು ಮಾತುಕತೆ ನಡೆಸಿದರು ರೈತರು ಪಟ್ಟು ಸಡಿಸಲಿಲ್ಲ. ದಿನವಿಡೀ ಕಾರ್ಖಾನೆ ಮುಖ್ಯದ್ವಾರದ ಬಳಿಯೇ ಧರಣಿ ಕುಳಿತು ರೈತರು ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿ ಊಟ ಮಾಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts