More

    ಐಟಿಐ ಆನ್‌ಲೈನ್ ಪರೀಕ್ಷೆ ಕೈಬಿಡಿ

    ಬಾಗಲಕೋಟೆ: ರಾಜ್ಯ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ ಶಿಕ್ಷಣ)ಗಳಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಆನ್‌ಲೈನ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಎಬಿವಿಪಿ ನಗರ ಘಟಕದ ಅಧ್ಯಕ್ಷ ಪ್ರಕಾಶ ಚವಾಣ್ ಮಾತನಾಡಿ, ಇಲ್ಲಿವರೆಗೂ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಲಿಖಿತವಾಗಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಪ್ರಸಕ್ತ ವರ್ಷದಿಂದ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೌಶಲ ತರಬೇತಿಗಾಗಿ ಎಸ್ಸೆಸ್ಸೆಲ್ಸಿ ಪಾಸಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ. ಜೀವನೋಪಾಯಕ್ಕಾಗಿ ಉದ್ಯೋಗ ಮಾಡಲು ಹಾಗೂ ಸ್ವಯಂ ಉದ್ಯೋಗ ಬಯಸಿ ಐಟಿಐ ಪ್ರವೇಶ ಪಡೆದಿರುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು ಯಾವ ಕಾಲೇಜಿನಲ್ಲಿ ಪ್ರವೇಶ ದೊರೆಯದೆ ಹೋದಾಗ ಐಟಿಐಗೆ ಪ್ರವೇಶ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್, ವಿದ್ಯುತ್ ಸಮಸ್ಯೆ ಇದೆ. ಆನ್‌ಲೈನ್ ಪರೀಕ್ಷೆಗೆ ಬಗ್ಗೆ ಪೂರ್ವ ಸಿದ್ಧತೆ ಕೂಡ ಮಾಡಿಕೊಂಡಿಲ್ಲ. ಇದೀಗ ಏಕಾಏಕಿ ಆನ್‌ಲೈನ್ ಪರೀಕ್ಷೆ ನಡೆಸಲಾಗುವುದು ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

    ಪರೀಕ್ಷಾ ಶುಲ್ಕ ಸಹ ಹೆಚ್ಚಾಗಿದೆ. ಐಟಿಐದಲ್ಲಿ ರೇಖಾಚಿತ್ರ ಹಾಗೂ ಬರಹ ಪರೀಕ್ಷೆ ಬರವಣಿಗೆ ಮುಖಾಂತರ ನಡೆಯುವುದರಿಂದ ಈ ಆನ್‌ಲೈನ್ ಪರೀಕ್ಷೆಯಿಂದ ವಿದ್ಯಾರ್ಥಿಗಳ ಕೌಶಲ ಹಾಗೂ ಗುಣಮಟ್ಟ ಪರಿಣಾಮಕಾರಿಯಾಗಿ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶುಲ್ಕ ಕಡಿಮೆ ಮಾಡುವುದರ ಜತೆಗೆ ಆನ್‌ಲೈನ್ ಪರೀಕ್ಷೆ ರದ್ದುಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts