More

    ಬ್ಲಾೃಕ್ ಸ್ಪಾಟ್‌ಗಳ ಪರಿಶೀಲಿಸಿ ವರದಿ ಸಲ್ಲಿಸಿ

    ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಅಪಘಾತ ಸಂಭವಿಸಬಹುದಾದ 69 ಬ್ಲಾೃಕ್ ಸ್ಪಾಟ್‌ಗಳಿದ್ದು, ಅವುಗಳ ಬಗ್ಗೆ ಪೊಲೀಸ್, ಪ್ರಾದೇಶಿಕ ಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಜಂಟಿಯಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ 69 ಬ್ಲಾೃಕ್ ಸ್ಪಾಟ್‌ಗಳ ಪೈಕಿ 19 ಸ್ಪಾಟ್‌ಗಳ ಕೆಲಸ ಮುಗಿದಿದ್ದು, ಉಳಿದ ಸ್ಪಾಟ್‌ಗಳ ಬಗ್ಗೆ ಜಂಟಿಯಾಗಿ ಪರಿಶೀಲನೆ ನಡೆಸಬೇಕು. ವೈಜ್ಞಾನಿಕವಾಗಿ ಅಪಘಾತ ತಡೆಗೆ ಕೈಗೊಂಡ ಕೆಲಸದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಂತರವೇ ವರದಿ ಸಲ್ಲಿಸಲು ನಿರ್ದೇಶನ ನೀಡಿದರು.

    ಗದ್ದನಕೇರಿ ಕ್ರಾಸ್‌ನಲ್ಲಿ ಹೈಮಾಸ್ಕ್, ರಿಪ್ಲೆಕ್ಟರ್ ಹಾಗೂ ಸೈನ್ ಬೋರ್ಡ್‌ಗಳನ್ನು ಹಾಕಬೇಕು. ಅಲ್ಲದೆ, ಪಾನ್, ಬೀಡಾ ಅಂಗಡಿಗಳಿಂದ ರಸ್ತೆಗಳು ಚಿಕ್ಕದಾಗಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅವುಗಳನ್ನು ತೆರವುಗೊಳಿಸುವ ಕಾರ್ಯವಾಗಬೇಕು. ಗದ್ದನಕೇರಿ ಕ್ರಾಸ್‌ನಲ್ಲಿ ಕೈಗೊಂಡ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಸಹಾಯಕ ಅಭಿಯಂತರು ಬಸ್ ಬೇ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು, ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

    ಮುಧೋಳ ಮತ್ತು ಲೋಕಾಪುರ ಪಟ್ಟಣದಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಿ ಜನದಟ್ಟನೆಯಾಗುವುದನ್ನು ಕಡಿಮೆಗೊಳಿಸಬೇಕು. ಈ ಪ್ರಕ್ರಿಯೆ 15 ದಿನಗಳೊಳಗಾಗಿ ಪೂರ್ಣಗೊಳ್ಳಬೇಕು. ಸರಕು ಸಾಗಣೆ ವಾಹನಗಳಲ್ಲಿ ಹಾಗೂ ಕನ್ಸಸ್ಟ್ರಕ್ಷನ್ ಇಕ್ಯೂಪಮೆಂಟ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನವನಗರದ ಮುಖ್ಯ ಕೂಡುವ ವೃತ್ತಗಳಲ್ಲಿ ರಸ್ತೆ ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವೃತ್ತಗಳಲ್ಲಿ ಮಾರ್ಕಿಂಗ್ ಹಾಕಲು ಸೂಚಿಸಿದರು. ಭಾರಿ ಗಾತ್ರದ ವಾಹನಗಳಿಗೆ ರಿಪ್ಲೆಕ್ಟರ್ ಅಳವಡಿಕೆ ಮತ್ತು ಸ್ಪೀಡ್ ಗವರ್ನರ್, ಟರ್ಪಾಲ್ ಹೊದಿಕೆ ಅಳವಡಿಕೆ ಮಾಡಬೇಕು ಎಂದರು.

    ವಾಹನಗಳ ನವೀಕರಣಕ್ಕೆ ಬಂದ ಸಂದರ್ಭದಲ್ಲಿ ರಿಪ್ಲೆಕ್ಟರ್, ಸ್ಪೀಡ್ ಗವರ್ನರ್ ಅಳವಡಿಸಿದ ಬಗ್ಗೆ ಖಚಿತಪಡಿಸಕೊಳ್ಳತಕ್ಕದ್ದು. ಅವುಗಳನ್ನು ಅಳವಡಿಸದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 12 ಸಕ್ಕರೆ ಕಾರ್ಖಾನೆಗಳಿದ್ದು, ಕಾರ್ಖಾನೆಗಳ ಮುಖ್ಯ ದ್ವಾರದಲ್ಲಿ ಪೊಲೀಸ್, ಆರ್‌ಟಿಒ ಸಿಬ್ಬಂದಿ ನೇಮಿಸಿ ರಿಪ್ಲೆಕ್ಟರ್ ಅಳವಡಿಸಿದ್ದರೆ ಮಾತ್ರ ಟ್ರಾೃಕ್ಟರ್ ಒಳಗೆ, ಹೊರಗೆ ಹೋಗಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಪ್ರಶಾಂತ ಜಿ., ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    1.83 ಲಕ್ಷ ರೂ. ದಂಡ ವಸೂಲಿ
    ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಮಾತನಾಡಿ, ಜಿಲ್ಲೆಯಲ್ಲಿ ಅಪಘಾತ ಪ್ರಕರಣ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಶೇ.10 ರಷ್ಟು ಕಡಿಮೆಯಾಗಿದೆ. ಪ್ರಸಕ್ತ ಸಾಲಿಗೆ ಮಾಸಿಕ 64 ಪ್ರಕರಣಗಳು ದಾಖಲಾಗಿರುತ್ತವೆ. ಕಳೆದ ಸಾಲಿನಲ್ಲಿ 1430 ವಾಹನಗಳ ತಪಾಸಣೆ ಮಾಡಲಾಗಿದೆ. 1.83 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts