More

    ಕರೊನಾ ಇಲ್ಲ ಆತಂಕ ಬೇಡ: ಶಾಸಕ ವೀರಣ್ಣ ಚರಂತಿಮಠ

    ಬಾಗಲಕೋಟೆ : ಜಿಲ್ಲೆಯಲ್ಲಿ ಕರೊನಾ ಸೋಂಕು ಪ್ರಕರಣ ಇದುವರೆಗೂ ವರದಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಮತ್ತು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮನವಿ ಮಾಡಿದರು.

    ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಗೆ ವಿದೇಶದಿಂದ ಆಗಮಿಸುವ ಯಾವುದೇ ವ್ಯಕ್ತಿ ಇರಲಿ ಅವರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಂದ ವಿದೇಶಕ್ಕೆ ಹೋಗಿ ಬಂದವರ ಮೇಲೆಯೂ ನಿಗಾ ವಹಿಸಲಾಗಿದೆ. ಜಿಲ್ಲೆಯ ನಾಲ್ಕು ದಂಪತಿ ವಿದೇಶ ಪ್ರವಾಸ ಮುಗಿಸಿ ಹಿಂದಿರುಗಿದ್ದು, ಅವರನ್ನು 14 ದಿನಗಳವರೆಗೆ ಗೃಹ ಬಂಧನದಲ್ಲಿ ಇರುವಂತೆ ಸೂಚಿಸಲಾಗಿದೆ. ಕರೊನಾ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

    ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಕಾದು ಆರಿಸಿದ ನೀರನ್ನು ಕುಡಿಯಬೇಕು. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಲ್ಲದೆ, ಸಾರ್ವಜನಿಕ ಜಾತ್ರೆ, ಸಭೆ, ಸಮಾರಂಭ, ಸಿನಿಮಾ ಮಂದಿರಗಳನ್ನು ಒಂದು ವಾರ ಬಂದ್ ಮಾಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಜನದಟ್ಟನೆಯಿಂದ ದೂರವಿರಬೇಕು. ಏಪ್ರಿಲ್‌ನಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದ್ದು, ಕರೊನಾ ವೈರಸ್ ಉಷ್ಣಾಂಶದಲ್ಲಿ ಬದುಕುವುದಿಲ್ಲ ಎಂದು ತಿಳಿಸಿದರು.

    ಗ್ರಾಮೀಣ ಭಾಗದಲ್ಲಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಬೇಕು. ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ಕರೆದು ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಕುಡಿಯಲು ಬಿಸಿ ನೀರನ್ನು ಬಳಸುವಂತೆ ಡಂಗೂರ ಸಾರಬೇಕು. ಗ್ರಾಮಗಳಲ್ಲಿನ ಕಸವನ್ನು ಸ್ವಚ್ಛಗೊಳಿಸಿ ಒಂದೆಡೆ ಸುಟ್ಟು ಹಾಕಲು ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲಾ ಮತ್ತು ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡುವುದನ್ನು ರದ್ದುಪಡಿಸಬೇಕು. ಖಾಸಗಿ ಆಸ್ಪತ್ರೆ ವೈದ್ಯರು ಸಹ ಇದಕ್ಕೆ ಸಹಕಾರ ನೀಡಬೇಕು. ಸೋಂಕು ತಗುಲಿದ ವ್ಯಕ್ತಿಯ ಚಿಕಿತ್ಸೆ ಮಾಡುವವರಿಗೆ ಮಾತ್ರ ಎನ್-95 ಮಾಸ್ಕ್ ಕಡ್ಡಾಯವಾಗಿದೆ. ಕೆಮ್ಮುವಾಗ, ಸೀನುವಾಗ ಕರವಸಗಳನ್ನು ಬಳಸಬೇಕು ಎಂದು ತಿಳಿಸಿದರು.

    ಜಿಪಂ ಸಿಇಒ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಡಿಎಚ್‌ಒ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಗದೀಶ ಹೆಬ್ಬಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಸೇರಿ ಇತರರು ಇದ್ದರು.

    ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಶ್ರೀಶೈಲ ದರ್ಶನಕ್ಕೆ ಹೊರಟ್ಟಿದ್ದ ಭಕ್ತರು ಕೆಲವು ದಿನಗಳವರೆಗೆ ಕ್ಷೇತ್ರ ಪ್ರವಾಸ ಮುಂದು ಹಾಕುವಂತೆ ಮನವಿ ಮಾಡಲಾಗಿದೆ. ಯುಗಾದಿ ಹಬ್ಬದಂದು ಜರುಗುವ ಬಿವಿವಿ ಸಂಘದ ಕಣವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ, ಅಗ್ಗಿ ಉತ್ಸವ ರದ್ದುಗೊಳಿಸಿ ಸಾಂಪ್ರದಾಯಕವಾಗಿ ಕಾರ್ಯಕ್ರಮ ನಡೆಸುವಂತೆ ದೇವಸ್ಥಾನ ಸಮಿತಿಗೆ ಸೂಚನೆ ನೀಡಲಾಗಿದೆ.
    ವೀರಣ್ಣ ಚರಂತಿಮಠ
    ಶಾಸಕ ಬಾಗಲಕೋಟೆ

    ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ದೇಶ, ವಿದೇಶಿ ಪ್ರವಾಸಿಗರನ್ನು ತಪಾಸಣೆ ಮಾಡಲಾಗುತ್ತಿದೆ. ಔಷಧ ವ್ಯಾಪರಸ್ಥರು ಮಾಸ್ಕ್, ಸೈನಿಟ್ರೇಜೆಷನ್ ಹೆಚ್ಚಿನ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ ಜಿಲ್ಲಾದ್ಯಂತ ಒಟ್ಟು 50 ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ.
    ಕೆ.ರಾಜೇಂದ್ರ ಜಿಲ್ಲಾಧಿಕಾರಿ

    ಕರೊನಾ ವೈರಸ್ ಬಗ್ಗೆ ಸುಳ್ಳು ವದಂತಿ ಹರಡಿ ಸಾರ್ವಜನಿಕರಲ್ಲಿ ಆತಂಕ, ಭೀತಿ ಹುಟ್ಟಿಸುವ ಮತ್ತು ಭಯದ ವಾತಾವರಣ ಸೃಷ್ಟಿಸುವರ ಮೇಲೆ ಪ್ರಕರಣ ದಾಖಲಿಸಿ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಯಾರು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಬಾರದು.
    ಲೋಕೇಶ ಜಗಲಾಸರ್
    ಎಸ್ಪಿ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts