More

    ಶಿವಾಜಿ ಹಿಂದು ಸಂಸ್ಕೃತಿ ರಕ್ಷಕ

    ಬಾಗಲಕೋಟೆ: ಭರತಖಂಡದಲ್ಲಿ ಇಂದಿಗೂ ಹಿಂದು ಧರ್ಮದ ಸಂಸ್ಕೃತಿ ಉಳಿದಿದೆ ಎಂದರೆ ಅದಕ್ಕೆ ಶಿವಾಜಿ ಧೈರ್ಯ, ಸಾಹಸವೇ ಪ್ರಬಲ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಹೇಳಿದರು.

    ನವನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮರಾಠ ಹಿತಚಿಂತಕ ಸಂಘದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದು ಧರ್ಮದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಇಂದಿನ ಮಕ್ಕಳಲ್ಲಿ ಬೆಳೆಸಬೇಕು. ಯುವಕರು ಅವರ ಮಾರ್ಗದರ್ಶನದಂತೆ ನಡೆದರೆ ಹಿಂದು ಸಂಪ್ರದಾಯಕ್ಕೆ ಮತ್ತಷ್ಟು ಗೌರವ ಹೆಚ್ಚುತ್ತದೆ ಎಂದರು.

    ಹುಬ್ಬಳ್ಳಿಯ ಪ್ರಜ್ಞಾ ಪ್ರವಾಹದ ಪ್ರಮುಖ ರಘುನಂದನ ಉಪನ್ಯಾಸ ನೀಡಿ, ನಮ್ಮ ನಾಡಿನಲ್ಲಿ ಅನೇಕ ಮಹನೀಯರು, ಧೈರ್ಯ ಶಾಲಿಗಳು ಜನ್ಮ ತಾಳಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಶಿವಾಜಿ ಮಹಾರಾಜರು ತಮ್ಮ ಹೋರಾಟದ ಗುಣದಿಂದಲೇ ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ. ಇಂತಹ ದೊಡ್ಡ ಶಕ್ತಿಯ ನಾಯಕ, ಸಂತ, ಭಕ್ತ ಬೇರೆ ಎಲ್ಲಿಯೂ ಇಲ್ಲ ಎಂದು ಬಣ್ಣಿಸಿದರು.

    ಮರಾಠ ಹಿತ ಚಿಂತಕರ ಸಂಘದ ಅಧ್ಯಕ್ಷ ಡಾ.ಶೇಖರ್ ಮಾನೆ ಮಾತನಾಡಿ, ಶಿವಾಜಿ ಮಹಾರಾಜ ಒಬ್ಬ ರಾಷ್ಟ್ರ ನಾಯಕನಾಗಿದ್ದಾರೆ. ಅವರ ಜಯಂತಿ ಕರ್ನಾಟಕ, ಮಹಾರಾಷ್ಟ್ರಕ್ಕೆ ಸೀಮಿತವಾಗಬಾರದು. ಕೇಂದ್ರ ಸರ್ಕಾರ ಕೂಡ ಶಿವಾಜಿ ಮಹಾರಾಜರ ಜಯಂತಿಯನ್ನು ರಾಷ್ಟ್ರೀಯ ಜಯಂತಿಯನ್ನಾಗಿ ಆಚರಿಸಲು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಮಾರಾಠ ಹಿತ ಚಿಂತಕ ಸಂಘದ ಉಪಾಧ್ಯಕ್ಷ ಅಶೋಕ ಘಾಟಗೆ, ಪ್ರಧಾನ ಕಾರ್ಯದರ್ಶಿ ಸುಧೀರ ಜಾಧವ, ಕೋಶಾಧ್ಯಕ್ಷ ಭಾಸ್ಕರ್ ಚವಾಣ್, ಜೀಜಾ ಮಾತಾ ಮಹಿಳಾ ಮಂಡಳ ಅಧ್ಯಕ್ಷೆ ಮಹಾನಂದ ಶಿಂಧೆೆ, ಮುಖಂಡರಾದ ಮಾರುತಿರಾವ ಶಿಂಧೆೆ, ಶಿವಾಜಿರಾವ ವಾಡಕರ್, ಹನುಮಂತ ಘೋರ್ಪಡೆ, ಸಂದೀಪ ಜಾಧವ, ಸಂಜು ವಾಡಕರ ಸೇರಿ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸ್ವಾಗತಿಸಿ, ವಂದಿಸಿದರು.

    ಭವ್ಯ ಮೆರವಣಿಗೆ
    ಜಿಲ್ಲಾಡಳಿತ ಭವನ ಆವರಣದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಚಾಲನೆ ನೀಡಿದರು. ನವನಗರ ಬಸ್ ನಿಲ್ದಾಣ, ಎಲ್‌ಐಸಿ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯೂ ಅಂಬೇಡ್ಕರ್ ಭವನ ತಲುಪಿ ಮುಕ್ತಾಯಗೊಂಡಿತು.

    ಭಾರತ ದೇಶ ವಿವಿಧ ಸಂಸ್ಕೃತಿಗಳ ತಾಯಿನಾಡು. ನಾನಾ ಜನಾಂಗದವರಿಗೆ ಆಶ್ರಯ ನೀಡಿದೆ. ಇಂದು ಇದನ್ನೆಲ್ಲ ಮರೆತು ಅನೇಕ ದೇಶದ್ರೋಹಿ ಕುಕೃತ್ಯಗಳನ್ನು ನಡೆಸುತ್ತಿರುವುದು ವಿಷಾದನೀಯ. ಪ್ರತಿಯೊಂದು ಮನೆಗಳಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಶಿವಾಜಿಯ ಧೈರ್ಯ ಸಾಹಸದ ಕಥೆಗಳನ್ನು ಹೇಳುವ ಮೂಲಕ ನಾಡಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು.
    ನಾರಾಯಣಸಾ ಭಾಂಡಗೆ ವಿಧಾನ ಪರಿಷತ್ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts