More

    ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲಿ

    ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದೇಸಗತಿ ಮನೆತನಗಳು, ಮಠಗಳು ತಮ್ಮದೆಯಾದ ಕೊಡುಗೆ ನೀಡಿವೆ. ಈ ಭವ್ಯ ಇತಿಹಾಸವನ್ನು ಬಿಡಿ ಬಿಡಿಯಾಗಿ ಸಂಶೋಧನೆ ಮಾಡಿ ದಾಖಲಿಸುವುದಕ್ಕಿಂತ ಆಳವಾದ ಅಧ್ಯಯನ ಮೂಲಕ ಸಮಕಾಲೀನ ವಾಸ್ತವ, ನೈಜ ಅಂಶಗಳನ್ನು ಪ್ರಕಟಿಸಬೇಕಿದೆ ಎಂದು ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್.ಎಂ.ಷಡಕ್ಷರಯ್ಯ ಹೇಳಿದರು.

    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಇತಿಹಾಸ ವಿಭಾಗ, ರಾಜ್ಯ ಸರ್ಕಾರ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಪ್ರದೇಶದ ದೇಸಗತಿ ಮತ್ತು ಸಮಕಾಲೀನ ಮಠ ಮಾನ್ಯಗಳ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

    ಬಿಡಿ ಬಿಡಿಯಾಗಿ ಹೊರ ಸಂಶೋಧನೆಗಳು, ಮಾಹಿತಿಗಳು ಇಂದು ತಪ್ಪು ಸಂದೇಶ ನೀಡುತ್ತಿವೆ. ಕೇವಲ ಸಕಾರಾತ್ಮಕ ಸಂಗತಿಗಳನ್ನು ಮಾತ್ರ ದಾಖಲಿಸಿದರೆ ಅದು ಪರಿಪೂರ್ಣವಾಗುವುದಿಲ್ಲ. ನಕರಾತ್ಮಕ ವಿಷಯಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಅಂದಾಗ ಇತಿಹಾಸಪುಟದಲ್ಲಿ ಹುದುಗಿರುವ ಸತ್ಯ, ನೈಜ ಸಂಗತಿಗಳು ಹೊರಗೆ ಬರುತ್ತವೆ. ಇಂದು ಅಲ್ಪ, ಸ್ವಲ್ಪ ಮಾಹಿತಿಯೊಂದಿಗೆ ಸಂಶೋಧಕರು ಮಾಹಿತಿ ಬಿತ್ತರಿಸುತ್ತಿರುವುದು ವಿಷಾದನೀಯ ಎಂದರು.

    ಎರಡು ಶತಮಾನ ದೇಸಗತಿ ಮನೆತನಗಳು ಈ ಭಾಗದಲ್ಲಿ ಆಡಳಿತ ನಡೆಸಿವೆ. ಮಠ ಮಾನ್ಯಗಳು, ಮಸೀದಿ, ಮಂದಿರದ ಜತೆ ಅವಿನಾಭವ ಸಂಬಂಧ ಹೊಂದಿ ತನ್ನದೆಯಾದ ಸಾಂಸ್ಕೃತಿಕ ನೀತಿಯನ್ನು ಗಟ್ಟಿಗೊಳಿಸಿವೆ. ರಾಜಕೀಯ, ಧಾರ್ಮಿಕ ಶಕ್ತಿಯನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ದೇಸಗತಿ ಮನೆತನಗಳು ಕಂಡು ಬರುತ್ತವೆ ಎಂದು ಹೇಳಿದರು.

    ಪುರಾತತ್ವ ಇಲಾಖೆಯ ಧಾರವಾಡ ವಿಭಾಗದ ಉಪನಿರ್ದೇಶಕ ಡಾ.ಎಸ್.ಕೆ. ವಾಸುದೇವ ಮಾತನಾಡಿ, ನಮ್ಮ ಇತಿಹಾಸದ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕಿದೆ. ಕೇವಲ ರಾಜಮನೆತನಗಳು, ದೊರೆಗಳ ಹೆಸರು ಮುಖ್ಯವಲ್ಲ. ಅವರು ನೀಡಿದ ಸಾಂಸ್ಕೃತಿಕ, ಪಾರಂಪರಿಕ, ಸಾಮಾಜಿಕ ಕೊಡುಗೆಗಳ ಬಗ್ಗೆ ಅರಿತುಕೊಳ್ಳಬೇಕಿದೆ. ಯುವ ಪೀಳಿಗೆ ಜನರಿಗೆ ನೈಜವಾದ ಇತಿಹಾಸ ಪರಿಚಯಿಸಬೇಕಿದೆ. ನ್ಯೂನ್ಯತೆಯ ಅಂಶಗಳನ್ನು ದಾಖಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ರಚಿಸಿದ ‘ಬಾಗಡಿಕೋಟಿ ದೇಸಗತಿಯ ಹರವು’ ಹಾಗೂ ಉಪನ್ಯಾಸಕಿ ತ್ರಿವೇಣಿ ಕಲ್ಯಾಣ ರಚಿಸಿದ ‘ಮುಧೋಳ ಘೋರ್ಪಡೆ ರಾಜರು’ ಕೃತಿಯನ್ನು ಬಿವಿವಿ ಸಂಘದ ಗೌರವ ಅಧ್ಯಕ್ಷ ಮಹೇಶ ಅಥಣಿ ಬಿಡುಗಡೆಗೊಳಿಸಿದರು. ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಡಾ.ಎಸ್.ಎನ್.ರಾಂಪೂರ ಸೇರಿ ಇತರರು ಇದ್ದರು.

    ಸಂಗೊಳ್ಳಿ ರಾಯಣ್ಣ ತುಳಸಿಗೇರಿಗೆ ಬರುತ್ತಿದ್ದ
    ಡಾ.ಆರ್.ಎಂ. ಷಡಕ್ಷರಯ್ಯ ಅವರು ಹಲವು ಅನೇಕ ಇತಿಹಾಸದ ವಿಷಯಗಳು ಪ್ರಸ್ತಾಪ ಮಾಡಿದರು. ಪ್ರಮುಖವಾಗಿ ಕಿತ್ತೂರು ಸಂಸ್ಥಾನದ ವೀರ ಸಂಗೊಳ್ಳಿ ರಾಯಣ್ಣ ತುಳಸಿಗೇರಿ ಹನುಮಂತನ ಭಕ್ತನಾಗಿದ್ದ. ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ತುಳಸಿಗೇರಿಗೆ ಬರುತ್ತಿದ್ದನು. ಈ ಭಾಗದ ಜನರು ರೊಟ್ಟಿ ಬುತ್ತಿ ಕೊಡುತ್ತಿದ್ದರು ಎಂದು ಹೇಳಿದರು.

    ಒಂದೇ ಜಾತಿಗೆ ಸೀಮಿತವಾಗಿರಲಿಲ್ಲ
    ಆದಿಲ್‌ಶಾಯಿ, ಬಹುಮನಿ ಸುಲ್ತಾನರು ಕಾಲದಲ್ಲಿ ಸ್ಥಾನಿಕ ಆಡಳಿತಗಾರರಿಗೆ ದೇಸಗತಿ ಎಂದು ಕರೆಯಲಾಗುತಿತ್ತು. ಮುಂದೆ ಅವುಗಳೇ ದೇಶಪಾಂಡೆ, ದೇಸಾಯಿ, ಸರದೇಸಾಯಿ ನಾನಾ ನಾಮಗಳಿಂದ ಪ್ರಚುರಗೊಂಡವು. ಬ್ರಿಟಿಷರ ಕಾಲದಲ್ಲಿ ದೇಸಗತಿ ಮನೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದವು. ಈ ದೇಸಗತಿ ಮನೆತನಗಳು ಒಂದೇ ಜಾತಿಗೆ ಸೀಮಿತವಾಗಿಲ್ಲ. ಕ್ಷತ್ರೀಯ, ಬ್ರಾಹ್ಮಣ, ಜೈನ, ರೆಡ್ಡಿ, ಲಿಂಗಾಯತ ಉಪ ಪಂಗಡದವರಲ್ಲಿಯೂ ಈ ಮನೆತನಗಳು ಇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts