More

    ವ್ಯವಸ್ಥಾಪಕ ಮಂಡಳಿ ರಚಿಸಿ

    ಬಾಗಲಕೋಟೆ: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ವ್ಯವಸ್ಥಾಪಕ ಮಂಡಳಿ ರಚಿಸಬೇಕು. ಅಂತಹ ದೇವಸ್ಥಾನಗಳ ಪೂಜಾ ಕೈಂಕರ್ಯಗಳು ಶಿಸ್ತು ಬದ್ಧವಾಗಿ ನಡೆಯಬೇಕು. ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನ ಆಸ್ತಿ ಅತಿಕ್ರಮಣ ಆಗಬಾರದು ಎಂದು ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿಂದು ಧಾರ್ಮಿಕ ಮತ್ತು ಧರ್ಮದಾಯ ದತ್ತಿ, ಹಿಂದು ವರ್ಗಗಳ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಈ ಹಿಂದೆ ದೇವಸ್ಥಾನಗಳು ಖಾಸಗಿ ಅವರ ಸುಪರ್ದಿಯಲ್ಲಿ ಇದ್ದವು. ಯಾವಾಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹವಾಗಿ ದೇವಸ್ಥಾನಗಳಿಗೆ ವಿನಿಯೋಗವಾಯಿತೋ ಅಂತಹ ದೇವಸ್ಥಾನಗಳು ಸರ್ಕಾರದ ವ್ಯಾಪ್ತಿಗೆ ಬಂದವು. ಹೀಗಾಗಿ ದೇವಸ್ಥಾನಗಳ ಅಭಿವೃದ್ಧಿ, ಅವುಗಳ ಗಮ್ಯತೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

    ಜಿಲ್ಲೆಯಲ್ಲಿ 1163 ದೇವಸ್ಥಾನ ಮುಜರಾಯಿ ವ್ಯಾಪ್ತಿಯಲ್ಲಿವೆ. ತುಳಸಿಗೇರಿ ದೇವಸ್ಥಾನ ಮಾತ್ರ ಎ ಕೆಟಗರಿಯಲ್ಲಿ ಇದೆ. ಉಳಿದವು ಬಿ ಮತ್ತು ಸಿ ವಿಭಾಗದಲ್ಲಿವೆ. ಆದರೆ, ಬಹಳ ದೇವಸ್ಥಾನಗಳಿಗೆ ವ್ಯವಸ್ಥಾಪಕ ಮಂಡಳಿ ರಚನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರ ಅಧಿಸೂಚನೆ ಹೊರಡಿಸಿದ ಎಲ್ಲ ದೇವಸ್ಥಾನಗಳಿಗೆ ಕಡ್ಡಾಯವಾಗಿ ವ್ಯವಸ್ಥಾಪಕ ಮಂಡಳಿ ರಚನೆ ಮಾಡಬೇಕು ಎಂದು ಸೂಚಿಸಿದರು.

    ದೇವಸ್ಥಾನಗಳ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ರಾಜಿ ಮಾಡುಕೊಳ್ಳುವ ಪ್ರಶ್ನೆ ಇಲ್ಲ. ದೇವಸ್ಥಾನ ಆಸ್ತಿಗಳ ಬಗ್ಗೆ ಸರ್ವೇ ಮಾಡಿ ಸರಹದ್ದು ಗುರುತಿಸಿ ಬೇಲಿ ಹಾಕಬೇಕು. ಅಧಿಕಾರಿಗಳು ಈ ಬಗ್ಗೆ ಹದ್ದಿನ ಕಣ್ಣು ಇರಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಕ್ರಿಯೆ ನೀಡಿ, ಬಾದಾಮಿ ಬನಶಂಕರಿ ದೇವಸ್ಥಾನ ವಿಷಯ ನ್ಯಾಯಾಲಯದಲ್ಲಿದೆ. ಸದ್ಯಕ್ಕೆ 55 ದೇವಸ್ಥಾನಗಳಿಗೆ ವ್ಯವಸ್ಥಾಪಕ ಮಂಡಳಿ ರಚನೆ ಮಾಡಲಾಗಿದೆ. ಇನ್ನುಳಿದ ದೇವಸ್ಥಾನಗಳಿಗೆ ಆದಷ್ಟು ಬೇಗ ವ್ಯವಸ್ಥಾಪಕ ಮಂಡಳಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

    ಶಾಸಕ ವೀರಣ್ಣ ಚರಂತಿಮಠ, ಜಿಪಂ ಸಿಇಒ ಟಿ.ಭೂಬಾಲನ್, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಬಾಗಲಕೋಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹೇಮಲತಾ ಶಿಂಧೆ ಇತರರು ಇದ್ದರು.

    4 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ
    ರಾಜ್ಯದಲ್ಲಿರುವ ಸರ್ಕಾರಿ ದೇವಸ್ಥಾನಗಳ ಹುಂಡಿಗಳಲ್ಲಿ ವರ್ಷಕ್ಕೆ ಸದ್ಯದ ಸ್ಥಿತಿಯಲ್ಲಿ 400 ರಿಂದ 500 ಕೋಟಿ ರೂ. ವರೆಗೆ ಆದಾಯ ಬರುತ್ತಿದೆ. ಅಧಿಕಾರಿಗಳು ಕಟ್ಟು ನಿಟ್ಟಾಗಿ ಸರ್ಕಾರದ ನಿಯಮ ಪಾಲನೆ ಮಾಡಿದಲ್ಲಿ ಕನಿಷ್ಠ ಅಂದರು ವರ್ಷಕ್ಕೆ 3 ರಿಂದ 4 ಸಾವಿರ ಕೋಟಿ ರೂ. ಆದಾಯ ಬರುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ದೇವಸ್ಥಾನಗಳಿಗೆ ಪಾರಂಪರಿಕವಾಗಿ ಕೆಲವು ಕುಟುಂಬಗಳಿಗೆ ಪೂಜಾರಿಕೆ ಬಂದಿರುತ್ತದೆ. ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ತಿಳಿಸಿದರು.

    ಸಪ್ತಪದಿ ಅನುಷ್ಠಾನಗೊಳಿಸಿ
    ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಸಮಾಜದಲ್ಲಿ ಸರಳ ಮದುವೆ ನಡೆಯಬೇಕು ಎನ್ನುವ ಉದ್ದೇಶದಿಂದ ಸಪ್ತಪದಿ ಯೋಜನೆ ಸರ್ಕಾರ ಜಾರಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ಸಪ್ತಪದಿ ಕಾರ್ಯಕ್ರಮ ನಡೆಯುತ್ತಿಲ್ಲ ಯಾಕೆ ಎಂದು ಸಚಿವ ಪೂಜಾರಿ ಪ್ರಶ್ನಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಕ್ರಿಯೆ ನೀಡಿ, ಜಿಲ್ಲೆಯಲ್ಲಿ 1 ದೇವಸ್ಥಾನ ಮಾತ್ರ ಎ ಕೆಟಗರಿಯಲ್ಲಿ ಇದೆ. ಅದರ ಆದಾಯದಲ್ಲಿ ಸಪ್ತಪದಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅನುದಾನ ಬೇಕಾಗಿದೆ ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೋಟ ಶ್ರೀನಿವಾಸ, ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರು ಮಾಡಲಾಗುವುದು. ಬರುವ ಬಜೆಟ್‌ನಲ್ಲಿ ಈ ಯೋಜನೆಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಮದುವೆ ಗುರಿ ಇಟ್ಟಕೊಳ್ಳಬೇಕು. ಅನುದಾನಕ್ಕೆ ಸ್ಥಳೀಯ ಶಾಸಕರಿಗೆ ಮನವಿ ಮಾಡಬೇಕು. ಆಸಕ್ತ ಶಾಸಕರು ಸಹಾಯ, ಸಹಕಾರ ನೀಡುತ್ತಾರೆ. ಒಟ್ಟಾರೆಯಾಗಿ ಸಪ್ತಪದಿ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

    ಮಂತ್ರಿಗಳು ತಮಾಷೆ ಮಾಡಲಿಕ್ಕೆ ಬರ್ತಾರಾ?
    ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೋಟ ಶ್ರೀನಿವಾಸ, ಜಿಲ್ಲೆಯಲ್ಲಿ ಅನೇಕ ಹಿಂದುಳಿದ ವರ್ಗಗಳ ವಸತಿ ನಿಲಯಗಳು ಖಾಸಗಿ ಬಿಲ್ಡಿಂಗ್‌ನಲ್ಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಯಿಂದ ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಿಸಬೇಕು. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು. ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ಪರಿಶೀಲನೆ ಮಾಡಬೇಕು. ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಗಳ ಬಗ್ಗೆ ಪಟ್ಟಿ ನೀಡಬೇಕು ಎಂದು ಸೂಚನೆ ನೀಡಿದರು.

    ಇನ್ನು ಮುಧೋಳ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ ಅಲ್ಲೋಳ್ಳಿ ಸಭೆಗೆ ಗೈರು ಉಳಿದಿದ್ದಕ್ಕೆ ಗರಂ ಆದ ಸಚಿವ ಕೋಟ ಶ್ರೀನಿವಾಸ ಮಂತ್ರಿಗಳು ತಮಾಷೆ ಮಾಡಲಿಕ್ಕೆ ಬರ್ತಾರಾ? ಎಂದು ಗದರಿಸಿದರು. ಕೂಡಲೇ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು.

    ವಿವಿಧ ದೇವಸ್ಥಾನ, ವಸತಿ ನಿಲಯಗಳಿಗೆ ಭೇಟಿ
    ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಳಗ್ಗೆ ತುಳಸಿಗೇರಿ ಗ್ರಾಮದ ತುಳಸಿಗೇರಿಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ ದರ್ಶನ ಪಡೆದರು. ಅಲ್ಲದೆ, ಐತಿಹಾಸಿಕ ಮುಚಖಂಡಿ ಕೆರೆ, ಬಾಗಲಕೋಟೆ ನಗರದಲ್ಲಿರುವ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಿಜೆಪಿ ಮುಖಂಡರು ಸಾಥ್ ನೀಡಿದರು.



    ವ್ಯವಸ್ಥಾಪಕ ಮಂಡಳಿ ರಚಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts