More

    ಗೈರು ಹಾಜರಾದವರಿಗೆ ನೋಟಿಸ್ ಜಾರಿ

    ಬಾಗಲಕೋಟೆ: ಸರ್ಕಾರದ ಸಭೆಗಳ ಬಗ್ಗೆ ಗಂಭೀರತೆ ಇಲ್ಲವೇ? ಮುಂಚಿತವಾಗಿ ಮಾಹಿತಿ ನೀಡಿದ್ದರೂ ಸಭೆಗೆ ಗೈರು ಉಳಿಯುವುದು ತರವಲ್ಲ ಎಂದು ಸಂಸದ ಪಿ.ಸಿ.ಗದ್ದಿಗೌಡರ ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಮಂಗಳವಾರ ಜರುಗಿದ ಮೊದಲ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನುಮತಿ ಪಡೆಯದೆ ಸಭೆಗೆ ಗೈರಾದ ಜಮಖಂಡಿ ಮತ್ತು ಮುಧೋಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಪಂ ಸಿಇಒ ಟಿ.ಭೂಬಾಲನ್ ಅವರಿಗೆ ಖಡಕ್ ಸೂಚನೆ ನೀಡಿದರು.

    ಕೇಂದ್ರ ಪುರಷ್ಕೃತ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನೆಪ ಹೇಳದೆ ಚುರುಕಾಗಿ ಕಾರ್ಯನಿರ್ವಹಿಸಬೇಕು. ಶೌಚಗೃಹ, ಮನೆ, ಕುಡಿಯುವ ನೀರು, ಸ್ವಚ್ಛತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಉದ್ಯೋಗ ಖಾತ್ರಿ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ 42 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇದ್ದು, ಈ ಪೈಕಿ ಜುಲೈ ಅಂತ್ಯಕ್ಕೆ 1567361 ಮಾನವ ದಿನಗಳನ್ನು ಸೃಜಿಸಲಾಗಿದೆ. ಸಾಮಾಜಿಕ ಅರಣ್ಯ, ಪ್ರಾದೇಶಿಕ ಅರಣ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಿಆರ್‌ಇಡಿಯಿಂದ 15.90 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಈ ಪೈಕಿ 621478 ಪಿಡಿ ಜನರೇಷನ್ ಮಾಡಲಾಗಿದೆ. ಬಾಗಲಕೋಟೆ ತಾಲೂಕಿನಿಂದ ವಲಸೆ ಹೋಗಿದ್ದ ಕಾರ್ಮಿಕರು ಕೋವಿಡ್ ಹಿನ್ನೆಲೆಯಲ್ಲಿ ಮರಳಿ ಬಂದಿದ್ದು, ಅವರಿಗೆ ಕೆಲಸ ನೀಡಲಾಗುತ್ತಿದೆ. ನೀಲಾನಗರದಲ್ಲಿ 700 ವಲಸೆ ಕಾರ್ಮಿಕರು ಇದ್ದು, ಅವರೆಲ್ಲರಿಗೂ ಕೆಲಸ ನೀಡಲಾಗಿದೆ ಎಂದು ಬಾಗಲಕೋಟೆ ತಾಪಂ ಇಒ ಎನ್.ವೈ. ಬಸರಿಗಿಡದ ಸಭೆಗೆ ತಿಳಿಸಿದರು.

    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕೇಂದ್ರ ಪುರಷ್ಕೃತ ಯೋಜನೆಯಲ್ಲಿ ಬಾಕಿ ಉಳಿದಿರುವ ಅನುಷ್ಠಾನವನ್ನು ಪೂರ್ಣಗೊಳಿಸುವ ಕೆಲಸವಾಗಬೇಕು. ಕಮತಗಿಯಲ್ಲಿ 200 ಶೌಚಗೃಹಗಳು ನಿರ್ಮಾಣವಾಗಿದ್ದು, ಹಣ ಬಿಡುಗಡೆಯಾಗಿರದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ತುರ್ತಾಗಿ ಬಿಲ್ ಪಾವತಿಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ, ತೋಟಗಾರಿಕೆ, ಅರಣ್ಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ನಾಮನಿರ್ದೇಶಿತ ಸದಸ್ಯರಾದ ಗಣೇಶ ಲಗಳಿ, ವಿಜಯ ವಾಜಂತ್ರಿ, ಸೋಮಲಿಂಗಪ್ಪ ಕಲಹಾಳ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಿ
    ಸ್ವ-ಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿಯಿಂದ ಸಾಲ ನೀಡಲು ಪ್ರಸಕ್ತ ಸಾಲಿಗೆ 106 ಗುರಿ ಇದ್ದು, 1.52 ಲಕ್ಷ ಮಾಸ್ಕ್‌ಗಳನ್ನು ತಯಾರಿಸಿ ಸಾರ್ವಜನಿಕರಿಗೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ 800 ಗುರಿ ಪೈಕಿ 673 ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಲಾಗಿದೆ. 50 ಹೊಸ ಸಂಘಗಳನ್ನು ರಚಿಸಲಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ ಸಭೆಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts