More

    ರಾಸುಗಳ ಮೇಲೆ ರೈತರ ಪ್ರೀತಿ ಅನನ್ಯ

    ಬಾಗಲಕೋಟೆ: ಕೋಟೆನಗರಿಯ ಮೋಟಗಿ ಬಸವೇಶ್ವರ ಜಾತ್ರೆ ಅಂಗವಾಗಿ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮ್ಮಿಕೊಂಡಿರುವ ಐತಿಹಾಸಿಕ ಜಾನುವಾರು ಜಾತ್ರೆಗೆ ಸೋಮವಾರ ಚಾಲನೆ ದೊರೆಯಿತು.

    ನಗರದ ಹೊರವಲಯದ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಜಾತ್ರೆ ಉದ್ಘಾಟಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಾಗಲಕೋಟೆ ಜಾನುವಾರ ಜಾತ್ರೆಗೆ ವಿಶೇಷ ಸ್ಥಾನಮಾನವಿದೆ. ನೂರಾರು ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರೆ ರೈತರ ಹಬ್ಬವಾಗಿ ಮಾರ್ಪಟ್ಟಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಕೃಷಿಯಲ್ಲಿ ಜಾನುವಾರುಗಳ ಬಳಕೆ, ಸಾಕಣೆ ದೊಡ್ಡ ಸವಾಲ್ ಆಗಿದೆ. ಪ್ರಾಕೃತಿಕ ವಿಕೋಪ, ಕೌಟುಂಬಿಕ ಕಷ್ಟ, ನಷ್ಟಗಳ ನಡುವೆಯೂ ಅನ್ನದಾತರು ಜಾನುವಾರುಗಳ ಮೇಲಿನ ಪ್ರೀತಿ ಎಂದಿಗೂ ಕ್ಷಿಣಿಸಿಲ್ಲ ಎಂದರು.

    ಮನೆಯಲ್ಲಿ ಬಡತನ, ತುಂಬಾ ಕಷ್ಟ ಇದ್ದರೂ ಎಮ್ಮೆ, ಆಕಳು, ಹೋರಿ ಸೇರಿ ಎಲ್ಲ ರೀತಿಯ ಜಾನುವಾರುಗಳನ್ನು ರೈತರು ಸಾಕುತ್ತಾರೆ. ಕೋವಿಡ್ ಮಹಾಮಾರಿ ನಮ್ಮೆಲ್ಲರ ಬದುಕು ದುರ್ಬರಗೊಳಿಸಿತು. ರೈತರು ಕೂಡ ಬಹಳ ತೊಂದರೆ ಅನುಭವಿಸಿದರು. ಏನೆಲ್ಲ ತೊಂದರೆ ಬಂದರು, ತಮ್ಮ ಜೀವನ ಭಾರವಾದರು ಜಾನುವಾರುಗಳ ಬಗ್ಗೆ ನಿಸ್ಸಕಾಳಜಿ ಮಾಡುವುದಿಲ್ಲ ಎಂದು ತಿಳಿಸಿದರು.

    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕಳೆದ ವರ್ಷ ಬಾಗಲಕೋಟೆ ಜಾನುವಾರು ಜಾತ್ರೆ ಯಾವುದೇ ಆತಂಕವಿಲ್ಲದೆ ನಡೆದಿತ್ತು. ನಂತರ ಕೆಲವೇ ದಿನಗಳಲ್ಲಿ ಕೋವಿಡ್ ವ್ಯಾಪಿಸಿ ಲಾಕ್‌ಡೌನ್ ಜಾರಿ ಮಾಡಲಾಯಿತು. 10 ತಿಂಗಳ ಕಾಲ ರಾಜ್ಯದಲ್ಲಿ ಯಾವುದೇ ಜಾತ್ರೆ, ಸಮಾರಂಭ ನಡೆಯಲಿಲ್ಲ. ಇದೀಗ ದೇವರ ಕೃಪೆಯಿಂದ ಕೋವಿಡ್ ಕಡಿಮೆಯಾಗಿದೆ. ನಮ್ಮ ಐತಿಹಾಸಿಕ ಬಾಗಲಕೋಟೆ ಜಾನುವಾರು ಜಾತ್ರೆ ಉತ್ತಮ ರೀತಿಯಲ್ಲಿ ಆರಂಭಗೊಂಡಿದೆ. ರೈತರು ತಮ್ಮ ರಾಸುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬೇಕು. ಶಾಂತ ರೀತಿಯಿಂದ ಜಾತ್ರೆಯಲ್ಲಿ ಭಾಗವಹಿಸಬೇಕು. ಎಪಿಎಂಸಿ ವತಿಯಿಂದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

    ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ಲಮಾಣಿ, ಸದಸ್ಯರಾದ ಶ್ರೀಶೈಲ ಗೌರಿ, ನಿಂಗಪ್ಪ ಅರಕೇರಿ, ಮುರಿಗೆಪ್ಪ ವೈಜಾಪುರ, ಮಲ್ಲಪ್ಪ ದ್ಯಾವಣ್ಣವರ, ಬಸವರಾಜ ಪಾಟೀಲ, ಸಿದ್ದಪ್ಪ ಹೂಗಾರ, ಶೇಖರಪ್ಪ ಹೆರಕಲ್ಲ, ಯಲ್ಲಪ್ಪ ಅಮಾತಿಗೌಡರ ಸೇರಿ ಇತರರು ಇದ್ದರು.

    ಮೊದಲ ದಿನ ನೀರಸ ಪ್ರತಿಕ್ರಿಯೆ
    ಮಾ.1 ರಿಂದ ಆರಂಭವಾಗಿರುವ ಜಾನುವಾರ ಜಾತ್ರೆ ಮಾ.5 ವರೆಗೆ ನಡೆಯಲಿದೆ. ಗದಗ, ವಿಜಯಪುರ, ಬೆಳಗಾವಿ, ರಾಯಚೂರು, ಕೊಪ್ಪಳ ಭಾಗದ ರೈತರು ಅಧಿಕ ಪ್ರಮಾಣದಲ್ಲಿ ಆಗಮಿಸುವುದು ವಾಡಿಕೆ. ಆದರೆ, ಈ ಸಾರಿ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಂಡು ಬಂದಿತು. ರಾಸುಗಳನ್ನು ಟ್ರಾೃಕ್ಟರ್, ಟಂಟಂ ಮೂಲಕ ಕರೆ ತರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಂಗಳವಾರ ಬೆಳಗ್ಗೆವರೆಗೆ ಜಾನುವಾರು ಜಾಸ್ತಿ ಪ್ರಮಾಣದಲ್ಲಿ ಸೇರುವ ನಿರೀಕ್ಷೆ ಇದೆ.



    ರಾಸುಗಳ ಮೇಲೆ ರೈತರ ಪ್ರೀತಿ ಅನನ್ಯ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts