More

    ಕಲ್ಯಾಣ ಕಾರ್ಯದಲ್ಲಿ ಕನ್ನ!

    ಬಾಗಲಕೋಟೆ: ಮನೆಯವರೆಲ್ಲರೂ ಮದುವೆ ಸಂಭ್ರಮದಲ್ಲಿದ್ದ ವೇಳೆ ಹೊಂಚು ಹಾಕಿದ ಕಳ್ಳರು ವರನ ಕಡೆಯ ನೆಂಟರ ಅಂದಾಜು 200 ಗ್ರಾಂ ಚಿನ್ನದೊಡುವೆ ದೋಚಿದ್ದಾರೆ.

    ಬಾಗಲಕೋಟೆ ಬಸ್ ನಿಲ್ದಾಣ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದ ನಡುವೆ ಈ ಘಟನೆ ನಡೆದಿದೆ.

    ಬೀಳಗಿ ಮೂಲದ ವಧು ಹಾಗೂ ಬಾದಾಮಿ ಮೂಲದ ವರನ ಮದುವೆ ಸಮಾರಂಭ ಭಾನುವಾರ ಇತ್ತು. ಶನಿವಾರ ಸಂಜೆಯೇ ಎರಡು ಕುಟುಂಬದವರು ಹಾಗೂ ಆಪ್ತರು ಕಲ್ಯಾಣ ಮಂಪಟಕ್ಕೆ ಆಗಮಿಸಿದ್ದರು. ಅಲ್ಲಿನ ಕೊಠಡಿಗಳಲ್ಲಿ ಎಂಟತ್ತು ಜನರು ಇದ್ದರು. ವರನ ಕಡೆಯವರು ಇದ್ದ ಕೊಠಡಿಯೊಂದರಲ್ಲಿನ ಅಂದಾಜು 200 ಗ್ರಾಂ ಒಡವೆಗಳು ನಾಪತ್ತೆ ಆಗಿವೆ.

    ವಿವಾಹ ಮಹೋತ್ಸವಕ್ಕೆ ಅನೇಕ ನೆಂಟರು, ಆಪ್ತರು ಬಂದಿದ್ದರು. ಕೊಠಡಿಯಲ್ಲಿ ಅನೇಕರು ಹೋಗಿ ಬರುತ್ತಿದ್ದರು. ಚಿನ್ನಾಭರಣ ಇಟ್ಟಿರುವುದನ್ನು ನೋಡಿ ನೆಂಟರ ಮುಖವಾಡದಲ್ಲಿ ಕಳ್ಳರೇ ಬಂದು ದೋಚಿ ಪರಾರಿಯಾಗಿದ್ದಾರಾ ಎನ್ನುವ ಪ್ರಶ್ನೆ ಕಾಡತೊಡಗಿದೆ.

    ಮದುವೆ ಸಂಭ್ರಮದಲ್ಲಿ ಇದ್ದಿದ್ದರಿಂದ ಚಿನ್ನಾಭರಣ ಕಳ್ಳತನದ ವಿಷಯ ದೊಡ್ಡದು ಮಾಡಲು ಹೋಗಿಲ್ಲ. ಅಂದಾಜು 8 ರಿಂದ 9 ಲಕ್ಷ ರೂ. ಒಡವೆಗಳು ಕಳ್ಳತನ ಆಗಿದ್ದು, ಚಿನ್ನಾಭರಣ ಕಳೆದುಕೊಂಡವರ ಮೊಗದಲ್ಲಿನ ಮದುವೆ ಸಂಭ್ರಮವನ್ನು ಕಿತ್ತುಕೊಂಡಿತ್ತು.

    ಬಾಗಲಕೋಟೆ ಶಹರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂಜೆವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಭಾರಿ ಮೊತ್ತದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಬಾಗಲಕೋಟೆ ಶಹರ ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಇದರ ಜತೆಗೆ ಮದುವೆ ಸಮಾರಂಭದ ವಿಡಿಯೋ ಫುಟೇಜ್ ಪಡೆದುಕೊಂಡಿದ್ದು, ಅಪರಿಚಿತರು, ಈ ಹಿಂದೆ ಕಳ್ಳತನದಲ್ಲಿ ಪಾಲ್ಗೊಂಡಿರುವ ಆರೋಪಿಗಳು ಯಾರಾದರೂ ಕಲ್ಯಾಣ ಮಂಟಪಕ್ಕೆ ಬಂದಿದ್ದಾರಾ ? ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

    ದೂರು ದಾಖಲಾಗಿಲ್ಲ
    ಇತ್ತೀಚಿನ ದಿನಗಳಲ್ಲಿ ಮದುವೆ ಸಂಭ್ರಮ ಇರುವ ಕಡೆ ನೆಂಟರ ವೇಷದಲ್ಲಿ ತೆರಳಿ ಮದುವೆಗೆ ಬಂದಿದ್ದವರು ಪಾಕೆಟ್, ಚಿನ್ನಾಭರಣ ದೋಚುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ದುಡ್ಡು, ಒಡವೆ ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗುತ್ತಿಲ್ಲ. ತಮ್ಮತಮ್ಮಲ್ಲೇ ಈ ಬಗ್ಗೆ ಮಾತನಾಡಿಕೊಂಡು ಮದುವೆ ಮುಗಿಸಿ ನೋವಿನಲ್ಲಿ ಹಿಂತಿರುಗುತ್ತಿದ್ದಾರೆ. ನೆಂಟರ ಮುಖವಾಡದಲ್ಲಿ ಕಳ್ಳರು ಕಲ್ಯಾಣ ಮಂಟಪಕ್ಕೆ ಬಂದು ಸುಲಭವಾಗಿ ತಮ್ಮ ಕೈಚಳಕ ತೋರಿಸಿ ಹಣ-ಒಡವೆ ದೋಚಿ ಪರಾರಿ ಆಗುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಎಲ್ಲ ಕಲ್ಯಾಣ ಮಂಪಟದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಅವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸುವುದು ಉತ್ತಮ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts