More

    ಸಿದ್ದು ಸವದಿ ವಿರುದ್ಧ ಕೈ ನಾಯಕರ ರಣಕಹಳೆ

    ಬಾಗಲಕೋಟೆ: ಇತ್ತೀಚೆಗೆ ಮಹಾಲಿಂಗಪುರ ಪುರಸಭೆಯಲ್ಲಿ ನಡೆದಿದ್ದ ಮಹಿಳಾ ಸದಸ್ಯರ ತಳ್ಳಾಟ, ನೂಕಾಟ ಹಾಗೂ ತಳ್ಳಾಟಕ್ಕೆ ಸಿಕ್ಕಿದ್ದ ಗರ್ಭಿಣಿಯ ಗರ್ಭಪಾತ ವಿಚಾರವಾಗಿ ಶನಿವಾರ ಮಹಾಲಿಂಗಪುರದಲ್ಲಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

    ಘಟನೆಯಲ್ಲಿ ಪಾಲ್ಗೊಂಡಿದ್ದ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ವಿರುದ್ಧ ಕಾಂಗ್ರೆಸ್ ಮುಖಂಡರು ರಣಕಹಳೆ ಮೊಳಗಿಸಿದ್ದಾರೆ. ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಶಾಸಕ ಹಾಗೂ ಅವರ ಬೆಂಬಲಿರನ್ನು ಬಂಧಿಸುವವರೆಗೂ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಜೀವಂತ ಇಡುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.

    ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ, ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷರು ಸೇರಿ ಘಟಾನುಘಟಿ ಮುಖಂಡರು ಭಾಗವಹಿಸಿದ್ದರಿಂದ ಪಕ್ಷದ ಕಾರ್ಯಕರ್ತರ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಮಹಾಲಿಂಗಪುರ ಮಾತ್ರವಲ್ಲದೇ ಜಿಲ್ಲಾದ್ಯಂತ ವಿವಿಧ ಭಾಗದಿಂದ ಆಗಮಿಸಿದ್ದ ಕಾರ್ಯಕರ್ತರು, ಶಾಸಕ ಸಿದ್ದು ಸವದಿ ವಿರುದ್ಧ ಘೋಷಣೆ ಕೂಗಿ ರಾಜೀನಾಮೆಗೆ ಆಗ್ರಹಿಸಿದರು.

    ಪ್ರತಿಭಟನಾ ರ‌್ಯಾಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಸಿದ್ದು ಸವದಿ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದು ಸವದಿ ಒಬ್ಬ ರೌಡಿ, ನಾಲಾಯಕ್ ಶಾಸಕ, ಕಿಂಚಿತ್ತು ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿದ್ದು ಸವದಿ ವಿರುದ್ಧ ಕೈ ನಾಯಕರ ರಣಕಹಳೆ

    ಕ್ಷೇತ್ರದ ಶಾಸಕನಿಗೆ ಸಂಸ್ಕಾರವೇ ಇಲ್ಲ. ಕೇವಲ ಪುರಸಭೆ ಅಧಿಕಾರ ಹಿಡಿಯುವ ಉದ್ದೇಶದಿಂದ ಮಹಿಳೆಯರು ಎನ್ನುವುದನ್ನು ನೋಡದೇ ಎಳೆದಾಡಿದ್ದಾನೆ. ವಿಡಿಯೋ ಕ್ಲಿಪಿಂಗ್‌ನಲ್ಲಿ ನಾನು ನೋಡಿದ್ದೇನೆ. ಸಿದ್ದು ಸವದಿ ಕೃತ್ಯದಿಂದ ಒಬ್ಬ ಗರ್ಭಿಣಿಗೆ ಗರ್ಭಪಾತ ಆಗಿದೆ. ಹೀಗಾಗಿ ಗುಂಡಾ ಸವದಿ ಹಾಗೂ ಆತನ ಚೇಲಾಗಳನ್ನು ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.

    ಇದು ಮನುಷ್ಯರು ಮಾಡುವ ಕೃತ್ಯವಲ್ಲ. ಅಂದು ನಡೆದ ಘಟನೆ ಶಾಸಕ ಸಿದ್ದು ಸವದಿ ಮನೆಯವರಿಗೆ ಆಗಿದ್ದರೆ ಸುಮ್ಮನಿರುತ್ತಿದ್ದರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಘಟನೆಯಲ್ಲಿ ಇಲ್ಲಿನ ಪೊಲೀಸರು ಶಾಸಕ ಸಿದ್ದು ಸವದಿ ಜೊತೆಗೆ ಶಾಮಿಲಾಗಿದ್ದಾರೆ. ಅಂದು ಕರ್ತವ್ಯದಲ್ಲಿ ಇದ್ದ ಪೊಲೀಸರನ್ನು ಅಮಾನತು ಮಾಡಬೇಕು. ಪೊಲೀಸರೇ ನೀವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಅಲ್ಲ. ನೀವು ಸರ್ಕಾರಿ ನೌಕರರು, ಮಹಿಳೆಯರ ರಕ್ಷಣೆಗೆ ಆದ್ಯತೆ ಕೊಡಬೇಕು. ನೀವು ಹಾಗೆ ಮಾಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕ ಆನಂದ ನ್ಯಾಮಗೌಡ, ಮಾಜಿ ಸಚಿವ ಬಿ.ಬಿ. ಚಿನ್ನಮನಕಟ್ಟಿ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಶಾಸಕ ಸಿದ್ದು ಸವದಿ ವರ್ತನೆಯಿಂದ ಇಡೀ ರಾಷ್ಟ್ರದಲ್ಲಿ ದೊಡ್ಡ ಅವಮಾನ ಆಗಿದೆ. ಮಹಿಳೆಗೆ ಗರ್ಭಪಾತದಿಂದ ಒಂದು ಮಗುವನ್ನು ಕೊಲೆ ಮಾಡಿದಂತಿದೆ. ರಾಷ್ಟ್ರದಲ್ಲಿ ತಲೆತೆಗ್ಗಿಸುವ ಕೆಲಸ ಆಗಿದೆ. ಆದರೆ, ಇವತ್ತಿನ ವರೆಗೂ ಮುಖ್ಯಮಂತ್ರಿಗಳು ಶಾಸಕರನ್ನು ಅರೆಸ್ಟ್ ಮಾಡಿಸಿಲ್ಲ. ಘಟನೆ ನಡೆದಿದ್ದು, ಮಹಿಳೆಯರನ್ನು ತುಳಿದಿದ್ದು ನಿಜತಾನೆ? ಅದಕ್ಕೆ ಸರ್ಕಾರ ಹೊಣೆ ಹೊರಬೇಕು.
    ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರು

    ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿ, ಅವರ ಹಕ್ಕು ಮೊಟಕುಗೊಳಿಸಿ, ಅವರ ಮೇಲೆ ಅಕ್ರಮಣ ಮಾಡಿದ್ದಾರೆ. ರಕ್ಷಣೆಗಾಗಿ ಪೊಲೀಸರಿಗೆ ಮನವಿ ಕೊಟ್ಟಿದ್ದರೂ ಅವರಿಗೆ ರಕ್ಷಣೆ ಸಿಕ್ಕಿಲ್ಲ. ಪೊಲೀಸರು ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡಿದ್ದಾರೆ. ಶಾಸಕರ ಹಾಗೂ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಬೇಕು.
    ಉಮಾಶ್ರೀ ಮಾಜಿ ಸಚಿವೆ

    ಅನೇಕ ಸಲ ಶಾಸಕರಾಗಿ ಅನುಭವ ಇರುವ ಹಿರಿಯ ರಾಜಕಾರಣಿ ಸಿದ್ದು ಸವದಿ ಅವರು ಮಹಿಳೆಯರ ಜೊತೆಗೆ ನಡೆದುಕೊಂಡಿರುವ ರೀತಿ ನೋಡಿ ನನ್ನ ಮನಸ್ಸಿಗೆ ಬಹಳ ನೋವು ಆಗಿದೆ. ಇದು ಸಣ್ಣ ಘಟನೆಯಂತೂ ಅಲ್ಲ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ನಾನು, ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ.
    ಎಸ್.ಆರ್. ಪಾಟೀಲ ಪರಿಷತ್ ಪ್ರತಿಪಕ್ಷ ನಾಯಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts