More

    ಹಳ್ಳಿಗಳಲ್ಲಿ ಮತದಾನ ಜಾಗೃತಿ

    ಬಾಗಲಕೋಟೆ: ಜಿಲ್ಲೆಯಾದ್ಯಂತ 191 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜರುಗಿದ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಬೇಕಾದ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ, ಮಹಿಳಾ ಮೀಸಲಾತಿ, ಯೋಗ್ಯ ಅಭ್ಯರ್ಥಿಗಳ ಆಯ್ಕೆ ಹಾಗೂ ಕೋವಿಡ್-19 ಸೋಂಕಿನ ಕಾರಣದಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಹಿಸಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ನಾನಾ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

    ಕೋವಿಡ್ ಸೋಂಕಿತರಿಗೂ ಮತದಾನ ಮಾಡಲು ರಾಜ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಚುನಾವಣಾ ಅಭ್ಯರ್ಥಿ ಹಾಗೂ ಮತದಾರರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಆದ್ದರಿಂದ ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಇಲಾಖೆ, ಅರಣ್ಯ, ಸಹಕಾರ ಹಾಗೂ ಇತರೆ ಇಲಾಖೆಯವರು ತಮ್ಮ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

    ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಮತದಾನ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ, ಸ್ವರಚಿತ ಕವನ ಸ್ಪರ್ಧೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಕಲಾವಿದರಿಂದ ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಚುನಾವಣಾ ತಹಸೀಲ್ದಾರ ಬಿ.ವೈ.ನಾಗಠಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಸೇರಿದಂತೆ ಇತರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts