More

    3756 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ

    ಬಾಗಲಕೋಟೆ: ಎರಡನೇ ಹಂತದಲ್ಲಿ ನಡೆಯುತ್ತಿರುವ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಡಿ.27ರಂದು ಮತದಾನ ಜರುಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

    109 ಗ್ರಾಮ ಪಂಚಾಯಿತಿಗಳ 1380 ಸ್ಥಾನಗಳಿಗೆ ಸ್ಪರ್ಧೆ ಮಾಡಿರುವ 3756 ಅಭ್ಯರ್ಥಿಗಳ ಹಣೆಬರಹವನ್ನು ಭಾನುವಾರ ಅಂದಾಜು 4 ಲಕ್ಷ 75 ಸಾವಿರ ಮತದಾರರು ನಿರ್ಧರಿಸಲಿದ್ದಾರೆ.

    ಬಾಗಲಕೋಟೆ ತಾಲೂಕು 172, ಬಾದಾಮಿ 202, ಗುಳೇದಗುಡ್ಡ 55, ಹುನಗುಂದ 104, ಇಳಕಲ್ಲ ತಾಲೂಕಿನಲ್ಲಿ 120 ಸೇರಿ ಒಟ್ಟು 653 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇದರಲ್ಲಿ 152 ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಇಚ್ಛಿತ ಅಭ್ಯರ್ಥಿಯ ಮುಂದೆ ಇರುವ ಚಿಹ್ನೆ ಮೇಲೆ ಮುದ್ರೆ ಒತ್ತುವ ಮೂಲಕ ಮತದಾನ ನಡೆಯಲಿದೆ. ಮತಗಟ್ಟೆಗೆ ಅಧಿಕಾರಿ 785, ಸಹಾಯಕ ಮತಗಟ್ಟೆ ಅಧಿಕಾರಿ 785, ಪೊಲೀಂಗ್ ಅಧಿಕಾರಿ 1587, ಗ್ರೂಪ್ ಡಿ 695 ಸೇರಿ ಒಟ್ಟು 3852 ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

    ಜಿಲ್ಲೆಯ 5 ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ಮತದಾನದ ಸಲಕರಣೆಗಳನ್ನು ಪಡೆದು ನಿಗದಿತ ಮತಗಟ್ಟೆಗಳಿಗೆ ಸಿಬ್ಬಂದಿ ತೆರಳಿದರು. ಕೇಂದ್ರಗಳಲ್ಲಿ ಸಿಬ್ಬಂದಿಗೆ ಕುಡಿಯುವ ನೀರು, ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆ ಸಿಬ್ಬಂದಿಗೆ ಮತಗಟ್ಟೆಗೆ ತೆರಳಲು 81 ಬಸ್, 35 ಮಿನಿ ಬಸ್, ಕ್ರೂಜರ್ 16, ಜೀಪ್ 11 ಸೇರಿ ಒಟ್ಟು 145 ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕೋವಿಡ್ ಭೀತಿ ಹಿನ್ನೆಲೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನರ್, ಕೋವಿಡ್ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು.

    ಮತದಾನದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರತೆ ಸಲುವಾಗಿ 25 ಪಿಎಸ್‌ಐ, 13 ಸಿಪಿಐ ಮತ್ತು ಪೊಲೀಸ್, ಹೋಮ್‌ಗಾರ್ಡ್ಸ್ ಸೇರಿ 1200 ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪಿಸಿ ಅಥವಾ ಹೋಮಗಾರ್ಡ್ಸ್, ಸೂಕ್ಷ್ಮ ಮತಗಟ್ಟೆಗಳಿಗೆ ಓರ್ವ ಪಿಸಿ ಮತ್ತು ಓರ್ವ ಹೋಮ್ ಗಾರ್ಡ್ಸ್ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಓರ್ವ ಎಚ್‌ಸಿ, ಓರ್ವ ಪಿಸಿಯನ್ನು ನಿಯೋಜಿಸಲಾಗಿದೆ.

    ಬಾಗಲಕೋಟೆ ತಾಲೂಕಿಗೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಬಾದಾಮಿ ತಾಲೂಕಿಗೆ ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ಗುಳೇದಗುಡ್ಡ ತಾಲೂಕಿಗೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಶಂಕರ ಎಚ್. ಅಂಗಡಿ, ಹುನಗುಂದ ತಾಲೂಕಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕನವಾಡಿ, ಇಳಕಲ್ಲ ತಾಲೂಕಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ದಿವಟರ ಅವರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

    ಜಿಲ್ಲೆಯ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯಲ್ಲಿ ಬಾಗಲಕೋಟೆ-28, ಬಾದಾಮಿ-30, ಗುಳೇದಗುಡ್ಡ-12, ಹುನಗುಂದ-16, ಇಳಕಲ್ಲ-16 ಸೇರಿ 102 ಗ್ರಾ.ಪಂ.ಗಳ 1547 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಬಾದಾಮಿ ತಾಲೂಕಿನ ಕುಟಗನಕೇರಿ ಗ್ರಾಮದ 7 ಸ್ಥಾನ, ಹುನಗುಂದ ತಾಲೂಕಿನ ಹಿರೇಬಾದವಾಡಗಿ 2 ಸ್ಥಾನ ಸೇರಿ 9 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. 158 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

    ಜಿಲ್ಲೆಯಲ್ಲಿ ಎರಡನೇ ಹಂತದ 102 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಡಿ.27 ರಂದು ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾರರು ತಪ್ಪದೇ ಮತದಾನ ಮಾಡಬೇಕು.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ



    3756 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts