More

    ಪ್ರವಾಹ ಪರಿಸ್ಥಿತಿ ಅರಿತ ಕೇಂದ್ರ ತಂಡ

    ಬಾಗಲಕೋಟೆ: ಕಳೆದ ತಿಂಗಳು ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಹಾಗೂ ಅತಿಯಾಗಿ ಮಳೆ ಸುರಿದು ಹಾನಿಗೆ ಒಳಗಾದ ಸ್ಥಳಗಳಿಗೆ ಮಂಗಳವಾರ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿತು.

    ಮಧ್ಯಾಹ್ನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮಕ್ಕೆ ಮೊದಲು ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಗೋವನಕೊಪ್ಪ-ಕೊಣ್ಣೂರು ಹೆದ್ದಾರಿ ಸೇತುವೆ ವೀಕ್ಷಿಸಿದರು. ಇನ್ನೂ ಸಹ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಜಲಾವೃತವಾಗಿರುವ ಬೆಳೆಗಳನ್ನು ಕಣ್ಣಾರೆ ಕಂಡರು.

    ಬಳಿಕ ಮಲಪ್ರಭಾ ಪ್ರವಾಹದಿಂದ ಆಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿ, ಕೊಚ್ಚಿಹೋಗಿರುವ ರಸ್ತೆಗಳ ವೀಕ್ಷಣೆ ಮಾಡಿದರು. ಬೆಂಗಳೂರಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಕಚೇರಿ ಇಂಜನಿಯರ ಸದಾನಂದ ಬಾಬು, ಗ್ರಾಮೀಣಾಭಿವೃದ್ದಿ ಸಚಿವಾಲಯದ ಅಂಡರ್ ಸೆಕ್ರೆಟರಿ ವಿ.ಪಿ.ರಾಜವೇದಿ ಅವರನ್ನು ಒಳಗೊಂಡ ಕೇಂದ್ರ ಅಧ್ಯಯನ ತಂಡಕ್ಕೆ ಮಲಪ್ರಭಾ ನದಿ ಪ್ರವಾಹ, ಮಳೆಯಿಂದ ಆಗಿರುವ ಹಾನಿ ಬಗ್ಗೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ವಿವರಣೆ ನೀಡಿದರು.

    ಈ ವೇಳೆ ಗ್ರಾಮದ ಹೊಳಬಸಪ್ಪ ಮುದೆಪ್ಪನವರ ಮಾತನಾಡಿ, 2 ಎಕರೇ 17 ಗುಂಟೆ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಅಂದಾಜು 30 ಸಾವಿರ ಖರ್ಚುವಾಗಿತ್ತು. ಎಲ್ಲವು ಸರಿ ಇದ್ದರೇ 70 ಸಾವಿರ ರೂ.ಗಳಿಕೆ ಆಗುತ್ತಿತ್ತು. ಕಳೆದ ವರ್ಷದಂತೆ ಈ ವರ್ಷವು ಕೂಡಾ ನದಿ ನೀರಿಗೆ ಬೆಳೆಯಲ್ಲ ಕೊಚ್ಚಿ ಹೋಗಿದೆ. ಏನು ಮಾಡಬೇಕು ಅಂತ ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಕೇಂದ್ರ ಅಧ್ಯಯನ ತಂಡ ಅಧಿಕಾರಿಗಳು ಖರ್ಚು,ವೆಚ್ಚ ಹಾಗೂ ಹಾನಿ ಬಗ್ಗೆ ರೈತನಿಂದ ಮಾಹಿತಿ ಪಡೆದುಕೊಂಡರು.

    ರೈತರು ಬೇಸರ…
    ಇನ್ನು ಕೇಂದ್ರ ತಂಡ ಅಧಿಕಾರಿಗಳು ಗಡಿಬಿಡಿಯಲ್ಲಿ ಹಾನಿ ಅಧ್ಯಯನ ಮಾಡಿದರು. ಹೀಗಾಗಿ ಗೋವನಕೊಪ್ಪ ಗ್ರಾಮದಲ್ಲಿ ಬೆಳೆಹಾನಿ ಬಗ್ಗೆ ಅಧಿಕಾರಿಗಳ ಎದುರು ತಮ್ಮ ಸಂಕಷ್ಟ ತೋಡಿಕೊಳ್ಳಲು ಅವಕಾಶ ಸಿಗಲಿಲ್ಲ. ಸರ್ಕಾರ ಇವರನ್ನು ಯಾಕಾಗಿ ಕಳಿಹಿಸಿದೆ. ಇಲ್ಲಿ ನಮ್ಮ ಸಮಸ್ಯೆ ಕೇಳದೇ ವಾಹನದಲ್ಲಿ ಬಂದು ಹೋದರೆ ಯಾಕಾಗಿ ಬರಬೇಕು. ಪ್ರವಾಹ ಬಂದ ಬಳಿಕ ಕ್ಷೇತ್ರದ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಆಗಮಿಸಿ ಸಮಸ್ಯೆ ಆಲಿಸಿಲ್ಲ. ಅಧಿಕಾರಿಗಳು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಈ ರೀತಿ ಮಾಡಿದರೇ ನಮ್ಮ ಕಷ್ಟ ಯಾರಿಗೆ ಹೇಳೋನ ಎಂದು ಅನೇಕ ರೈತರು ಬೇಸರವನ್ನು ಹೊರಹಾಕಿದರು.

    ಗೋವನಕೊಪ್ಪದ ಬಳಿಕ ಅಧ್ಯಯನ ತಂಡ ಬಾದಾಮಿ ತಾಲೂಕಿನ ಹೆಬ್ಬಳ್ಳಿಗೆ ತೆರಳಿ ಪ್ರವಾಹ ತಂದಿಟ್ಟ ಆಪತ್ತು ವೀಕ್ಷಿಸಿದರು. ಅಲ್ಲಿಂದ ಬಾದಾಮಿಗೆ ಆಗಮಿಸಿದ ಕೇಂದ್ರ ತಂಡವು ಜಿಲ್ಲೆಯ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಂಜೆ ಜಿಲ್ಲೆಯ ಬಾಗಲಕೋಟೆ ಹಾಗೂ ಮುಧೋಳ ತಾಲೂಕಿನ ಘಟಪ್ರಭಾ ನದಿ ಪ್ರವಾಹದಿಂದ ಆಗಿರುವ ಬೆಳೆಹಾನಿ, ಕೊಚ್ಚಿರುವ ರಸ್ತೆ, ಹಾನಿ ಆಗಿರುವ ಸೇತುವೆ ಹಾಗೂ ಹೆಸ್ಕಾಂ ನ ಸಾಮಗ್ರಿಗಳನ್ನು ವೀಕ್ಷಿಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಸಿಇಒ ಟಿ.ಭೂಬಾಲನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಇದ್ದರು.

    ಪ್ರವಾಹ, ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆಗಳು ನಷ್ಟವಾಗಿದೆ. ನೂರಾರು ಮನೆಗಳು, ರಸ್ತೆ, ಬ್ಯಾರೇಜ್, ವಿದ್ಯುತ್ ಸಾಮಗ್ರಿಗಳು ಸೇರಿದಂತೆ ಒಟ್ಟು 857.35 ಗಳಷ್ಟು ಹಾನಿ ಆಗಿರುವ ಬಗ್ಗೆ ಕೇಂದ್ರ ತಂಡಕ್ಕೆ ಸಮಗ್ರ ಮಾಹಿತಿ ನೀಡಲಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರಿಗೆ ಬೇಗನೆ ಪರಿಹಾರ ನೀಡಬೇಕು ಎಂದು ತಂಡಕ್ಕೆ ಮನವಿ ಸಲ್ಲಿಸಿದ್ದೇವೆ.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ

    ಕೇಂದ್ರ ತಂಡಕ್ಕೆ ವರದಿ ಸಲ್ಲಿಕೆ
    ಜಿಲ್ಲೆಯಲ್ಲಿ ಮುಧೋಳ ತಾಲೂಕಿನ ಮೀರ್ಜಿ, ಮಾಚಕನೂರ, ರಬಕವಿ-ಬನಹಟ್ಟಿ ತಾಲೂಕಿನ ನಂದಾಗಾಂವ ಗ್ರಾಮದ ಜನರಿಗಾಗಿ ಒಟ್ಟಿ ನಾಲ್ಕು ಪರಿಹಾರ ಕೇಂದ್ರ ಸಂತ್ರಸ್ತರಿಗಾಗಿ ಸ್ಥಾಪಿಸಿ ಒಟ್ಟು 210 ಜನರಿಗೆ ಆಶ್ರಯ ಕಲ್ಪಿಸಲಾಗಿತ್ತು. 215 ಕುಟುಂಬಗಳಿಗೆ ತಲಾ ಹತ್ತು ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಪ್ರವಾಹ, ಮಳೆಯಿಂದ ಒಟ್ಟು 469 ಮನೆಗಳು ಹಾನಿಯಾಗಿವೆ. 22473 ಹೆಕ್ಟೇರ್ ಕೃಷಿ, 12388 ಹೆಕ್ಟೇರ್ ತೋಟಗಾರಿಕೆ, 8.40 ರೇಷ್ಮೆ ಸೇರಿದಂತೆ ಒಟ್ಟು 34869 ಹೆಕ್ಟೇರ್ ಪ್ರದೇಶದ ಅಂದಾಜು 374.87 ಕೋಟಿ ರೂ.ಹಾನಿಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 999.63 ಕಿ.ಮೀ ಗ್ರಾಮೀಣ ರಸ್ತೆ, 32 ಸೇತುವೆಗಳು ಸೇರಿ ಅಂದಾಜು 26.70 ಕೋಟಿ ರೂ., ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ ರಾಜ್ಯ ಹೆದ್ದಾರಿ, 308 ಕಿ.ಮೀ ಜಿಲ್ಲಾ ಮುಖ್ಯರಸ್ತೆ, 54 ಸೇತುವೆಗಳು ಹಾನಿಯಾಗಿದ್ದು, ಅಂದಾಜು 379.62 ಕೋಟಿ ರೂ. ನಷ್ಟವಾಗಿದೆ. ಶಾಲೆ, ಅಂಗನವಾಡಿ, ಹೆಸ್ಕಾಂ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಅಂದಾಜು 857.35 ಕೋಟಿ ರೂ. ಹಾನಿಯಾಗಿದೆ ಎಂದು ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts