More

    ಹಳ್ಳಿಫೈಟ್‌ನಲ್ಲಿ ಮದಿರೆಯ ಖದರ್..!

    ಸಂತೋಷ ದೇಶಪಾಂಡೆ
    ಬಾಗಲಕೋಟೆ:
    ಚುನಾವಣೆಯಲ್ಲಿ ಹಣದ ಥೈಲಿ, ಜಾತಿ ಮೇಲಾಟ, ಪಕ್ಷಗಳ ಪ್ರತಿಷ್ಠೆ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಹಳ್ಳಿ ಫೈಟ್ ಎಂದೇ ಗುರುತಿಸಲ್ಪಡುವ ಪಂಚಾಯಿತಿಗಳ ಚುನಾವಣೆ ಖದರ್ ಬೇರೆ. ಈ ಸಾರಿ ಇದೆಲ್ಲವು ಮೀರಿ ಕೋಟೆನಾಡಿನಲ್ಲಿ ಮದ್ಯದ ಹೊಳೆ ಹರಿಯ ತೊಡಗಿದೆ.

    ಈ ಹಿಂದಿನ ಲೋಕಸಭೆ, ವಿಧಾನಸಭೆ, ಗ್ರಾಮ ಪಂಚಾಯಿತಿ ಚುನಾವಣೆಗಿಂತಲೂ ಜಿಲ್ಲೆಯಲ್ಲಿ ಈ ಸಾರಿ ಪಂಚಾಯಿತಿ ಫೈಟ್‌ನಲ್ಲಿ ಮದ್ಯದ ಹಾವಳಿ ದೊಡ್ಡ ಪ್ರಮಾಣದಲ್ಲಿ ದರ್ಬಾರ್ ನಡೆಯುತ್ತಿದೆ. ಸೂರ್ಯ ಮುಳುಗುತ್ತಿದ್ದಂತೆ ದಾಭಾ, ತೋಟ, ಜಮೀನುಗಳಲ್ಲಿ ಎಗ್ಗಿಲ್ಲದೆ ಪಾರ್ಟಿಗಳು ನಡೆಯುತ್ತಿವೆ. ಇದನ್ನು ಕಂಡು ಹಳ್ಳಿ ಜನ ಅಕ್ಷರಶಃ ತಬ್ಬಿಬ್ಬು ಗೊಂಡಿದ್ದಾರೆ. ಚುನಾವಣೆ ಅಬ್ಬಾ, ಮದ್ಯದ ಮಜಲು ಇನ್ನು ಅಬ್ಬಬ್ಬಾ ಎನ್ನುವಂತಾಗಿದೆ.

    15 ದಿನದಲ್ಲಿ 150 ಕ್ಕೂ ಹೆಚ್ಚು ಕಡೆ ದಾಳಿ
    ಜಿಲ್ಲೆಯಲ್ಲಿ ಅಕ್ರಮ ಮದ್ಯ, ಕಳ್ಳಬಟ್ಟಿ ದಂಧೆ ನಡೆದರೂ ಅಬಕಾರಿ ಇಲಾಖೆ ಅದಕ್ಕೆ ಕಡಿವಾಣ ಹಾಕುತ್ತಲೇ ಬಂದಿದೆ. ಅದರಲ್ಲೂ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಜಿಲ್ಲೆಯ ಇಲಾಖೆಯ ಆರು ವಲಯಗಳನ್ನು ಸೇರಿಸಿ 80 ತಂಡಗಳನ್ನು ರಚಿಸಿದ್ದು, ಹಗಲು, ರಾತ್ರಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. 2020 ನ. 30 ರಿಂದ 2020 ಡಿ. 15ರ ವರೆಗೆ 150ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ 67 ಪ್ರಕರಣ ದಾಖಲಿಸಿದ್ದಾರೆ. ದಾಳಿ ವೇಳೆ 160 ಲೀಟರ್ ಅಕ್ರಮ ಮದ್ಯ, 15 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದು, 36 ಲೀಟರ್ ಕಳ್ಳಬಟ್ಟಿ ಸರಾಯಿ ನಾಶ ಪಡಿಸಿದ್ದಾರೆ.

    ಗೆಲುವಿಗೆ ನಾನಾ ತಂತ್ರ
    ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಎಲ್ಲ ರೀತಿ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಪಕ್ಷ, ಆತ್ಮೀಯತೆ, ಜಾತಿಗಳನ್ನು ಮೀರಿ ಮದ್ಯದ ರುಚಿ ತೋರಿಸುವ ಮೂಲಕ ಮತ ಸೆಳೆಯುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಒಂದೆರಡು ದಿನಕ್ಕೆ ಮದ್ಯ ಹಂಚಿಕೆ ಸೀಮಿತವಾಗಿಲ್ಲ. ಮತದಾನ ಹಾಗೂ ಫಲಿತಾಂಶದವರೆಗೂ ಮದ್ಯ ನೀಡುವ ಬಗ್ಗೆ ಒಪ್ಪಂದವಾಗುತ್ತಿವೆ. ಹಿರಿಯರು, ಮಧ್ಯ ವಯಸ್ಕರಿಗಿಂತ ಯುವಕರೇ ಇದಕ್ಕೆ ಹೆಚ್ಚು ಮಾರು ಹೋಗುತ್ತಿರುವುದು ಆತಂಕ ಮೂಡಿಸಿದೆ.

    ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ, ಕಳಬಟ್ಟಿ ಸರಾಯಿ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 15 ದಿನಗಳಲ್ಲಿ 150 ದಾಳಿ ಮಾಡಿ 51 ಜನರನ್ನು ದಸ್ತಗಿರಿ ಮಾಡಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ, ಸಾಗಣೆ ಕಂಡಬಂದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
    ಎಚ್. ರಮೇಶಕುಮಾರ ಅಬಕಾರಿ ಉಪ ಆಯುಕ್ತ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts