More

    ಸಂಗಮನಾಥ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ

    ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ತಲ್ಲಣ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷದ ನಾಯಕರ ಆರೋಪ, ಪ್ರತ್ಯಾರೋಪದ ಆರ್ಭಟ ಜೋರಾಗಿದ್ದು, ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಾನಂದ ಕಾಶಪ್ಪನವರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನಕ್ಕೆ ನನಗೆ ಕರೆದಿಲ್ಲ. ಹೀಗಾಗಿ ನಾನು ಹೋಗುವ ಪ್ರಶ್ನೆ ಬರಲಿಲ್ಲ. ಮತದಾನಕ್ಕೆ ವಿನಂತಿಸಲಾಗಿದೆ ಎಂದು ಹೇಳಿಕೆ ನೀಡಿರುವ ಅಜಯಕುಮಾರ ಸರನಾಯಕ, ಎಸ್.ಆರ್.ಪಾಟೀಲ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಕೂಡಲ ಸಂಗಮದ ಸಂಗಮೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಕೂಡ ತೊಯ್ದ ಬಟ್ಟೆಯಲ್ಲಿ ಸಂಗಮನಾಥ ಸನ್ನಿಧಾನಕ್ಕೆ ಬರುತ್ತೇನೆ ಎಂದು ಸವಾಲು ಎಸೆದರು.

    ಡಿಸಿಸಿ ಬ್ಯಾಂಕ್ ವಿಷಯದಲ್ಲಿ ನನಗೆ ಮೋಸಮಾಡಿದ್ದಾರೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವುದು ಪಕ್ಷದ ಮುಖಂಡರಿಗೆ ಗೊತ್ತಿರುವ ವಿಷಯ. ಕಳೆದ ಬಾರಿಯೇ ಅವರು ಮಾತುಕೊಟ್ಟಂತೆ ಡಿಸಿಸಿ ಬ್ಯಾಂಕ್ ಅಧ್ಕಕ್ಷ ಸ್ಥಾನ ಬಿಟ್ಟು ಕೊಡಬೇಕಿತ್ತು. ಆದರೆ, ಸ್ವಾರ್ಥ ಮತ್ತು ಹತಾಶೆ ರಾಜಕಾರಣದಿಂದ ಅಧಿಕಾರ ನೀಡಲಿಲ್ಲ. ತಮ್ಮ ಜನಾಂಗದ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ತಂತ್ರ, ಕುತಂತ್ರ ಮಾಡುತ್ತಿದ್ದಾರೆ. ನನ್ನ ಹಿಂದೆ ನಮ್ಮ ಸಮಾಜವಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ರಾಜಕೀಯದಲ್ಲಿ ಚಿತ್ರಣ ಬದಲಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನೇ ವಿರೋಧ ಪಕ್ಷ ನಾಯಕ
    ಈ ಹಿಂದೆ ನಾನು ಕೇವಲ ಶಾಸಕನಾಗಿ ಕೆಲಸ ಮಾಡಿದ್ದೆ. ಡಿಸಿಸಿ ಬ್ಯಾಂಕ್ ವಿಷಯಕ್ಕೆ ಒತ್ತು ನೀಡಿರಲಿಲ್ಲ. ಇದೀಗ ಅಜಯಕುಮಾರ ಸರನಾಯಕ, ಎಸ್.ಆರ್.ಪಾಟೀಲ ಅವರೇ ಸಹಕಾರಿ ರಂಗದಲ್ಲಿ ರಾಜಕೀಯ ಇಲ್ಲ ಎಂದಿದ್ದಾರೆ. ತನ್ಮೂಲಕ ಡಿಸಿಸಿ ಬ್ಯಾಂಕ್‌ನಲ್ಲಿ ಪಕ್ಷ ರಾಜಕಾರಣ ಬರುವ ಪ್ರಮಯವೇ ಇಲ್ಲ. ಇದರಿಂದ ಡಿಸಿಸಿ ಬ್ಯಾಂಕ್ 14 ಸ್ಥಾನಗಳಲ್ಲಿ 13 ಜನ ನಿರ್ದೇಶಕರು ಒಂದೇಯಾದರು ಪರವಾಗಿಲ್ಲ. ನಾನು ಮಾತ್ರ ವಿರೋಧ ಪಕ್ಷ ನಾಯಕ. ಅಲ್ಲಿ ಯಾವ ಯಾವ ರೀತಿ ಹಗರಣ ನಡೆಯುತ್ತದೆ ಎನ್ನುವುದು ನನಗೆ ಗೊತ್ತಿದೆ. ಅದನ್ನು ದಾಖಲೆ ಸಮೇತ ಬಿಡುಗಡೆಗೊಳಿಸುತ್ತೇನೆ. ಈ ಸಾರಿ ಹೇಗೆ ಆಡಳಿತ ನಡೆಸುತ್ತಾರೆ ಎನ್ನುವುದನ್ನು ನಾನು ನೋಡುತ್ತೇನೆ ಎಂದು ಕಾಶಪ್ಪನವರ ಗುಡುಗಿದರು.

    ಬಹುಮತವಿದ್ದರೂ ಬಿಜೆಪಿ ಅಧಿಕಾರ ವಂಚಿತ
    ಡಿಸಿಸಿ ಬ್ಯಾಂಕ್ ವಿಷಯದಲ್ಲಿ ಮೊನ್ನೆ ಅಡ್ಡಮತದಾನ ಮಾಡಿರುವುದು ಯಾರು? ಎನ್ನುವುದು ಬಹಿರಂಗ ಸತ್ಯ. ನಾನೇನು ಹೆಚ್ಚು ಹೇಳಬೇಕಿಲ್ಲ. ರಾಮಣ್ಣ ತಳೇವಾಡ, ಮಹಾಂತೇಶ ಅಗಸಿಮುಂದಿನ ಅಡ್ಡಮತದಾನ ಮಾಡಿದ್ದಾರೆ. ಇದರಿಂದ ಬಹುಮತವಿದ್ದರೂ ಬಿಜೆಪಿ ಅಧಿಕಾರದಿಂದ ವಂಚಿತವಾಯಿತು. ಕಾಂಗ್ರೆಸ್ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು. ಅಗ್ರಗಣ್ಯ ನಾಯಕ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಇತರ ನಾಯಕರು ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲು ಸಹಕರಿಸಿದ ಕ್ರಮ ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದರು.



    ಸಂಗಮನಾಥ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts