More

    ಕುತೂಹಲ ಘಟ್ಟಕ್ಕೆ ಡಿಸಿಸಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

    ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಚುನಾವಣೆ ದಿನೇ ದಿನೆ ಕುತೂಹಲವನ್ನು ಹೆಚ್ಚಿಸುತ್ತಿದೆ. ಸರ್ಕಾರ ನೇಮಕ ಮಾಡಿದ್ದ ನಾಮನಿರ್ದೇಶಿತ ಸದಸ್ಯ ಸಿದ್ದನಗೌಡ ಪಾಟೀಲ ಅವರಿಗೆ ಮತದಾನ ಮಾಡಲು ಹೈಕೋರ್ಟ್ ಸಮ್ಮತಿ ನೀಡಿದೆ ಎಂದು ತಿಳಿದು ಬಂದಿದೆ.

    ಆದರೆ, ನ.17 ರಂದು ಫಲಿತಾಂಶ ಪ್ರಕಟಿಸುವಂತಿಲ್ಲ. ನ.18ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದ್ದು, ಅಂದು ನ್ಯಾಯಾಲಯ ನಿರ್ದೇಶನದ ಮೇರೆಗೆ ನಾಮನಿರ್ದೇಶಿತ ಸದಸ್ಯರ ಮತದಾನ ಸಿಂಧು ಆಗುತ್ತೋ ಅಥವಾ ಅಸಿಂಧು ಆಗುತ್ತೋ ಎನ್ನುವುದು ನಿರ್ಧಾರವಾಗಲಿದೆ.
    ಡಿಸಿಸಿ ಬ್ಯಾಂಕ್‌ನ 13 ಸ್ಥಾನಗಳಿಗೆ ನ.5 ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ 6 ಜನರು ಹಾಗೂ ಬಿಜೆಪಿ 5 ಜನರು ಗೆದ್ದಿದ್ದು, ಇಬ್ಬರು ಸ್ವತಂತ್ರರು ಗೆಲುವು ದಾಖಲಿಸಿದ್ದರು. ಇದರ ಜತೆಗೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹಾಗೂ ಜಿಲ್ಲಾ ಸಹಕಾರಿ ಇಲಾಖೆ ಪ್ರಬಂಧಕ ಮತದಾನದ ಹಕ್ಕು ಹೊಂದಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 15 ಮತದಾರರು ಇರುತ್ತಾರೆ ಎನ್ನಲಾಗಿತ್ತು.

    ಈ ನಡುವೆ ರಾಜ್ಯ ಸರ್ಕಾರದಿಂದ ಒಬ್ಬರನ್ನು ನಾಮನಿರ್ದೇಶನ ಮಾಡಿದ್ದರಿಂದ ಮತದಾರರ ಸಂಖ್ಯೆ 16ಕ್ಕೆ ಏರಿಕೆ ಆಗಿತ್ತು. ಆದರೆ, ಡಿಸಿಸಿ ಬ್ಯಾಂಕ್‌ನಲ್ಲಿ ರಾಜ್ಯ ಸರ್ಕಾರದ ಷೇರು ವಾಪಸ್ ಮಾಡಿದ್ದರಿಂದ ಅಲ್ಲಿಂದ ನಾಮನಿರ್ದೇಶಿತ ಸದಸ್ಯನ ನೇಮಕ ಅಗತ್ಯವಾಗಿಲ್ಲ ಎನ್ನುವುದು ಕಾಂಗ್ರೆಸ್ ಬೆಂಬಲಿತರ ವಾದವಾಗಿದೆ. ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಶುಕ್ರವಾರ ನ್ಯಾಯಾಲಯ ನಾಮನಿರ್ದೇಶಿತ ಸದಸ್ಯ ಮತದಾನ ಮಾಡಲಿ, ಆದರೆ, ಫಲಿತಾಂಶ ಪ್ರಕಟಿಸಬಾರದು. ನ. 18 ರಂದು ಈ ಬಗ್ಗೆ ವಿಚಾರಣೆ ನಡೆಸಿ, ತೀರ್ಪು ನೀಡಲಿದೆ. ಆದಾದ ಬಳಿಕ ಫಲಿತಾಂಶ ಬಹಿರಂಗವಾಗಲಿದೆ ಎಂದು ತಿಳಿದು ಬಂದಿದೆ. ಇದರಿಂದ ಡಿಸಿಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

    ಕೋರ್ ಕಮಿಟಿಯಲ್ಲಿ ಬಿಜೆಪಿ ತಂತ್ರ
    ಇನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಗೆಲುವು ಪಡೆಯುವ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು.

    ಸಭೆಯಲ್ಲಿ ಪಕ್ಷದ ಬೆಂಬಲಿತರಾಗಿ ಗೆಲುವು ಪಡೆದಿರುವ ಎಲ್ಲ ಐದು ಜನರು ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯ ಸೇರಿ ಒಟ್ಟು 6 ಜನರು ಒಗ್ಗಟ್ಟು ಕಾಯ್ದುಕೊಳ್ಳಬೇಕು. ಇದಲ್ಲದೆ ಇಬ್ಬರು ಸ್ವತಂತ್ರರಾದ ಕುಮಾರ ಜನಾಲಿ ಹಾಗೂ ಮುರುಗೇಶ ಕಡ್ಲಿಮಟ್ಟಿ ಅವರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕೆಲವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

    ಬಿಜೆಪಿ ಮುಖಂಡರೆ ಆಗಿರುವ ಬಾದಾಮಿಯ ಕುಮಾರ ಜನಾಲಿ ಅವರ ಮನವೊಲಿಸಿ ಅವರ ಬೆಂಬಲ ಪಡೆಯುವ ಜವಾಬ್ದಾರಿಯನ್ನು ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎನ್.ಪಾಟೀಲ ಹಾಗೂ ಮಹಾಂತೇಶ ಮಮದಾಪುರ ಅವರ ಹೆಗಲಿಗೆ ವಹಿಸಿದ್ದಾರೆ. ಇನ್ನು ಮುರುಗೇಶ ಕಡ್ಲಿಮಟ್ಟಿ ಅವರನ್ನು ಮನವೊಲಿಸಿ ಪಕ್ಷಕ್ಕೆ ಬೆಂಬಲ ಪಡೆಯುವ ಹೊಣೆಯನ್ನು ರಾಮಣ್ಣ ತಳೇವಾಡ ಹಾಗೂ ಪ್ರಕಾಶ ತಪಶೆಟ್ಟಿ ಅವರಿಗೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿಯುವವರೆಗೂ ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಇರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts