More

    ಮಹೇಶ ಕುಮಟಳ್ಳಿಗೆ ಇಲ್ಲ ಮಂತ್ರಿಗಿರಿ

    ಬಾಗಲಕೋಟೆ: ಬಿಜೆಪಿಗೆ ವಲಸೆ ಬಂದು ಗೆದ್ದ ಹನ್ನೊಂದು ಶಾಸಕರಲ್ಲಿ ಹತ್ತು ಜನರಿಗೆ ಸಚಿವ ಸ್ಥಾನ ನೀಡಿ ಮಹೇಶ ಕುಮಟಳ್ಳಿ ಅವರನ್ನು ಕೈಬಿಟ್ಟಿದ್ದಕ್ಕೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತೀವ್ರ ಬೇಸರ ಹೊರಹಾಕಿದ್ದಾರೆ.

    ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ರಮೇಶ ಜಾರಕಿಹೊಳಿ ಜತೆಗೆ ಆರಂಭದಿಂದ ಇದ್ದವರು ಮಹೇಶ ಕುಮಟಳ್ಳಿ. ಸಂಚಿವ ಸಂಪುಟಕ್ಕೆ ಅವರನ್ನು ಸೇರಿಸಿಕೊಳ್ಳದಿರುವುದು ಸಮಾಜದ ಜನರಿಗೆ ತಪ್ಪು ಸಂದೇಶ ಹೋಗಲಿದೆ ಎಂದರು.

    ಮಹೇಶ ಕುಮಟಳ್ಳಿ ಒಬ್ಬ ಪಂಚಮಸಾಲಿ ಸಮಾಜದ ವ್ಯಕ್ತಿ ಎನ್ನುವ ಕಾರಣಕ್ಕೆ ನಾವು ಸಚಿವ ಸ್ಥಾನ ಕೇಳುತ್ತಿಲ್ಲ. ಗೆದ್ದವರಿಗೆಲ್ಲ ಸಚಿವ ಸ್ಥಾನ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು. ಹೀಗಾಗಿ ನ್ಯಾಯ, ವಿಶ್ವಾಸ, ನಂಬಿಕೆ, ಸೈದ್ಧಾಂತಿಕ ರಾಜಕಾರಣದ ಭಾಗವಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈಗಲೂ ಕಾಲಮಿಂಚಿಲ್ಲ, ಮಹೇಶ ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರನ್ನು ಏಕೆ ಬಿಟ್ಟಿದ್ದಾರೆ ಎನ್ನುವುದು ನಮಗೆಲ್ಲ ಯಕ್ಷಪ್ರಶ್ನೆ ಆಗಿದೆ ಎಂದರು.

    ಮೂಲ ಬಿಜೆಪಿಯವರಿಗೆ ಸಚಿವ ಸ್ಥಾನ ಕೊಡುವ ವೇಳೆ ಪಂಚಮಸಾಲಿ ಸಮಾಜದ ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ ಅವರು ಇದ್ದಾರೆ. ಯಾರಿಗಾದರೂ ಅವಕಾಶ ಕೊಡಲಿ. ಸರ್ಕಾರ ರಚನೆಗೆ ಪ್ರಮುಖ ಕೊಡುಗೆ ನೀಡಿರುವ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಲ್ಲಿ ಯಡಿಯೂರಪ್ಪ ಅವರ ಬಗ್ಗೆ ನಾವು ಹೇಳಲ್ಲ. ಅವರ ಕೊಟ್ಟ ಪಟ್ಟಿಯಲ್ಲಿ ಕುಮಟಳ್ಳಿ ಅವರ ಹೆಸರು ಇತ್ತು. ಆದರೆ, ಹೈಕಮಾಂಡ್ ಅವರನ್ನು ಕೈಬಿಟ್ಟಂತೆ ಕಾಣುತ್ತಿದೆ. ಜಾರಕಿಹೊಳಿಯವರು ಕುಮಟಳ್ಳಿ ಅವರ ಪರವಾಗಿ ಒತ್ತಡ ಹಾಕಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪ, ಜಾರಕಿಹೊಳಿ ಎಲ್ಲರೂ ಸೇರಿ ಸೂಕ್ತ ತೀರ್ಮಾನ ತೆಗೆದುಕೊಂಡು ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

    ಚಾಲುಕ್ಯ ಉತ್ಸವ ಆಚರಿಸಲಿ
    ರಾಜ್ಯದ ಪ್ರಥಮ ಉತ್ಸವ ಆಗಿರುವ ಬಾದಾಮಿ ಚಾಲುಕ್ಯ ಉತ್ಸವ ಆಚರಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಮೈಸೂರು ಉತ್ಸವಕ್ಕೆ ಯಾವುದೇ ಸಮಸ್ಯೆಗಳು ಅಡ್ಡಿಯಾಗಲ್ಲ. ಆದರೆ, ಹಂಪಿ ಉತ್ಸವಕ್ಕೆ ನಾವು ಒತ್ತಾಯ ಮಾಡಬೇಕು. ಇನ್ನು ಬಾದಾಮಿ, ಪಟ್ಟದಕಲ್ಲು ಉತ್ಸವಕ್ಕೆ ಗ್ರಹಣವೇ ಹಿಡಿದಿದೆ. ಇದು ಸರಿಯಾದ ಕ್ರಮವಲ್ಲ. ಉತ್ತರ ಕರ್ನಾಟಕಕ್ಕೆ ಸಾಂಸ್ಕೃತಿಕವಾಗಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಸ್ವಾಮೀಜಿ ಹೇಳಿದರು.

    ನಾಲ್ಕೈದು ವರ್ಷಗಳಿಂದ ಉತ್ಸವ ನಡೆಸಿಲ್ಲ. ಬರ ಇಲ್ಲವೆ ನೆರೆ ನೆಪ ಹೇಳುವುದು ಸರಿಯಲ್ಲ. ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಇದ್ದಾರೆ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಡಿಸಿಎಂ ಇದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚಾಲುಕ್ಯ ಉತ್ಸವವನ್ನು ಫೆಬ್ರವರಿ ತಿಂಗಳಲ್ಲಿ ನಡೆಸಬೇಕು. ಇಲ್ಲವಾದಲ್ಲಿ ಸಾಹಿತಿಗಳು, ಸಾಂಸ್ಕೃತಿಕ ಲೋಕದ ಸಮಾನ ಮನಸ್ಕರ ಜತೆಗೂಡಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts