More

    ಕಲಬಂದಕೇರಿ ಮನೆಗಳಲ್ಲಿ ನೀರಿನ ಸೆಲೆ

    ಬಾಗಲಕೋಟೆ: ಮನೆ ಮನೆಗಳಲ್ಲಿ ನೀರಿನ ಸೆಲೆಗಳು ಸೃಷ್ಟಿಯಾಗುತ್ತಿವೆ. ನೋಡ ನೋಡುತ್ತಿದ್ದಂತೆ ನೀರು ಮನೆ ತುಂಬೆಲ್ಲ ಆವರಿಸಿ ಅಲ್ಲಿನ ನಿವಾಸಿಗಳಿಗೆ ಊಟ, ನಿದ್ದೆ ಇಲ್ಲದಂತಾಗಿದೆ. ಮೊದಲೇ ಬಹುತೇಕ ಮಣ್ಣಿನ ಮನೆಗಳಿದ್ದು, ಗೋಡೆಗಳು ನೆನೆದು ಯಾವಾಗ ಏನು ಎನ್ನುವ ಆತಂಕದಲ್ಲಿ ಬದುಕುವ ಸನ್ನಿವೇಶ ನಿರ್ಮಾಣ ಆಗಿದೆ.

    ಹೌದು, ಜಿಲ್ಲೆಯ ಬಾದಾಮಿ ತಾಲೂಕಿನ ಕಲಬಂದಕೇರಿ ಗ್ರಾಮದಲ್ಲಿ ವಿಚಿತ್ರ ಸಮಸ್ಯೆಗೆ ಜನರು ಈಡಾಗಿದ್ದಾರೆ. ಮೂರು ದಿನಗಳದಿಂದ ಅಬ್ಬರಿಸುತ್ತ ಜನರನ್ನು ಬೊಬ್ಬಿರಿಯುವಂತೆ ಮಾಡಿರುವ ರಕ್ಕಸ ಮಳೆಯಿಂದ ಪರದಾಡುವುದು ಒಂದು ಕಡೆಯಾದರೆ ಇದೀಗ ಮನೆ ಮತ್ತು ಅಂಗಳದಲ್ಲಿ ನೀರು ಬಸಿನೀರು ಹರಿದು ಬರುತ್ತಿರುವುದು ಜನರನ್ನು ದಿಕ್ಕುತೋಚದಂತೆ ಮಾಡಿದೆ.

    ಗ್ರಾಮದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿವರೆಗೂ ಭಾರಿ ಮಳೆ ಆಗಿದೆ. ಈಗಾಗಲೇ ಗ್ರಾಮದಲ್ಲಿ ಕೆಲ ಮಣ್ಣಿನ ಮನೆಗಳ ಗೋಡೆಗಳು ನೆಲಕ್ಕುರಳಿವೆ. ಇದರ ಮಧ್ಯೆ ಮನೆ ಒಳಗಡೆಯೇ ನೀರಿನ ಸೆಲೆಗಳು ಸೃಷ್ಟಿಯಾಗಿದ್ದು ಜನರ ನಿದ್ದೆಗೆಡೆಸಿದೆ.

    ನೀರು ಹೊರಹಾಕುವುದೇ ಸವಾಲು
    ಗ್ರಾಮದ ಅಂದಾಜು 30 ಮನೆಗಳಲ್ಲಿ ಸೆಲೆಗಳು ಕಾಣಿಸಿಕೊಂಡಿವೆ. ನೀರು ಹೊರಹಾಕುವುದೇ ಸವಾಲಿನ ಕೆಲಸವಾಗಿದೆ. ನೀರು ತೆಗೆದಂತೆ ಮತ್ತೆ ನೀರು ಹರಿದು ಬರುತ್ತಿದೆ. ಒಂದು ರೊಟ್ಟಿ ಸಹ ಮಾಡಲು ಆಗಿಲ್ಲ. ಸಂಬಂಧಿಕರ ಮನೆಗೆ ಹೋಗಿ ಒಂದು ರೊಟ್ಟಿ ತಿಂದು ಬಂದೇನಿ. ಇಷ್ಟಾದರೂ ಈವರೆಗೂ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಇತ್ತ ಮುಖ ಮಾಡಿಲ್ಲ ಎಂದು ಗ್ರಾಮದ ರುಕ್ಮವ್ವ ಹಾಗನೂರ ನೋವು ಹೊರಹಾಕುತ್ತಾರೆ.

    ಒಲೆ ಉರಿದಿಲ್ಲ, ಯಾರು ಬಂದಿಲ್ಲ
    ಮನೆಯಲ್ಲಿ ಎರಡ್ಮೂರು ಅಡಿ ನೀರು ಬರುತ್ತಿದ್ದು, ಅಡುಗೆಯಾದರೂ ಹೇಗೆ ಮಾಡೋದು? ಒಲೆಯಲ್ಲಿ ಬೆಂಕಿ ಹತ್ತಿಲ್ಲ. ಇವತ್ತು ಉಪವಾಸ ಅನುಭವಿಸಿದ್ದೇವೆ. ಇನ್ನು ಹಳೇ ಮನೆ ಇದ್ದು, ಇಷ್ಟೊಂದು ನೀರು ನಿಂತರೆ ಗೋಡೆಗಳು ನೆನೆದು ಯಾವುದೇ ಸಂದರ್ಭದಲ್ಲಿ ಬೀಳಬಹುದು ಎನ್ನುವ ಆತಂಕವನ್ನು ವ್ಯಕ್ತಪಡಿಸುತ್ತಾರೆ ಹುಲಿಗೆವ್ವ ಬೆಟಗೇರಿ.

    ನನ್ನ ಮನೆ ಗೋಡೆ ನೋಡ ನೋಡುತ್ತಿದ್ದಂತೆ ನೆಲಕ್ಕುರಳಿತು. ಪುಣ್ಯಕ್ಕೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಗ್ರಾಮದಲ್ಲಿ ಅನಾಹುತ ಉಂಟಾಗುವ ಮೊದಲು ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಗಮನಿಸಿಯಾದರೂ ನೀರಿನ ಸೆಲೆ ಕಂಡು ಬರುವ ಮನೆಗಳ ಜನರಿಗೆ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ಜನರು ಉಪವಾಸ, ವನವಾಸ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಶ್ರೀಶೈಲ ಅಂಗಡಿ.

    ಮನ್ಯಾಗ ನಾಲ್ಕು ಮೊಮ್ಮಕ್ಕಳು ಅದಾವು. ಕೂಳು ಮಾಡಾಕೂ ಆಗಿಲ್ಲ. ಹುಡುಗ್ರು ಉಪವಾಸ ಬಿದ್ದಾವು. ಇರಾಕ್ ಜಾಗ ಇಲ್ದಂಗ ಆಗೇತಿ. ಏನ್ಮಾಡ್ಬೇಕು? ನಮ್ ಸ್ಥಿತಿ ಯಾರಾದ್ರೂ ಬಂದು ನೋಡ್ಲಿ. ನಾವಿಲ್ಲಿ ಹೆಂಗ್ ಅದೇವಿ ಅಂತ ಗೊತ್ತಾಗುತ್ತ.
    -ಬರಮಪ್ಪ ಕಡ್ಡಿ, ಕಲಬಂದಕೇರಿ ಗ್ರಾಮಸ್ಥ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts