More

    ರೈತರು, ಎಪಿಎಂಸಿ ಹಿತಕ್ಕಾಗಿ ಹಳೇ ಕಾಯ್ದೆ ಇರಲಿ

    ಬಾಗಲಕೋಟೆ: ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಸುಗ್ರೀವಾಜ್ಞೆಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ.

    ರೈತರು ಮತ್ತು ಎಪಿಎಂಸಿ ಹಿತದೃಷ್ಟಿಯಿಂದ ಹಾಲಿ ಇರುವ ಪದ್ಧತಿಯನ್ನು ಮುಂದುವರಿಸಬೇಕು. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಾಗುವ ಅನನುಕೂಲಗಳ ಬಗ್ಗೆ ಹೇಳುವುದಾಗಿ ಸ್ಪಷ್ಟಪಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ವೀರಣ್ಣ ಚರಂತಿಮಠ, ಈಗ ಇರುವ ಕಾಯ್ದೆಯಿಂದ ರೈತರಿಗೆ ಮೋಸ ಹೇಗಾಗುತ್ತೆ? ಈ ಬಗ್ಗೆ ನನಗಂತೂ ತಿಳಿದಿಲ್ಲ ಎಂದರು.

    ಸದ್ಯ ಎಪಿಎಂಸಿಯಲ್ಲಿ ಇ-ಟೆಂಡರ್ ಪದ್ಧತಿ ಜಾರಿಯಲ್ಲಿದೆ. ಹಿಂದಿನ ಕಾಲದಂತೆ ತೂಕದ ಕಲ್ಲುಗಳು ಇಲ್ಲ. ಬದಲಿಗೆ ಇಲೆಕ್ಟ್ರಾನಿಕ್ ತಕ್ಕಡಿಯಲ್ಲಿ ತೂಕ ಮಾಡಲಾಗುತ್ತಿದೆ. ರೈತರು ಮುಂದೆ ನಿಂತು ತೂಕ ಮಾಡಿಸುತ್ತಾರೆ. ಟೆಂಡರ್ ಆದ ದಿನವೇ ರೈತರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ವ್ಯಾಪಾರಸ್ಥರು ಹಣ ಜಮಾ ಮಾಡುತ್ತಾರೆ ಎಂದರು.

    ಎಪಿಎಂಸಿಯಲ್ಲಿ ರೈತರು ಬೆಳೆದ ಬೆಳೆ ಮಾರಾಟ ಮಾಡುವುದರಿಂದ ದಲಾಲಿ ಅಂಗಡಿಯವರು ರೈತರಿಂದ ಕಮಿಷನ್ ಪಡೆಯಲ್ಲ. ಖರೀದಿದಾರರಿಂದ ಪಡೆಯುತ್ತಾರೆ. ಅಲ್ಲದೆ ಸರ್ಕಾರಕ್ಕೆ ಸೆಸ್ ಕಟ್ಟುತ್ತಾರೆ. ಇದರಿಂದ ರೈತರಿಗೆ ಮೋಸ ಆಗುವ ಪ್ರಶ್ನೆಯೇ ಇರುವುದಿಲ್ಲ ಎಂದು ಹೇಳಿದರು.

    ಎಪಿಎಂಸಿ ತಿದ್ದುಪಡಿ ಕಾಯ್ದೆ-2020ಗೆ ಸುಗ್ರೀವಾಜ್ಞೆ ಆಗಿದ್ದರೂ ಮಸೂದೆ ಬಗ್ಗೆ ಚರ್ಚೆ ನಡೆದಾಗ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಈಗ ಇರುವ ಪದ್ಧತಿಯನ್ನು ಮುಂದುವರಿಸಲು ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

    ಸರ್ಕಾರ ರಚನೆ ವೇಳೆ ಓಟು ಹಾಕುವಾಗ ವಿಪ್ ಜಾರಿ ಮಾಡಲಾಗುತ್ತದೆ. ಆಗ ಸರ್ಕಾರದ ಪರ ನಾನು ಓಟು ಹಾಕಬೇಕು. ಇದು ಬೇರೆ ವಿಷಯ. ಪಕ್ಷದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಎಲ್ಲವನ್ನು ಒಪ್ಪಬೇಕೆಂದಿಲ್ಲ. ನಾವು ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರೃ ಇದೆಯಲ್ಲ ಎಂದು ಶಾಸಕರು ತಿಳಿಸಿದರು.

    ಎಪಿಎಂಸಿ ತಿದ್ದುಪಡಿ ಕಾಯ್ದೆಯ ಸಾಧಕ, ಬಾಧಕದ ಬಗ್ಗೆ ನಾನು ಈಗಾಗಲೇ ಫೋನ್ ಮಾಡಿ ಸಚಿವ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಈಶ್ವರಪ್ಪ ಜತೆ ಮಾತನಾಡಿದ್ದೇನೆ ಎಂದರು.

    ಹೊಸ ಕಾಯ್ದೆಯಿಂದ ಏನಾಗುತ್ತದೆ ಅಂದರೆ, ಈಗಾಗಲೇ ಅನೇಕರು ಹಳ್ಳಿಗಳಿಗೆ ಹೋಗಿ ದಾಸ್ತಾನು ಖರೀದಿ ಮಾಡುತ್ತಾರೆ. ರೈತರು ಮುಗ್ಧರು, ಹೆಚ್ಚಿನ ಬೆಲೆ ಕೊಡುತ್ತೇವೆ ಎಂದಾಗ ದಾಸ್ತಾನು ಕೊಡುತ್ತಾರೆ. ಒಂದು ಎರಡು ಸಲ ಬೆಲೆ ಕೊಟ್ಟು ಮೂರನೇ ಸಲ ದುಡ್ಡು ಕೊಡದೆ ಪರಾರಿ ಆಗಿರುವ ಅನೇಕ ಉದಾಹರಣೆಗಳು ಇವೆ. ಆದರೆ, ಎಪಿಎಂಸಿಯಲ್ಲಿ ಈ ರೀತಿ ಮೋಸ ಮಾಡಲು ಆಗಲ್ಲ. ರೈತರಿಗೆ ಪಟ್ಟಿ ಕೊಡುತ್ತಾರೆ. ಸರ್ಕಾರಕ್ಕೆ ಭರಿಸಬೇಕಾದ ಜಿಎಸ್‌ಟಿ ವಂಚಿಸಲು ಬರಲ್ಲ ಎಂದರು.

    ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ವಿಸ್ತೃತವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇವೆ. ಒಟ್ಟಾರೆ ರೈತರು ಮತ್ತು ಎಪಿಎಂಸಿ ಹಿತದೃಷ್ಟಿಯಿಂದ ಹಾಲಿ ಜಾರಿಯಲ್ಲಿ ಇರುವ ಕಾಯ್ದೆ ಮುಂದುವರಿಯಬೇಕು ಎಂದರು.

    ಈ ಹಿಂದೆ ಈ ಕಾಯ್ದೆಯನ್ನು ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಮಾಡಿದ್ದರು. ಡಬ್ಲುೃಟಿಎ ಒಪ್ಪಂದಕ್ಕೆ ಸಹಿ ಮಾಡಿದ್ದರು. ನಾವೆಲ್ಲ ಆಗ ಎಪಿಎಂಸಿ ಬಂದ್ ಮಾಡಿ ಹೋರಾಟ ಮಾಡಿದ್ದರು. ಅವರು ವಾಪಸ್ ತೆಗೆದುಕೊಂಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಪಡ್ನವೀಸ್ ಅವರು ಅಸೆಂಬ್ಲಿಯಲ್ಲಿ ಈ ಕಾಯ್ದೆ ಪಾಸು ಮಾಡಿದ್ದರು. ಮುಂದೆ ಕೌನ್ಸಿಲ್ನಲ್ಲಿ ಹಿಂಪಡೆದರು. ಅಲ್ಲಿ ಈ ಕಾಯ್ದೆ ಅನುಷ್ಠಾನಕ್ಕೆ ಬರಲಿಲ್ಲ. ನಾವು ಸಹ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈಗ ಇರುವ ವ್ಯವಸ್ಥೆಯನ್ನು ಮುಂದುವರಿಸಲು ಒತ್ತಾಯ ಮಾಡುತ್ತೇವೆ ಎಂದು ಚರಂತಿಮಠ ಹೇಳಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts