More

    1.22 ಕೋಟಿ ರೂ. ಪರಿಹಾರಧನ ವಿತರಣೆ

    ಬಾಗಲಕೋಟೆ: ದೌರ್ಜನ್ಯ ಪ್ರಕರಣದಡಿ ಪ್ರಸಕ್ತ ಸಾಲಿನಲ್ಲಿ ನವೆಂಬರ ಅಂತ್ಯದವರೆಗೆ 37 ಪ್ರಕರಣಗಳಿಗೆ ಒಟ್ಟು 1.22 ಕೋಟಿ ರೂ.ಗಳಷ್ಟು ಪರಿಹಾರಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿಗೆ 1.25 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಹಿಂದಿನ ಶುಲ್ಕ 10.68 ಲಕ್ಷ ರೂ. ಸೇರಿ ಒಟ್ಟು 1.35 ಕೋಟಿ ರೂ.ಗಳಲ್ಲಿ 1.22 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸ್ವೀಕೃತವಾದ 47 ಪ್ರಕರಣದಡಿ 37 ಪ್ರಕರಣಗಳಿಗೆ ಪರಿಹಾರಧನ ವಿತರಿಸಿಸಲಾಗಿದೆ ಎಂದರು.

    ಪ್ರಸಕ್ತ ವರ್ಷದಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಜರುಗಿಸಿರುವ ಬಗ್ಗೆ ಮಾಹಿತಿ ಪಡೆದರು. ಪರಿಹಾರಧನ ವಿತರಣೆಗೆ ಅನುದಾನ ಕೊರತೆ ಇದ್ದಲ್ಲಿ ಅನುದಾನ ತರಿಸಿಕೊಳ್ಳಲು ಕ್ರಮವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಅವರಿಗೆ ಸೂಚಿಸಿದರು.

    ನಗರಾಭಿವೃದ್ಧ್ದಿ ಕೋಶದ ಯೋಜನಾ ನಿರ್ದೇಶಕ ಮಾಯನ ಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಪುರಸಭೆ, ನಗರಸಭೆಗಳಲ್ಲಿ ಮೀಸಲಿರಿಸಲಾದ ಎಸ್‌ಎ್ಸಿ ಅನುದಾನ ಬಳಕೆಯಾಗಿದೆ. ನವೆಂಬರ ಅಂತ್ಯಕ್ಕೆ ಎಸ್‌ಸಿ ಅನುದಾನದಲ್ಲಿ ಶೇ.90.38, ಎಸ್‌ಟಿ ಅನುದಾನದಲ್ಲಿ ಶೇ.90.26 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

    ಈ ವೇಳೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಪರಿಶಿಷ್ಟ ಜಾತಿಯ ಎಸ್.ಎ್.ಸಿ ಅನುದಾನ ಹಾಗೂ ಶೇ.24.10 ಅನುದಾನಕ್ಕೆ ಸಂಬಂಧಿಸಿದ ಗುಳೇದಗುಡ್ಡ ಪುರಸಭೆ ಮತ್ತು ರಬಕವಿ ನಗರಸಭೆ ಯಾವುದೇ ಹಣ ಖರ್ಚು ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು. ಅಲ್ಲದೆ ಅಂಬೇಡ್ಕರ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾದ ಬೋರವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಉಳಿದಿದೆ. ಕೂಡಲೇ ಕ್ರಮ ವಹಿಸಬೇಕು ಎಂದು ತಿಳಿಸಿದರು.

    ದೌರ್ಜನ್ಯ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರಾಮಗಳಲ್ಲಿ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಸಮಿತಿಯ ನಾಮನಿರ್ದೇಶಿತ ಸದಸ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.

    ಇನ್ನು ಮೊರಾರ್ಜಿ ವಸತಿ ಶಾಲೆಗಳಲ್ಲಿ ಒಟ್ಟು 148 ದೇವದಾಸಿ ಮಕ್ಕಳಿಗೆ ಪ್ರವೇಶಾತಿ ನೀಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಡಾ.ಎಂ.ಎಚ್.ಚಲವಾದಿ, ಬಸವಂತ ಮೇತ್ರಿ, ಶಶಿಧರ ಮೀಸಿ, ಸತ್ಯಪ್ಪ ಮಾದರ, ಶಿವು ಮಣ್ಣೂರ, ಮಾರುತಿ ರಂಗಣ್ಣವರ, ಪರಶುರಾಮ ಬಸವ್ವಗೋಳ, ಕುಮಾರಸ್ವಾಮಿ ಹಿರೇಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯನ ಗೌಡ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿವಾಹಕ ಅಭಿಯಂತರ ಕುಂಬಾರ, ಸರ್ಕಾರಿ ಅಭಿಯೋಜಕ ಎಸ್.ಎಂ.ಹಂಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts