More

    ಕ್ಲಾಸ್‌ಮೇಟ್ ಕೈಹಿಡಿಯಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಗುರುಸಾಯಿದತ್

    ಹೈದರಾಬಾದ್: ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಗುರುಸಾಯಿದತ್ ಶಾಲಾ ದಿನಗಳ ಗೆಳತಿ ಅಮೂಲ್ಯ ಗುಲಪಲ್ಲಿ ಅವರೊಂದಿಗೆ ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.

    ಹೈದರಾಬಾದ್‌ನಲ್ಲಿ ಈಗ ಆರ್ಕಿಟೆಕ್ಟ್ ಆಗಿರುವ ಅಮೂಲ್ಯ ಜತೆಗಿನ ಗೆಳತನ ಮತ್ತು ಪ್ರೀತಿಯ ಬಗ್ಗೆ ವಿವರಿಸಿರುವ 30 ವರ್ಷದ ಗುರುಸಾಯಿದತ್, ‘ಶಾಲಾ ದಿನಗಳಲ್ಲಿ ನಾವಿಬ್ಬರು ಕ್ಲಾಸ್‌ಮೇಟ್ಸ್ ಆಗಿದ್ದೆವು. ಆದರೆ ಬಳಿಕ ಇಬ್ಬರೂ ಸಂಪರ್ಕದಲ್ಲಿರಲಿಲ್ಲ. 2019ರ ಡಿಸೆಂಬರ್‌ನಲ್ಲಿ ನಮ್ಮ ಶಾಲೆಯವರೆಲ್ಲರೂ ಮರಳಿ ಒಗ್ಗೂಡಿದಾಗ ಅಮೂಲ್ಯಳನ್ನು ಮತ್ತೆ ಭೇಟಿಯಾಗಿದ್ದೆ. ನಂತರ ಸಂಪರ್ಕ ಮುಂದುವರಿಸುತ್ತ ಬಂದೆವು. ಕೆಲ ತಿಂಗಳಲ್ಲೇ ಹತ್ತಿರವಾದೆವು. ಬಳಿಕ ನಮ್ಮಿಬ್ಬರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆವು. ಮದುವೆಯಾಗುವೆಯಾ ಎಂದು ನಾನು ಕೇಳಿದಾಗ ಆಕೆ ಎಸ್ ಎಂದಳು. ಬಳಿಕ ನಮ್ಮಿಬ್ಬರ ಕುಟುಂಬದವರು ಪರಸ್ಪರ ಚರ್ಚಿಸಿ ಮೊದಲಿಗೆ ನಿಶ್ಚಿತಾರ್ಥ ಸಮಾರಂಭ ನೆರವೇರಿಸಿದ್ದರು’ ಎಂದು ಹೇಳಿದ್ದಾರೆ.

    2008ರ ಕಾಮನ್ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಬ್ಯಾಡ್ಮಿಂಟನ್ ಜಗತ್ತಿನ ಗಮನಸೆಳೆದಿದ್ದ ಗುರುಸಾಯಿದತ್ ಅವರ ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಲಾಕ್‌ಡೌನ್ ಘೋಷಣೆಯಾಗಿತ್ತು. ಇದರಿಂದಾಗಿ ಅಮೂಲ್ಯಳನ್ನು ಹಲವು ಸಮಯ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ವಿಡಿಯೋ ಕಾಲ್ ಮೂಲಕವಷ್ಟೇ ಸಂಪರ್ಕದಲ್ಲಿದ್ದೆವು. ಆದರೆ ಈ ವೇಳೆ ಸಿಕ್ಕ ಬಿಡುವಿನಿಂದ ಮತ್ತಷ್ಟು ಹತ್ತಿರವಾದೆವು. ಪರಸ್ಪರರನ್ನು ಇನ್ನಷ್ಟು ಅರಿತುಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

    ಕಳೆದ ಆಗಸ್ಟ್‌ನಲ್ಲೇ ವಿವಾಹವಾಗುವ ಯೋಜನೆ ಇದ್ದರೂ, ಗುರುಸಾಯಿದತ್ ಅವರ ಅಕ್ಕ ಆಸ್ಟ್ರೇಲಿಯಾದಲ್ಲಿದ್ದರು. ಹೀಗಾಗಿ ಅವರೂ ಮದುವೆಗೆ ಬರುವವರೆಗೆ ಕಾಯಬೇಕಾಯಿತು. ಇದೀಗ ಅವರು ಭಾರತಕ್ಕೆ ಮರಳಿದ್ದು, ವಿವಾಹವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ವಿವಾಹಕ್ಕಾಗಿ ಹೈದರಾಬಾದ್ ಹೊರವಲಯದ ರೆಸಾರ್ಟ್‌ನಲ್ಲಿ ಬಯೋ-ಬಬಲ್ ವಾತಾವರಣ ನಿರ್ಮಿಸಲಾಗಿದೆ. ಈ ಮೂಲಕ ಕುಟುಂಬದ ಎಲ್ಲ ಹಿರಿಯ-ಕಿರಿಯ ಸದಸ್ಯರೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ಆಪ್ತರ ಜತೆಗೆ ಬ್ಯಾಡ್ಮಿಂಟನ್ ವಲಯದ ಎಲ್ಲ ಸಹ-ಷಟ್ಲರ್‌ಗಳು ಕೂಡ ಗುರುಸಾಯಿದತ್ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿ. ಕಶ್ಯಪ್ ದಂಪತಿ ಗುರುಸಾಯಿದತ್‌ಗೆ ಅತ್ಯಂತ ಆಪ್ತರಾಗಿದ್ದು, ವಿವಾಹದ ಪೂರ್ವಭಾವಿ ಸಮಾರಂಭಗಳಲ್ಲೂ ಹುರುಪಿನಿಂದ ಪಾಲ್ಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts