More

    2.5 ಲಕ್ಷ ಬ್ಯಾಕ್‌ಲಾಗ್ ಹುದ್ದೆ ಶೀಘ್ರ ಭರ್ತಿ

    ಕೆ.ಆರ್.ನಗರ: ಭರ್ತಿಯಾಗದೆ ಖಾಲಿ ಉಳಿದಿರುವ 2.5 ಲಕ್ಷ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸರ್ಕಾರ ಮುಂದಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

    ಪಟ್ಟಣದ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ ತಾಲೂಕು ಆಡಳಿತ, ಪುರಸಭೆ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ನಾಯಕರ ಸಂಘದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವ ಜತೆಗೆ ಸಮುದಾಯದಲ್ಲಿರುವ ನಾಯಕ, ಪರಿವಾರ ಎರಡು ಒಂದೇ ಎಂಬುದನ್ನು ಸರ್ಕಾರ ತೀರ್ಮಾನಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

    ಮಹಾಕಾವ್ಯ ರಾಮಾಯಣವನ್ನು ಬರೆದ ವಾಲ್ಮೀಕಿ ಅವರ ಸಾಧನೆ ನಮ್ಮ ಸಮುದಾಯದ ಹೆಮ್ಮೆಯಾಗಿದ್ದು, ನಾವು ಅದನ್ನು ಜನರಿಗೆ ತಿಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಜಾರಿಗೆ ತಂದು ರಜೆ ಘೋಷಣೆ, ಗುತ್ತಿಗೆಯಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಮೀಸಲು ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮಗಳನ್ನು ಸ್ಥಾಪಿಸಿದೆ, ಇದರ ಅನುಕೂಲ ಪಡೆದು ಜನಾಂಗದವರು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು.

    ಸಾಲಿಗ್ರಾಮ ತಾಲೂಕಿನಲ್ಲಿ ಸಮುದಾಯ ಭವನಕ್ಕೆ ಜಾಗ ನೀಡಿ, ಅನುದಾನ ನೀಡಿ ಭವನ ನಿರ್ಮಿಸಿಕೊಡಲಾಗುವುದು, ಪಟ್ಟಣದಲ್ಲಿ ಸೂಕ್ತ ಜಾಗದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗುವುದು ಎಂದ ಶಾಸಕರು, ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಶೀಘ್ರ 5 ಲಕ್ಷ ರೂ.ವೆಚ್ಚದಲ್ಲಿ ಗಣಪತಿ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

    ಡಾ.ಜೆ.ಹನುಮಂತಪ್ಪ ಮಾತನಾಡಿದರು. 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮಕ್ಕೂ ಮೊದಲು ಜೂನಿಯರ್ ಕಾಲೇಜು ಮೈದಾನದಿಂದ ಸ್ತಬ್ಧಚಿತ್ರಗಳೊಂದಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಹರೀಶ್, ಟಿಎಸ್‌ಡಬ್ಲುೃ ಎಸ್.ಎಂ.ಅಶೋಕ್‌ಕುಮಾರ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಶಿವುನಾಯಕ್, ನಟರಾಜ್, ಶಂಕರ್, ಮಾಜಿ ಸದಸ್ಯ ವಿನಯ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮಾದನಾಯಕ, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ತಿಪ್ಪೂರು ಮಹದೇವನಾಯಕ, ಬಿಇಒ ಆರ್.ಕೃಷ್ಣಪ್ಪ, ಶಿಕ್ಷಣ ಸಂಯೋಜಕ ದಾಸಪ್ಪ, ನಾಯಕ ನೌಕರರ ಸಂಘದ ಅಧ್ಯಕ್ಷರಾದ ಸಿದ್ದೇಶ್ವರ ಪ್ರಸಾದ್, ರೋಹಿತ್, ತಾಲೂಕು ಕುರುಬರ ಸಂಘದ ನಿರ್ದೇಶಕ ಅಪ್ಪಾಜೀಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts