More

    ಲೋಕಸಭೆ ಚುನಾವಣೆ ಹಿನ್ನೆಲೆ, ನೀತಿ ಸಂಹಿತೆ ಜಾರಿ

    ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಮಾರ್ಚ್ 28ರಿಂದ ಉಮೇದುವಾರಿಕೆ ಸಲ್ಲಿಕೆ ಆರಂಭಗೊಳ್ಳಲಿದೆ. ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
    ನಾಮಪತ್ರಗಳ ಪರಿಶೀಲನೆ ಏಪ್ರಿಲ್ 5ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಏಪ್ರಿಲ್ 8 ಕೊನೇ ದಿನ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಜೂನ್ 6ಕ್ಕೆ ನೀತಿ ಸಂಹಿತೆ ಅಂತ್ಯಗೊಳ್ಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳು ಸೇರಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ಹಾಗೂ ವರುಣ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರಲಿದೆ ಎಂದು ವಿವರಿಸಿದರು.
    ತಹಸೀಲ್ದಾರ್‌ಗಳಿಗೆ ಹೊಣೆ:
    ಚುನಾವಣೆಯಲ್ಲಿ ಯಾವುದೇ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ನಡೆಯಬಾರದು ಎನ್ನುವ ಉದ್ದೇಶದಿಂದ ಮೈಸೂರು ಜಿಲ್ಲಾ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳಿಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಎಲ್ಲ ತಹಸೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

    2202 ಮತಗಟ್ಟೆ ಸ್ಥಾಪನೆ:
    ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಿಂದ ಒಟ್ಟು 2202 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಜತೆಗೆ ಸಖಿ ಬೂತ್, ಯುವ ಮತದಾರರ ಮತಗಟ್ಟೆ, ಅಂಗವಿಕಲರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಆಶಯಾಧಾರಿತ ಮತಗಟ್ಟೆಯನ್ನೂ ತೆರೆಯಲಾಗುವುದು. ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ಮತಗಟ್ಟೆಗಳಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ಅನುಕೂಲವಾಗುವ ದೃಷ್ಟಿಯಿಂದ ರ‌್ಯಾಂಪ್, ವ್ಹೀಲ್‌ಚೇರ್, ಬೂತಗನ್ನಡಿ ವ್ಯವಸ್ಥೆ ಜತೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ, ಶೌಚಗೃಹ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
    4,434 ವಿವಿ ಪ್ಯಾಟ್: ಜಿಲ್ಲೆಯಲ್ಲಿ ಮತದಾನಕ್ಕೆ ಬೇಕಾದ 4,433 ವಿವಿ ಪ್ಯಾಟ್, 4,146 ಸಿಯು ಹಾಗೂ 5870 ಬಿಯು ಯಂತ್ರಗಳಿವೆ. ಹಾಗೆಯೇ ಪ್ರತಿ ಮತಗಟ್ಟೆಗಳಿಗೂ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, 17,550 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ಅಧಿಕಾರಿಗಳ ತಂಡ ರಚಿಸಲಾಗಿದ್ದು, 241 ಸೆಕ್ಟರ್ ಅಧಿಕಾರಿಗಳು, 50 ಫ್ಲೈಯಿಂಗ್ ಸ್ಕ್ವಾಡ್, 42 ಸ್ಟಾಟಿಕ್ ಸರ್ವಲೆನ್ಸ್, 23 ವಿಡಿಯೋ ಸರ್ವಲೆನ್ಸ್, 12 ವಿಡಿಯೋ ವೀವಿಂಗ್ ತಂಡ, 11 ಅಕೌಂಟಿಂಗ್ ತಂಡ, 15 ಅಸಿಸ್ಟೆಂಟ್ ಎಕ್ಸ್‌ಪೆಂಡೀಚರ್ ಅಬ್ಸರ್ವರ್‌ಗಳನ್ನು ನೇಮಿಸಿದ್ದು, ಇವರು ನಿತ್ಯ 3 ಪಾಳಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಹೊಸ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧೆ ಬಯಸುವ ಅಭ್ಯರ್ಥಿಗಳು ಸಿದ್ದಾರ್ಥಬಡಾವಣೆಯಲ್ಲಿ ಇರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.

    20,72, 337 ಮತದಾರರು:

    2024ರ ಸಾರ್ವತ್ರಿಕ ಚುನಾವಣೆಗೆ ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ 10,17,120 ಪುರುಷ ಮತದಾರರು ಹಾಗೂ 10,55,035 ಮಹಿಳಾ ಮತದಾರರು, 182 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 20,72,337 ಮತದಾರರಿದ್ದಾರೆ. ಈ ಪೈಕಿ 41,145 ಹೊಸ ಮತದಾರರಿದ್ದಾರೆ. ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರ, 21,369 ಪುರುಷ ಹಾಗೂ 19,775 ಮಹಿಳಾ ಮತದಾರರು ಇದೇ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts