More

    ಮಗು ಅಪಹರಿಸಿದ ನರ್ಸ್ ವೇಷಧಾರಿ; ಜಿಲ್ಲಾಸ್ಪತ್ರೆಯಲ್ಲಿ ಭದ್ರತಾ ಲೋಪ

    ಹಾವೇರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ್ದ ಒಂದು ದಿನದ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ನರ್ಸ್ ವೇಷಧಾರಿ ಮಹಿಳೆಯೊಬ್ಬಳು ವೃದ್ಧೆಯೊಬ್ಬರಿಂದ ಮಗುವನ್ನು ಪಡೆದು ಯಾಮಾರಿಸಿ, ಅಪಹರಿಸಿದ ಪ್ರಕರಣ ವರದಿಯಾಗಿದೆ. ಈ ಘಟನೆಯಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿದೆ. ಬ್ಯಾಡಗಿ ತಾಲೂಕಿನ ಮತ್ತೂರ ಗ್ರಾಮದ ಗದಿಗೆಪ್ಪ ಕುಂಬಾರ ಎಂಬುವರ ಪುತ್ರಿಗೆ ಮಾ.3ರಂದು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತ್ತು. ಮಾ.11ರಂದು ಸಂಜೆ 6.30ರ ಸುಮಾರಿಗೆ ಗದಿಗೆಪ್ಪ ಅವರ ಪತ್ನಿ ರೇಣುಕಾ ಮಗು ಎತ್ತಿಕೊಂಡು ಕುಳಿತಿದ್ದರು. ಈ ವೇಳೆ ಅಪರಿಚಿತೆಯೊಬ್ಬಳು ನರ್ಸ್ ವೇಷ ಧರಿಸಿ ವಾರ್ಡ್‌ಗೆ ಬಂದಿದ್ದಳು. ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಅಜ್ಜಿಗೆ ಹೇಳಿ, ಅಜ್ಜಿ ಜತೆ ಮಗು ಕರೆದುಕೊಂಡು ಬಸ್ ನಿಲ್ದಾಣದ ಬಳಿ ಖಾಸಗಿ ಆಸ್ಪತ್ರೆಯೊಂದರ ಬಳಿ ಹೊರಟಿದ್ದಳು. ಈ ವೇಳೆ ಅಜ್ಜಿಯ ಕೈಯಿಂದ ಮಗುವನ್ನು ಪಡೆದು, ನೀನು ಹಣ್ಣು ತೆಗೆದುಕೊಂಡು ಬಾ ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ದಳು. ಅಜ್ಜಿ ಹಣ್ಣು ತರುವಷ್ಟರಲ್ಲಿ ಮಗು ಜತೆ ಮಹಿಳೆ ಪರಾರಿಯಾಗಿದ್ದಳು. ಇದರಿಂದ ಗಲಿಬಿಲಿಗೊಂಡ ಅಜ್ಜಿ ತನ್ನ ಕುಟುಂಬದವರಿಗೆ ವಿಷಯ ತಿಳಿಸಿ, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಾವೇರಿ ಮಹಿಳಾ ಠಾಣೆ ಸಿಪಿಐ ಹರೀಶ ಪಟೇಲ, ಪಿಎಸ್‌ಐ ಪುಷ್ಪಾವತಿ ಹಾಗೂ ಸಿಬ್ಬಂದಿ, ಜಿಲ್ಲಾಸ್ಪತ್ರೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು. ಅಲ್ಲಿ ಸಿಕ್ಕ ವಿಡಿಯೋ ದೃಶ್ಯಗಳನ್ನು ಪಡೆದು ಆರೋಪಿಯ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.
    ಶಹರ ಠಾಣೆಗೆ ಮಗು ಒಪ್ಪಿಸಿದ ಗೀತಾ
    ಪೊಲೀಸರು ಮಗು ಹುಡುಕಾಟದಲ್ಲಿದ್ದಾಗಲೇ ಮಗು ಕದ್ದಿದ್ದ ಆರೋಪಿ ತಾಲೂಕಿನ ನಾಗೇಂದ್ರನಮಟ್ಟಿಯ ಗೀತಾ ಮರುದಿನ ತನ್ನ ತಪ್ಪಿನ ಅರಿವಾಗಿ ಮಾ.12ರಂದು ಬೆಳಗ್ಗೆ ಶಹರ ಪೊಲೀಸ್ ಠಾಣೆಗೆ ಮಗುವನ್ನು ಒಪ್ಪಿಸಿದ್ದಾಳೆ.
    ಮಾ.11ರಂದು ಸಂಜೆ ಮಗು ಮೈಮೇಲೆ ಬೆವರಸಾಲಿ ಆಗಿತ್ತು. ಚಿಕಿತ್ಸೆ ಕೊಡಿಸಲೆಂದು ಮಗುವಿನ ಅಜ್ಜಿ ರೇಣುಕಾ ಓಡಾಡುತ್ತಿದ್ದರೂ ಆಗ ವೈದ್ಯರು ಸಿಕ್ಕಿರಲಿಲ್ಲ. ಇದೇ ವೇಳೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಆರೋಪಿ ಗೀತಾ ನರ್ಸ್ ಏಫ್ರಾನ್ ಧರಿಸಿ ಅಜ್ಜಿಯ ಬಳಿ ಹೋದಳು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಣ ಬಾ ಎಂದು ಅಜ್ಜಿ ಜತೆ ಮಗು ಕರೆದುಕೊಂಡು ಹೋಗಿದ್ದಳು. ಈ ವೇಳೆ ಹಣ್ಣು ತರುವಂತೆ ಅಜ್ಜಿಗೆ ಹೇಳಿ, ಮಗು ಎತ್ತಿಕೊಂಡು ನಾಪತ್ತೆಯಾಗಿದ್ದಳು. ರಾತ್ರಿ ವೇಳೆ ತನ್ನ ತಪ್ಪಿನ ಅರಿವಾಗಿ ಭಾನುವಾರ ಬೆಳಗ್ಗೆ ತಾನೇ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಳು. ಅಲ್ಲಿ ಪೊಲೀಸರನ್ನು ಕಂಡು ಭಯಗೊಂಡು ಕೆಲಹೊತ್ತು ಸುತ್ತಾಡಿದ್ದಾಳೆ. ಕೊನೆಗೂ ಧೈರ್ಯ ಮಾಡಿ ಶಹರ ಠಾಣೆಗೆ ತೆರಳಿ ಮಗು ಒಪ್ಪಿಸಿ, ಶರಣಾಗಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts