More

    ದಾಖಲೆಯಲ್ಲಿ ಹೆಣ್ಣು-ನೀಡಿರುವುದು ಗಂಡು ಮಗು; ಲೇಡಿಗೋಷನ್‌ ಆಸ್ಪತ್ರೆ ವಿರುದ್ಧ ಆರೋಪ

    ಮಂಗಳೂರು: ನಗರದ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಹೆಣ್ಣು ಮಗು ಎಂದು ಹೇಳಿ ದಾಖಲೆ ನೀಡಿ ಬಳಿಕ ಗಂಡು ಮಗು ನೀಡಿದ್ದಾರೆ ಎಂದು ಮಗುವಿನ ತಂದೆ ಕುಂದಾಪುರ ಮೂಲದ ಮುಸ್ತಾಫಾ ಎನ್ನುವವರು ಆರೋಪಿಸಿದ್ದಾರೆ.
    ಅವರ ಪತ್ನಿ ಸೆ.27ರಂದು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಬಿಪಿ ಇದ್ದ ಕಾರಣ ಸಿಸೇರಿಯನ್‌ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಈ ವೇಳೆ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ, ಸುಮಾರು 18 ದಿನ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಗುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅಲ್ಲಿನ ವೈದ್ಯರು ನೀಡಿದ ದಾಖಲೆಯಲ್ಲಿ ಗಂಡು ಮಗು ಎಂದು ದಾಖಲಿಸಿದ್ದಾರೆ. ಮಗುವನ್ನು ನೋಡಿದಾಗ ಗಂಡು ಎಂದು ತಿಳಿದು ಬಂದಿದೆ. ಈ ಕುರಿತು ವಾಪಾಸ್‌ ಲೇಡಿಗೋಷನ್‌ ಆಸ್ಪತ್ರೆಗೆ ಬಂದು ಕೇಳಿದಾಗ ಮಗು ನಿಮ್ಮದೇ, ದಾಖಲೆಯಲ್ಲಿ ತಪ್ಪಾಗಿ ನಮೂದಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿರುವುದಾಗಿ ಮಗುವಿನ ತಂದೆ ಮುಸ್ತಾಫಾ ಮಾಹಿತಿ ನೀಡಿದ್ದಾರೆ. ಈ ಕುರಿತು ಬಂದರು ಠಾಣೆಯಲ್ಲಿ ದೂರು ನೀಡಿದ್ದು, ಡಿಎನ್ಎ ಟೆಸ್ಟ್‌ ಮಾಡಿಸಿ ಖಚಿತ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
    ಘಟನೆ ಕುರಿತು “ವಿಜಯವಾಣಿʼಗೆ ಮಾಹಿತಿ ನೀಡಿರುವ ಲೇಡಿಗೋಷನ್‌ ವೈದ್ಯಾಧಿಕಾರಿ ಡಾ.ದುರ್ಗಾ ಪ್ರಸಾದ್‌, ಮಹಿಳೆ ಗಂಡು ಮಗುವಿನ ಜನ್ಮ ನೀಡಿದ್ದು, ಈ ವೇಳೆ ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಮಕ್ಕಳ ತಜ್ಞೆ ಮಗುವನ್ನು ತಕ್ಷಣ ಎನ್‌ಐಸಿಯುಗೆ ದಾಖಲಿಸಿ, ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಸಹಾಯಕರಿಗೆ ಮಗುವಿನ ದಾಖಲೆ ಬರೆಯಲು ಹೇಳಿದ್ದು, ಈ ವೇಳೆ ಅವರು ಡೆಲಿವರಿ ರಿಜಿಸ್ಟರ್‌ನಲ್ಲಿ ಗಂಡು ಎಂದು ಬರೆಯುವ ಬದಲು ಹೆಣ್ಣು ಎಂದು ನಮೂದಿಸಿದ್ದಾರೆ. ಇದನ್ನು ವೈದ್ಯೆ ಗಮನಿಸದ ಕಾರಣ, ಮುಂದಕ್ಕೆ ಎಲ್ಲ ದಾಖಲೆಗಳಲ್ಲೂ ಹೆಣ್ಣು ಎಂದೇ ನಮೂದಾಗಿದೆ. ಸಿಬ್ಬಂದಿ ಕೆಎಂಸಿ ಆಸ್ಪತ್ರೆಗೆ ಸಂಬಂಧಿಸಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿನ ಮುಖ್ಯಸ್ಥರಿಗೆ ತಿಳಿಸಿದ್ದು, ಸರ್ಕಾರದ ವೈದ್ಯರೂ ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು. ಘಟನೆ ಕುರಿತ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts