

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ ಅವರ ಶವಗಳನ್ನು ಮನೆಯ ಆವರಣದಲ್ಲೇ ಸುಟ್ಟು ಹಾಕಿರುವ ಘಟನೆ ರಾಜಸ್ಥಾನದ ಜೋಧಪುರದ ಓಶಿಯಾನ್ ಎಂಬ ಪ್ರದೇಶದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು 19 ವರ್ಷದ ಯುವಕನನ್ನು ವಶಕ್ಕೆ ಪಡೆದಿದ್ದು, ಹತ್ಯೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೃತ್ಯ ಎಸಗಲಾಗಿದ್ದು, ಹತ್ಯೆಯಾದವರನ್ನು ಪೂಣಾರಾಮ್(55), ಇವರ ಪತ್ನಿ ಭನ್ವಾರಿ(50), ಇವರ ಸೊಸೆ ಧಾಪು ಹಾಗೂ ಆರು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಲಾಗಿದೆ.
ಬಂಧಿತ ಆರೋಪಿ ಹಾಗೂ ಹತ್ಯೆಯಾದವರು ಸಂಬಂಧಿಕರಾಗಿದ್ದು, ಎರಡು ಕುಟುಂಬಗಳ ನಡುವೆ ಹಳೇ ವೈಷಮ್ಯವಿತ್ತು ಎಂದು ಹೇಳಲಾಗಿತ್ತು. ಈ ಸಂಬಂಧ ಆರೋಪಿಯು ಮನೆಯಲ್ಲಿದ್ದವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹಗಳನ್ನು ಮನೆಯ ಆವರಣದಲ್ಲಿರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಸುಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ವಿಪಕ್ಷ ಬಿಜೆಪಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಈ ರೀತಿಯಾದರೆ ಬೇರೆಯವರ ಗತಿಯೇನು. ಜನತೆ ಇದನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕೆ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದೆ.