More

    ಪ್ರಕೃತಿ ವಿಕೋಪ ಸಂತ್ರಸ್ತರಿಗೆ ತಾರತಮ್ಯ ರಹಿತ ಪರಿಹಾರ ಬಿಡುಗಡೆ ಮಾಡುವಂತೆ ಬಿ.ಕೆ. ಹರಿಪ್ರಸಾದ್ ಒತ್ತಾಯ

    ಮಂಗಳೂರು:ಕರಾವಳಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಸಂತ್ರಸ್ತರಾದ ಎಲ್ಲರಿಗೂ ತಾರತಮ್ಯವಿಲ್ಲದೆ ಪರಿಹಾರ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಕಡಲ್ಕೊರೆತ ಸಂಭವಿಸಿದ ಪ್ರದೇಶಗಳಲ್ಲಿ ಮಂಗಳವಾರ ಅವರು ವೀಕ್ಷಣೆ ನಡೆಸುವ ಸಂದರ್ಭ ಪಣಂಬೂರು ಮೀನಕಳಿಯ ಬಳಿ ಸುದ್ದಿಗಾರರ ಜತೆ ಮಾತನಾಡಿದರು.
    ಪಚ್ಚನಾಡಿ, ಗುರುಪುರ ಸಹಿತ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರು ಇರುವ ಐದು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ತಕ್ಷಣ ಒದಗಿಸಬೇಕಾದ ಪರಿಹಾರವೂ ಸಿಕ್ಕಿಲ್ಲ. ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಕಡೆ ಭೇದ ಭಾವ ಮಾಡಲಾಗಿದೆ. ಇದು ಸರಿಯಲ್ಲ. ಈ ವಿಷಯದಲ್ಲಿ ಕೆಲವು ನಾಯಕರು ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

    ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ನಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರು ನೀಡುವ ಪರಿಹಾರದಿಂದ ತೊಂದರೆಗೆ ಒಳಗಾಗಿರುವವರಿಗೆ ಎರಡು ಹೊತ್ತು ಊಟ ಸಿಗಬಹುದು. ಆದರೆ ಮನೆ, ಆಸ್ತಿ- ಪಾಸ್ತಿ ಕಳೆದುಕೊಂಡವರಿಗೆ ಮರಳಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಪರಿಹಾರ ಒದಗಿಸುವುದು ಮುಖ್ಯ. ಮಲ್ಲೂರಿನಲ್ಲಿ ಎರಡು ವರ್ಷ ಹಿಂದೆ ನಡೆದ ಒಂದು ಘಟನೆಯಲ್ಲಿ ಮೃತಪಟ್ಟವರಿಗೆ ಮಾತ್ರ ಇಲ್ಲಿಯ ತನಕ ಪರಿಹಾರ ದೊರೆತ್ತಿದೆ. ಮನೆ ಕಳೆದುಕೊಂಡವರಿಗೆ ಇಲ್ಲಿಯ ತನಕ ಏನೂ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

    ಮಾಜಿ ಶಾಸಕ ಮೊದಿನ್ ಬಾವ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಾಲಿಕೆಯ ಸದಸ್ಯರಾದ ನವೀನ್ ಆರ್.ಡಿಸೋಜ, ಅಬ್ದುಲ್ ರವೂಫ್, ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಮುಖಂಡರಾದ ಸುರೇಶ್ ಪೂಜಾರಿ, ಬಶೀರ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಆನಂದ ಅಮೀನ್, ರಾಜೇಶ್ ಕುಳಾಯಿ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts