More

    ಮೀಸತಿ ಭೀಕ್ಷೆಯಲ್ಲ, ನಮ್ಮ ಹಕ್ಕು

    ಚಿತ್ರದುರ್ಗ: ಮೀಸಲು ಸೌಲಭ್ಯ ಭಿಕ್ಷೆಯಲ್ಲ, ಅಂಬೇಡ್ಕರ್ ಅವರು ಎಲ್ಲ ಜಾತಿ, ಧರ್ಮದವರಿಗೆ ಸಂವಿಧಾನದಡಿ ನೀಡಿರುವ ಹಕ್ಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರತಿಪಾದಿಸಿದರು.
    ನಗರದ ಬಂಜಾರ ಗುರುಪೀಠದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
    ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯದಡಿ ಸಮಾನ ಅವಕಾಶ ಸಿಗಬೇಕೆಂಬ ಆಶಯದೊಂದಿಗೆ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ, ಉದ್ಯೋಗವನ್ನು ಪಡೆಯುವಂತಾಗಬೇಕು ಎಂದರು.
    ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಅಪರೂಪದ ದೇಶ. ಎಲ್ಲ ಜಾತಿ, ಧರ್ಮದವರು ಶಾಂತಿ, ಸೌಹಾರ್ದತೆಯಿಂದ ಬಾಳುತ್ತಿರುವ ದೇಶ ಭಾರತ. ಗುರುಪೀಠಗಳಿಂದ ಮಾತ್ರ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಕಲಿಸಲು ಸಾಧ್ಯ. ಅವಕಾಶ ಸಿಗದೆ ಹಿಂದುಳಿದಿದ್ದೇವೆ ಎನ್ನುವ ಮನೋಭಾವ ಬೇಡ. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಛಲವಿರಲಿ ಎಂದು ಬಂಜಾರ ಸಮುದಾಯಕ್ಕೆ ಸಲಹೆ ನೀಡಿದರು.
    ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಾಂಸ್ಕೃತಿಕ ರಾಯಭಾರಿಯಾಗಿರುವ ಬಂಜಾರ ಸಮುದಾಯ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ ಎಂದರು.
    ಆಧುನಿಕತೆಯ ಈ ಕಾಲದಲ್ಲೂ ಲಂಬಾಣಿ ಸಮುದಾಯ ಪೂರ್ವಜರ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ಸಮಾಜದ ಶಿಕ್ಷಣವಂತರು, ಉನ್ನತ ಹುದ್ದೆಗಳಲ್ಲಿ ಇರುವವರು ಸಮುದಾಯದ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ತಿಳಿಸಿದ ಅವರು, ಸಮಾಜದ ಸಮಸ್ಯೆಗಳ ಕುರಿತಂತೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
    ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹೀರಾನಾಯ್ಕ ಅಧ್ಯಕ್ಷತೆ ವಹಿಸಿದ್ದರು.
    ಭಾರತೀಯ ದಸಂಸ ಅಧ್ಯಕ್ಷ ಬೀರಾವರ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಮುಖಂಡರಾದ ಕುಮಾರನಾಯ್ಕ, ಕೆ.ಜಿ.ಪುರುಷೋತ್ತಮನಾಯ್ಕ, ಕೃಷ್ಣನಾಯ್ಕ, ಚಂದ್ರಶೇಖರನಾಯ್ಕ, ಸುಧೀರ್ ಲಮಾಣಿ, ಶೇಖರಪ್ಪ ರಾಠೋಡ್, ಮಹೇಶ್‌ನಾಯ್ಕ, ಕೆ.ಒ.ನಾಯ್ಕ, ನಾಗನಾಯ್ಕ, ಕವಿತಾಬಾಯಿ, ಮಾಲಾಬಾಯಿ, ಶಿಲ್ಪಾಬಾಯಿ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಸತೀಶ್‌ನಾಯ್ಕ ಮತ್ತಿತರರು ಇದ್ದರು.

    *ಕೋಟ್
    ಮುರುಘಾ ಶರಣರು ಸಾಮಾಜಿಕವಾಗಿ ಅನ್ಯಾಯಕ್ಕೆ ಒಳಗಾದ ಸಮುದಾಯದವರಿಗೆ ಧಾರ್ಮಿಕ ಸ್ಥಾನಮಾನ ಕೊಟ್ಟಿದ್ದಾರೆ. ಲಂಬಾಣಿ ಸಮಾಜಕ್ಕೆ ವಿಶಿಷ್ಟವಾದ ಸಂಸ್ಕೃತಿ, ಭಾಷೆ ಇದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸರ್ವರಿಗೂ ಸಮಾನತೆ ಅವಕಾಶವನ್ನು ಕಲ್ಪಿಸಿದ್ದಾರೆ.
    ಶ್ರೀ ಬಸವಪ್ರಭು ಸ್ವಾಮೀಜಿ, ಮುರುಘಾಮಠದ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts