More

    ಆಯುಷ್ ವೈದ್ಯರಿಗಿಲ್ಲ ಗೌರವಯುತ ಸಂಬಳ ; 17 ವರ್ಷಗಳಿಂದ ಪಿಎಚ್​ಸಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು

    | ಜಗನ್ನಾಥ್ ಕಾಳೇನಹಳ್ಳಿ ತುಮಕೂರು

    ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ಗೌರವಯುತ ವೇತನ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ವೈದ್ಯರನ್ನು ಇನ್ನೂ ಕಾಯಂಗೊಳಿಸಿಲ್ಲ.

    ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ 2005 ರಿಂದ 2008ರವರೆಗೆ ಗುತ್ತಿಗೆ ಆಧಾರದಲ್ಲಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಗೊಂಡಿರುವ ಆಯುಷ್ ವೈದ್ಯರನ್ನು ಈವರೆಗೆ ಕಾಯಂಗೊಳಿಸಿಲ್ಲ. ಆರಂಭದಲ್ಲಿ ಕೇವಲ 6 ಸಾವಿರ ರೂ., ವೇತನ ನೀಡಲಾಗಿತ್ತು. ಈಗ 19,400 ರೂ. ವೇತನ ಪಡೆಯುತ್ತಿರುವ ವೈದ್ಯರು ಉತ್ತಮ ಜೀವನ ನಿರ್ವಹಣೆ ಮಾಡಲಾಗದೆ ಪರದಾಡುವಂತಾಗಿದೆ.

    650 ಆಯುಷ್ ವೈದ್ಯರು: ರಾಜ್ಯಾದ್ಯಂತ 650 ಆಯುಷ್ ವೈದ್ಯರು (ಆಯುರ್ವೆದ, ಯುನಾನಿ, ಹೋಮಿಯೋಪಥಿ, ಯೋಗ ಸಿದ್ಧೌಷಧಿ) ವಿವಿಧ ಪಿಎಚ್​ಸಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಹೆಸರಿಗೆ ಸಮಾಜದಲ್ಲಿ ವೈದ್ಯರೆಂದು ಗುರುತಿಸಿಕೊಂಡಿದ್ದರಾದರೂ ಉತ್ತಮ ವೇತನ ಸಿಗದೆ ಗೌರವಯುತ ಬದುಕು ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರನ್ನು ಕಾಯಂಗೊಳಿಸಿಲ್ಲ. ಹಾಗಾಗಿ, ಕುಟುಂಬ ನಿರ್ವಹಣೆ ಕಷ್ಟಕರವೆನಿಸಿದೆ.

    ಸರ್ಕಾರಿ ಆಯುರ್ವೆದ ಆಸ್ಪತ್ರೆಗಳಲ್ಲಿ ನೇಮಕವಾಗಿರುವ ಆಯುಷ್ ವೈದ್ಯರು ಮಾತ್ರ ಎಂಬಿಬಿಎಸ್ ವೈದ್ಯರಷ್ಟೇ ಸಂಬಳ ಪಡೆಯುತ್ತಿದ್ದಾರೆ. ಆದರೆ, 17 ವರ್ಷಗಳಿಂದ ಪಿಎಚ್​ಸಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ಈವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಎಂಬಿಬಿಎಸ್ ವೈದ್ಯರಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜತೆಗೆ ಕಳೆದ ವರ್ಷದಿಂದ ಜೀವದ ಹಂಗು ತೊರೆದು ಕರೊನಾ ನಿಯಂತ್ರಣ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

    ಕಾಯಂ ಕೆಲಸ ಇಲ್ಲದೆ ಜೀವನ ಭದ್ರತೆಯೂ ಇಲ್ಲದೆ, ಸರ್ಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯವಿಲ್ಲದೆ 17 ವರ್ಷಗಳಿಂದ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರ ಕೂಗು ಈವರೆಗೆ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಮುಟ್ಟಿಲ್ಲ. ಇನ್ನಾದರೂ ಸರ್ಕಾರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರತ್ತ ಗಮನಹರಿಸಬೇಕಿದೆ.

    17 ವರ್ಷಗಳಿಂದ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಎಂಬಿಬಿಎಸ್ ವೈದ್ಯರಂತೆ ನಮಗೂ ಸಮಾನ ವೇತನ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರ ಈಗಲಾದರೂ ಕಣ್ಣುತೆರೆದು ನೋಡಿ ನಮ್ಮನ್ನು ಕಾಯಂಗೊಳಿಸಲಿ.

    | ಡಾ.ಎಸ್.ಅನಿಲ್ ಕುಮಾರ್ ಆಯುಷ್ ವೈದ್ಯ

    ಎನ್​ಎಚ್​ಎಂ ಅಡಿ ಗುತ್ತಿಗೆ ಆಧಾರದಲ್ಲಿ ಆಯುಷ್ ವೈದ್ಯರನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಆಯುಷ್ ವೈದ್ಯರು ಪಿಎಚ್​ಸಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರ ಪರಿಗಣಿಸಿ ಅವರನ್ನು ಕಾಯಂಗೊಳಿಸಿದರೆ ಒಳ್ಳೆಯದು. ಕರೊನಾ ನಿಯಂತ್ರಣ ಹೋರಾಟದಲ್ಲಿ ಆಯುಷ್ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸಿಗುವ ಎಲ್ಲ ಸೌಲಭ್ಯಗಳು ಇವೆ.

    | ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts