ಹುಬ್ಬಳ್ಳಿ : ಕೋವಿಡ್ ಸಾಂಕ್ರಾಮಿಕ ರೋಗವು ಕೆಲವೊಂದು ಕೆಟ್ಟ ಪರಿಣಾಮ ನೀಡಿದರೂ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಆಯುರ್ವೇದದಲ್ಲಿ ಮಾತ್ರ ಇದೆ ಎಂಬುದನ್ನು ಸಾಬೀತುಪಡಿಸಿತು ಎಂದು ಅಖಿಲ ಭಾರತ ಗೋ ಸೇವಾ ಗತಿವಿಧಿ ಪ್ರತಿಷ್ಠಾನದ ಮುಖ್ಯಸ್ಥ ಡಾ. ಅಜೀತ ಮಹಾಪಾತ್ರ ಹೇಳಿದರು.
ಹಳೇ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಅಖಿಲ ಭಾರತ ಗೋ ಸೇವಾ ಗತಿವಿಧಿ ಪ್ರತಿಷ್ಠಾನ ಹಾಗೂ ಅಖಿಲ ಕರ್ನಾಟಕ ಗೋ ಸೇವಾ ಪಂಚಗವ್ಯ ಚಿಕಿತ್ಸಾ ಪ್ರತಿಷ್ಠಾನದ ಸಹಯೋಗದೊಂದಿಗೆ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಕ್ಯಾನ್ಸರ್ ರೋಗಕ್ಕೆ ಹಾಗೂ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾದ ಪಂಚಗವ್ಯ ಚಿಕಿತ್ಸೆಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಔಷಧ ಸಸ್ಯಕ್ಕೆ ಅದರದೇ ಆದ ಮಹತ್ವ ಇದ್ದು, ಅದಕ್ಕೆ ಭೂ ಫಲವತ್ತತೆಯು ಸಹ ಕಾರಣವಾಗಿದೆ. ಇದರಿಂದಲೇ ಔಷಧಕ್ಕೆ ಹೆಚ್ಚಿನ ಬಲ ಇರುವುದೆಂಬುದನ್ನು ಅರಿತುಕೊಂಡು ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಗೋ ಸೇವಾ ಪಂಚಗವ್ಯ ಚಿಕಿತ್ಸಾ ಪ್ರತಿಷ್ಠಾನದ ಮುಖ್ಯಸ್ಥ ಡಾ. ಡಿ.ಪಿ. ರಮೇಶ ಹಾಗೂ ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿ ಉಪಸಭಾಪತಿ ಡಾ. ಪಿ.ಕೆ. ಗಂಡಮಾಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಮಾತನಾಡಿ, ಅತಿ ಕಠಿಣತರವಾದ ರೋಗಗಳನ್ನು ಗೋ ಮೂತ್ರದಿಂದ ಗುಣಪಡಿಸುವ ಮೂಲಕ ಈಗಾಗಲೇ ಅನೇಕ ಪ್ರಯೋಗಗಳನ್ನು ವಿದ್ಯಾರ್ಥಿಗಳ ಮೂಲಕ ಮಾಡಿಸಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.
ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ತ್ಯಾಗರಾಜ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಕಾರ್ಯದರ್ಶಿ ಸಂಜೀವ ಜೋಶಿ, ಮುಖ್ಯ ವೈದ್ಯರಾದ ಡಾ. ಉಷಾ ಹೊಸಮನಿ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯ ಡಾ. ಜೆ.ಆರ್. ಜೋಶಿ, ಉದ್ಯಮಿ ಸಿ.ಬಿ. ರೆಡ್ಡಿ, ದಕ್ಷಿಣ ಕನ್ನಡ ಗೋಸೇವಾ ಪ್ರತಿಷ್ಠಾನದ ಪ್ರವೀಣ ಸರಳಾಯ, ಉತ್ತರ ಕರ್ನಾಟಕ ಗೋ ಸೇವಾ ಪ್ರತಿಷ್ಠಾನದ ದತ್ತಾತ್ರೇಯ ಭಟ್ , ಕಲಬುರ್ಗಿ ವಿಭಾಗದ ಗೋ ಸೇವಾ ಮುಖ್ಯಸ್ಥ ಶ್ರೀಕಾಂತ ಮೋದಿ, ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ಆಸ್ಪತ್ರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.