More

    ಆಯುರ್ವೇದದಲ್ಲಿ ಎಲ್ಲ ಕಾಯಿಲೆಗಳಿಗಿದೆ ಪರಿಹಾರ

    ರಿಪ್ಪನ್‌ಪೇಟೆ: ಋಷಿ-ಮುನಿಗಳಿಂದ ತಿಳಿಯಲ್ಪಟ್ಟ ಆಯುರ್ವೇದ ಪದ್ಧತಿಯಲ್ಲಿ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಔಷಧೋಪಚಾರಗಳಿರುವುದು ನೂತನ ಸಂಶೋಧನೆಯಿಂದ ದೃಢಪಟ್ಟಿದ್ದು, ಜನರು ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಿಕೊಂಡು ಆರೋಗ್ಯವಂತಾಗಿರಿ ಎಂದು ಆನಂದಪುರದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಎನ್‌ಎಸ್‌ಕೆ ಆಯುರ್ವೇದ ಆಸ್ಪತ್ರೆಯಿಂದ ಭಾನುವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಜನರ ಜೀವನವು ಆಧುನೀಕರಣಕ್ಕೆ ಒಗ್ಗಿಕೊಂಡಿದ್ದು ತಮ್ಮ ಆರೋಗ್ಯದೆಡೆ ನಿರ್ಲಕ್ಷ್ಯವಹಿಸಲಾಗುತ್ತದೆ ಎಂದರು.
    ಅಂದಚೆಂದದ ಆಸೆಯಡೆಗೆ ಮನಸ್ಸು ಮಾಡುವ ಜನರು ತಮ್ಮಲ್ಲಿ ಇದ್ದುದ್ದನ್ನು ಬಿಟ್ಟು ಇಲ್ಲದಿದ್ದನ್ನು ಪಡೆಯುವ ಹಂಬಲಿಸುತ್ತಾರೆ. ಮಾನಸಿಕ ಸ್ವಾಸ್ಥೃವು ಶಾರೀರಿಕ ಸ್ವಾಸ್ಥೃವನ್ನು ಹಿಂಬಾಲಿಸಿಕೊಂಡು ಬರುತ್ತದೆ. ಆದ್ದರಿಂದ ದೇಹ, ಮನಸ್ಸುಗಳೆರಡು ಸದೃಢವಾಗಿರಬೇಕು. ಅಲೋಪತಿ ಇನ್ನಿತರ ಚಿಕಿತ್ಸಾ ಪದ್ಧತಿಯಲ್ಲಿ ಬಂದ ಕಾಯಿಲೆಯನ್ನು ತಕ್ಷಣದಲ್ಲಿ ಗುಣಪಡಿಸುವ ಔಷಧೋಪಚಾರವನ್ನು ನೀಡಲಾಗುತ್ತದೆ. ಕೆಲ ದಿನಗಳ ನಂತರ ದೇಹಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಮೂಲಕ ಮತ್ತೊಮ್ಮೆ ಕಾಯಿಲೆ ಬರುವ ಅಪಾಯವಿರುತ್ತದೆ ಎಂದು ಹೇಳಿದರು.
    ಭಾರತೀಯ ಮೂಲದ ಆಯುರ್ವೇದ ಪದ್ಧತಿಯಲ್ಲಿ ಬಂದ ಕಾಯಿಲೆಯ ಮೂಲವನ್ನು ಹುಡುಕಿ ಸಂಪೂರ್ಣ ರೋಗದ ಅಂಶವನ್ನು ನಿರ್ಮೂಲನೆ ಮಾಡಲಾಗುತ್ತದೆ. ವಿದೇಶಿಯರು ಸಹಿತ ಇತ್ತೀಚೆಗೆ ಆಯುರ್ವೇದದ ಅಧ್ಯಯನದೆಡೆ ಆಸಕ್ತಿಯನ್ನು ಹೊಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದಿನಿಂದಲೂ ಮಠಗಳು ಸಾಮಾಜಿಕ ಸಮಸ್ಯೆಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆಯನ್ನು ನೀಡಿ ಸೇವೆ ಸಲ್ಲಿಸುತ್ತಿವೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ಮತ್ತು ಸಿಬ್ಬಂದಿ ದೇವರ ಭಾವನೆಯಿಂದ ಕಂಡು ಸೇವಾಭಾವನೆಯಿಂದ ಕಾರ್ಯನಿರ್ವಹಿಸಬೇಕು. ಆಯುರ್ವೇದ ವೈದ್ಯ ಪದ್ಧತಿಯು ಮನುಷ್ಯರಿಗೆ ಬಹಳ ಉಪಯುಕ್ತವಾಗಿದ್ದು, ಸದ್ಬಳಕೆಯಿಂದ ಆರೋಗ್ಯಯುತ ದೇಹವನ್ನು ಸೃಷ್ಟಿಸಿಕೊಳ್ಳಬಹುದು ಎಂದರು.
    ಪಿಎಸ್‌ಐ ಪ್ರವೀಣ್, ಡಾ. ಪ್ರಭುದೇವ್, ನಜೀರ್ ಸಾಬ್, ಎಚ್.ಎಂ.ವರ್ತೇಶ, ಹಾಲಸ್ವಾಮಿಗೌಡ, ಗಣೇಶ್ ಕಾಮತ್, ಈಶ್ವರ ಮಳಕೊಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಉಮೇಳ ಕಾಂಬ್ಳೆ, ಶಿಕ್ಷಕರಾದ ಶ್ರೀಕಾಂತ್, ಚೇತತಾ, ಸುಜಾತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts