More

    ಹಿರೀಸಾವೆ ಹೋಬಳಿಯಾದ್ಯಂತ ಆಯುಧಪೂಜೆ ಆಚರಣೆ

    ಹಿರೀಸಾವೆ: ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ಹೋಬಳಿಯಾದ್ಯಂತ ಸೋಮವಾರ ಹಾಗೂ ಮಂಗಳವಾರ ಆಯುಧ ಪೂಜೆ ಆಚರಣೆ ವೈಭವದಿಂದ ನಡೆಯಿತು.

    ಕಾರು, ಬೈಕ್, ಬಸ್, ಟ್ರ್ಯಾಕ್ಟರ್, ಟಿಪ್ಪರ್ ಸೇರಿದಂತೆ ವಿವಿಧ ವಾಹನಗಳನ್ನು ತೊಳೆದು ಅರಿಶಿಣ-ಕುಂಕುಮವಿಟ್ಟು ಬಾಳೆ ಕಂದು ಕಟ್ಟಿ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಯಿತು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

    ಮನೆಗಳಲ್ಲಿ ಟಿವಿ, ಫ್ಯಾನ್, ಫ್ರಿಡ್ಜ್ ಸೇರಿದಂತೆ ವಿದ್ಯುತ್ ಉಪಕರಣಗಳನ್ನು ಶುಭ್ರಗೊಳಿಸಿ ಪೂಜೆ ಸಲ್ಲಿಸಲಾಯಿತು. ರೈತರು ವಿದ್ಯುತ್ ಪಂಪ್‌ಹೌಸ್, ನೀರೆತ್ತುವ ಮೋಟರ್ ಪಂಪ್‌ಸೆಟ್ ಹಾಗೂ ಟ್ರಾನ್ಸ್‌ಫಾರ‌್ಮರ್‌ಗಳಿಗೆ ಬಲಿಶಾಂತಿ ನೀಡಿದರು.

    ಮೋಟರ್ ಸರ್ವೀಸ್ ಸೆಂಟರ್, ಕಾರು ಮತ್ತು ಬೈಕ್ ಗ್ಯಾರೇಜ್, ಲೇತ್ ಮಷಿನ್‌ಶಾಪ್, ರಾಗಿ ಕ್ಲೀನಿಂಗ್ ಮಿಲ್, ಪೆಟ್ರೋಲ್ ಬಂಕ್, ಕೆಇಬಿ ಕಚೇರಿಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಆಯುಧಪೂಜೆ ಆಚರಿಸಲಾಯಿತು.

    ಕಳೆದ 20 ದಿನಗಳಿಂದ ಮಾರು ಕೇವಲ 10 ರಿಂದ 20 ರೂ. ಇದ್ದ ಸೇವಂತಿಗೆ ಹೂವು ಕಳೆದ 3 ದಿನಗಳಿಂದ 80 ರಿಂದ 100 ರೂ. ಗಡಿ ದಾಟಿತ್ತು. ಬಾಳೆಹಣ್ಣು ಕೆಜಿಗೆ 80 ರೂ., ಇನ್ನು ನಿಂಬೆಹಣ್ಣು 10 ರೂ.ಗೆ 2 ರಂತೆ ಲಭ್ಯವಿದ್ದು, ಬೂದುಗುಂಬಳ ಮಾತ್ರ ಕಡಿಮೆ ದರವಿತ್ತು.

    ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ, ಬೂಕದ ರಂಗನಾಥಸ್ವಾಮಿ, ಬೆಳಗಿಹಳ್ಳಿ ಶ್ರೀ ಕಂಬದ ನರಸಿಂಹಸ್ವಾಮಿ, ಅಮರಗಿರಿ ಶ್ರೀ ರಂಗನಾಥಸ್ವಾಮಿ, ಹಿರೀಸಾವೆ ಶ್ರೀ ಚೌಡೇಶ್ವರಿ, ಕಿರೀಸಾವೆ ಗಡಿ ಆಂಜನೇಯಸ್ವಾಮಿ ಹಾಗೂ ವಿವಿಧ ದೇಗುಲಗಳ ಆವರಣದಲ್ಲಿ ಭಕ್ತರು ತಮ್ಮ ವಾಹನಗಳಿಗೆ ಅರ್ಚಕರಿಂದ ಪೂಜೆ ಸಲ್ಲಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿದರು.

    ಮಂಗಳವಾರ ರಾತ್ರಿ ಹಿರೀಸಾವೆ ಗ್ರಾಮದೇವತೆ ಶ್ರೀ ಚೌಡೇಶ್ವರಿದೇವಿ ದಸರಾ ಮಹೋತ್ಸವ ಹಾಗೂ ಹೊಸಹಳ್ಳಿಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿಯ ಚಂದ್ರಮಂಡಲ ಉತ್ಸವ ಜರುಗಲಿದ್ದು, ಬುಧವಾರ ಬೆಳಗಿನ ಜಾವ ಬನ್ನಿಪೂಜೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts