More

    ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ ಸಂಪನ್ನ; ದೇಣಿಗೆ 2,500 ಕೋಟಿ ರೂ. ದಾಟುವ ನಿರೀಕ್ಷೆ

    ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ವಿಶ್ವ ಹಿಂದು ಪರಿಷತ್ ಕೈಗೊಂಡಿದ್ದ 44 ದಿನಗಳ ನಿಧಿ ಸಮರ್ಪಣ ಅಭಿಯಾನ ಸಂಪನ್ನವಾಗಿದೆ. 1500 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಇದಕ್ಕೂ 1,000 ಕೋಟಿ ರೂಪಾಯಿ ಹೆಚ್ಚು ಸಂಗ್ರಹವಾಗಿರುವ ನಿರೀಕ್ಷೆ ಇದೆ. ಶನಿವಾರದ ತಾತ್ಕಾಲಿಕ ಲೆಕ್ಕಾಚಾರ ಪ್ರಕಾರ 2,100 ಕೋಟಿ ರೂಪಾಯಿಗೂ ಅಧಿಕ ಸಂಗ್ರಹವಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಸದಸ್ಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದರು.

    ನಿಧಿ ಸಮರ್ಪಣ ಅಭಿಯಾನವು ಜನವರಿ 15ರ ಮಕರ ಸಂಕ್ರಾಂತಿಯ ದಿನ ಆರಂಭವಾಗಿತ್ತು. ಮಾಘ ಪೂರ್ಣಿಮೆಯ ಫೆ.27ರಂದು ಅಭಿಯಾನ ಸಂಪನ್ನಗೊಂಡಿದೆ. ದೇಶಾದ್ಯಂತ 44 ದಿನಗಳ ಅಭಿಯಾನದಲ್ಲಿ ಕನಿಷ್ಠ 55 ಕೋಟಿ ಜನರನ್ನು, 11 ಕೋಟಿ ಕುಟುಂಬಗಳನ್ನು ಅಭಿಯಾನದ ಮೂಲಕ ತಲುಪಲು ವಿಶ್ವ ಹಿಂದು ಪರಿಷತ್ ತೀರ್ವನಿಸಿತ್ತು.

    ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯ ಡಾ. ಅನಿಲ್ ಮಿಶ್ರಾ ನೀಡಿದ ಮಾಹಿತಿ ಪ್ರಕಾರ, ಜಗತ್ತಿನ ಅತಿದೊಡ್ಡ ದೇಣಿಗೆ ಸಂಗ್ರಹ ಅಭಿಯಾನ ಇದಾಗಿತ್ತು. ಅಂತಿಮ ಮೊತ್ತ 2,500 ಕೋಟಿ ರೂಪಾಯಿಗೂ ಅಧಿಕ ಆಗಬಹುದು. ಹಲವು ರಾಜ್ಯಗಳ ದೇಣಿಗೆ ಲೆಕ್ಕಚಾರ ಇನ್ನೂ ತಲುಪಿಲ್ಲ. ಎಲ್ಲ ಧರ್ಮ, ಜಾತಿ ಮತ್ತು ಸಮುದಾಯದ ಎಲ್ಲೆ ಮೀರಿದ ಈ ಅಭಿಯಾನ ವಿಶಿಷ್ಟವಾದುದಾಗಿತ್ತು. ವಿವಿಧ ಸ್ತರದ ಜನರು ಸ್ವಯಂ ಪ್ರೇರಣೆಯಿಂದ ಇದರಲ್ಲಿ ಭಾಗಿಯಾಗಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ.

    ಅಯೋಧ್ಯೆಗೆ ವಿಶ್ವದರ್ಜೆಯ ನೋಟ: ಇತಿಹಾಸ ಪ್ರಸಿದ್ಧ ಪುರಾತನ ನಗರದಲ್ಲಿ ಶ್ರೀ ರಾಮ ಮಂದಿರ ನಿರ್ವಣದ ಜತೆಗೆ ನಗರಕ್ಕೆ ವಿಶ್ವದರ್ಜೆಯ ಲುಕ್ ಕೊಡುವ ಪ್ರಯತ್ನವೂ ಜಾರಿಯಲ್ಲಿದೆ. ಈ ಸಂಬಂಧ ಕೆನಡಾದ ಎಲ್​ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಪ್ರೖೆವೇಟ್ ಲಿಮಿಟೆಡ್ ಮತ್ತು ಭಾರತದ ಲಾರ್ಸೆನ್ ಆಂಡ್ ಟ್ಯೂಬ್ರೋ, ಕುಕ್ರೇಜಾ ಆರ್ಕಿಟೆಕ್ಸ್ ಕಂಪನಿಗಳು ಈಗಾಗಲೇ ಅಯೋಧ್ಯೆಯ ಅಭಿವೃದ್ಧಿಗೆ ಕರಡು ವಿಷನ್ ಡಾಕ್ಯುಮೆಂಟ್​ಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಅಯೋಧ್ಯೆಯ ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈಗಾಗಲೇ 250 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

    ಮಂದಿರ ನಿರ್ಮಾಣಕ್ಕೆ ವೈದಿಕ ವಿಧಾನ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಸಂಬಂಧಿಸಿ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಎರಡು ದಿನಗಳ ಸಭೆಯನ್ನು ಏರ್ಪಡಿಸಿತ್ತು. ಇದು ಗುರುವಾರ ಮತ್ತು ಶುಕ್ರವಾರ ನಡೆಯಿತು. ಇದರಲ್ಲಿ ಮಂದಿರ ನಿರ್ವಣಕ್ಕೆ ವೈದಿಕ ವಿಧಾನ ಅನುಸರಿಸುವ ವಿಚಾರ ಚರ್ಚೆಯಾಗಿದೆ. ಚೆನ್ನೈನ ಪ್ರಸಿದ್ಧ ಇತಿಹಾಸಕಾರ, ವಾಸ್ತುತಜ್ಞ, ಎಪಿಗ್ರಾಫಿಸ್ಟ್ ಪದ್ಮಭೂಷಣ ಡಾ. ನಾಗಸ್ವಾಮಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

    ಆನ್​ಲೈನ್ ಮೂಲಕ ದೇಣಿಗೆ: ಅಯೋಧ್ಯೆ ರಾಮ ಮಂದಿರ ನಿರ್ವಣಕ್ಕೆ ಮನೆಮನೆಗೆ ತೆರಳಿ ನಿಧಿ ಸಂಗ್ರಹಿಸುವ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನು ಮುಂದೆ ದೇಣಿಗೆ ನೀಡಬಯ ಸುವವರು ಆನ್​ಲೈನ್ ಮೂಲಕ ನೀಡಬಹುದು. ಈ ಕುರಿತು ಪ್ರತಿಕ್ರಿಯಿಸಿದ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ಸಂಚಾಲಕ ನಾ. ತಿಪ್ಪೇಸ್ವಾಮಿ, ಬೆಂಗಳೂರಿ ನಲ್ಲಿರುವ ವಿಶ್ವ ಹಿಂದು ಪರಿಷತ್ ಕಚೇರಿಗೆ ತೆರಳಿ ಇನ್ನು ನಾಲ್ಕೈದು ದಿನ ಹಣ ನೀಡಬಹುದು. ಲೆಕ್ಕಪತ್ರ ಅಂತಿಮಗೊಂಡ ನಂತರ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗುತ್ತದೆ. ರಾಮ ಮಂದಿರ ಟ್ರಸ್ಟ್​ನ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಿರುವ ಬ್ಯಾಂಕ್ ಖಾತೆಗೆ ಹಣ ನೀಡಬಹುದು ಎಂದಿದ್ದಾರೆ.

    ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಖಾತೆಗೆ ಇದುವರೆಗೆ 1,900 ಕೋಟಿ ರೂಪಾಯಿ ಜಮೆ ಆಗಿದೆ. ಇದು 2,000 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಅನೇಕ ದೇಣಿಗೆ ಚೆಕ್​ಗಳು ಇನ್ನೂ ಜಮೆಯಾಗಿಲ್ಲ. ಕೆಲವು ಚೆಕ್​ಗಳ ಬ್ಯಾಂಕ್ ಕ್ಲಿಯರೆನ್ಸ್ ಪ್ರಗತಿಯಲ್ಲಿದೆ. ಎಲ್ಲ ಅಂತಿಮಗೊಂಡ ಬಳಿಕ ನಿಖರ ಮೊತ್ತ ತಿಳಿಸಲಾಗುವುದು.

    | ಸ್ವಾಮಿ ಗೋವಿಂದ ಗಿರಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಚಾಂಚಿ

    ‘ಮೋದಿ ಹೆಮ್ಮೆಯ ಚಾಯ್​ವಾಲಾ!’ ಪ್ರಧಾನಿಯನ್ನು ಹೊಗಳಿದ ಗುಲಾಮ್​ ನಬಿ ಆಜಾದ್

    ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts