More

    ಬೆಂಗಳೂರು ಟೆಸ್ಟ್‌ಗೆ ಅಕ್ಷರ್ ಪಟೇಲ್ ಫಿಟ್, ಹೆಚ್ಚಿದ ಭಾರತ ತಂಡದ ಬಲ

    ಬೆಂಗಳೂರು: ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಪ್ರವಾಸಿ ಶ್ರೀಲಂಕಾ ವಿರುದ್ಧ ಶನಿವಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ 2ನೇ ಹಾಗೂ ಅಹರ್ನಿಶಿ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಇದರಿಂದಾಗಿ ಮತ್ತೋರ್ವ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ.

    ಕಣಕಾಲಿನ ಗಾಯದಿಂದಾಗಿ ಅಕ್ಷರ್ ಮೊಹಾಲಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದಲ್ಲದೆ ಇತ್ತೀಚೆಗೆ ಅವರಿಗೆ ಕೋವಿಡ್ ಸೋಂಕು ಕೂಡ ಕಾಣಿಸಿಕೊಂಡಿತ್ತು. ಆದರೆ ಇದೀಗ ಗುಜರಾತ್‌ನ 28 ವರ್ಷದ ಆಟಗಾರ ಅಕ್ಷರ್ ಪಟೇಲ್ ಸಂಪೂರ್ಣ ಫಿಟ್ ಆಗಿದ್ದು, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಆಡಲು 11ರ ಬಳಗದ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.

    ಇದುವರೆಗೆ ಆಡಿರುವ 5 ಟೆಸ್ಟ್‌ಗಳಲ್ಲಿ 36 ವಿಕೆಟ್ ಕಬಳಿಸಿರುವ ಅಕ್ಷರ್ ಸೇರ್ಪಡೆಯಿಂದ ಭಾರತ ತಂಡದ ಸ್ಪಿನ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯ ಮಾರಕ ಸ್ಪಿನ್ ದಾಳಿ ಎದುರು ಮೂರೇ ದಿನಗಳಲ್ಲಿ ಮೊಹಾಲಿಯಲ್ಲಿ ಶರಣಾಗಿರುವ ಶ್ರೀಲಂಕಾವನ್ನು ಅಕ್ಷರ್ ಮತ್ತಷ್ಟು ಕಾಡಬಲ್ಲರು. ಮೊಹಾಲಿಯಲ್ಲಿ ಮೂರನೇ ಸ್ಪಿನ್ನರ್ ಆಗಿ ಆಡಿದ್ದ ಜಯಂತ್ ಯಾದವ್ ಸ್ಥಾನವನ್ನು ಅಕ್ಷರ್ ತುಂಬುವ ನಿರೀಕ್ಷೆ ಇದೆ. ಮೊಹಾಲಿಯಲ್ಲಿ ಅಶ್ವಿನ್-ಜಡೇಜಾ 15 ವಿಕೆಟ್ ಹಂಚಿಕೊಂಡಿದ್ದರೆ, ಜಯಂತ್ ಒಂದೂ ವಿಕೆಟ್ ಪಡೆದಿರಲಿಲ್ಲ.

    ಹೊನಲುಬೆಳಕಿನಡಿ ನಡೆಯಲಿರುವ ಬೆಂಗಳೂರು ಟೆಸ್ಟ್ ಪಂದ್ಯವನ್ನು ಪಿಂಕ್ ಎಸ್‌ಜಿ ಚೆಂಡಿನಲ್ಲಿ ಆಡಲಾಗುತ್ತದೆ. ಇದು ಕೂಡ ಅಕ್ಷರ್ ಆಯ್ಕೆ ಸಾಧ್ಯತೆ ಹೆಚ್ಚಿಸಿದೆ. ಕಳೆದ ವರ್ಷ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಅಹರ್ನಿಶಿ ಟೆಸ್ಟ್‌ನಲ್ಲಿ ಅಕ್ಷರ್ 70 ರನ್‌ಗೆ 11 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾಗಿದ್ದರು. ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲ ಸಾಮರ್ಥ್ಯದಿಂದಲೂ ಅಕ್ಷರ್ ನೆಚ್ಚಿನ ಆಯ್ಕೆ ಎನಿಸಿದ್ದಾರೆ.

    ಜೆರ್ಸಿ ಪ್ರಾಯೋಜಕತ್ವ ವಿಸ್ತರಣೆ
    ಆನ್‌ಲೈನ್ ಶಿಕ್ಷಣದ ಆ್ಯಪ್ ‘ಬೈಜುಸ್’ ಜತೆಗಿನ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು 1 ವರ್ಷದ ಅವಧಿಗೆ ವಿಸ್ತರಿಸಲು ಬಿಸಿಸಿಐ ನಿರ್ಧರಿಸಿದೆ. ಈ ಹಿಂದಿನ ಒಪ್ಪಂದದ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಅಂದರೆ ಮಾರ್ಚ್ 31ರಂದು ಅಂತ್ಯಗೊಳ್ಳಬೇಕಾಗಿತ್ತು. ಪ್ರಾಯೋಜಕತ್ವ ಒಪ್ಪಂದದ ಅನ್ವಯ ಬೈಜುಸ್ ಕಂಪನಿ, ಭಾರತ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಆಡುವ ಪ್ರತಿ ಪಂದ್ಯಕ್ಕೆ 4.61 ಕೋಟಿ ರೂ. ಮತ್ತು ಐಸಿಸಿ ಸಹಿತ ಇತರ ಟೂರ್ನಿಗಳಲ್ಲಿ ಆಡುವ ಪ್ರತಿ ಪಂದ್ಯಕ್ಕೆ 1.56 ಕೋಟಿ ರೂ. ಪಾವತಿಸುತ್ತಿದೆ.

    ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts